Bengaluru roads: ಬೆಂಗಳೂರಿನ 227 ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್: ಟ್ರಾಫಿಕ್ ಕಂಟ್ರೋಲ್‌ಗೆ ಸಹಕಾರಿ!
ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ವಿಪರೀತವಾಗುತ್ತಿದ್ದು, ವಾಹನಗಳ ಸಂಖ್ಯೆಗೆ ಅನುಗುಣವಾಗಿ ಬೆಂಗಳೂರಿನ ರಸ್ತೆಗಳು ಅಭಿವೃದ್ಧಿಯಾಗಿಲ್ಲ ಎನ್ನುವ ಮಾತಿದೆ. ಅಲ್ಲದೆ ಬೆಂಗಳೂರಿನಲ್ಲಿ ಸಣ್ಣ ಮಳೆ ಬಂದರೂ ರಸ್ತೆಗಳಲ್ಲಿ ರಸ್ತೆಗುಂಡಿ ಬಿದ್ದು, ಸಾಕಷ್ಟು ಸಮಸ್ಯೆ ಆಗುತ್ತದೆ. ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಳವಾಗುತ್ತಲ್ಲೇ ಇದೆ.
ಇದರಿಂದ ಈಗೆಲ್ಲ ಪೀಕ್ ಅವರ್ ಅಲ್ಲದೇ ಸಾಮಾನ್ಯ ಅವಧಿಯಲ್ಲೂ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ವಿಪರೀತವಾಗುತ್ತಿದೆ. ಈ ರೀತಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಹೆಚ್ಚಳವಾಗುವುದಕ್ಕೆ ಬೆಂಗಳೂರಿನ ಕೆಟ್ಟ ರಸ್ತೆಗಳು ಸಹ ಪ್ರಮುಖ ಕಾರಣವಾಗಿದೆ. ಇದೀಗ ಬೆಂಗಳೂರಿನಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ವಾಹನಗಳು ಸಂಚರಿಸುವ ಹಾಗೂ ಟ್ರಾಫಿಕ್ ಜಾಮ್ ಆಗುವ 337 ಕಿ.ಮೀ ಉದ್ದದ 227 ಪ್ರಮುಖ ರಸ್ತೆಗಳನ್ನು ಅಭಿವೃದ್ಧಿ (ಮೇಲ್ದರ್ಜೆಗೇರಿಸಲು) ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ನಿರ್ಧರಿಸಿದೆ.

ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ರಸ್ತೆಗಳಲ್ಲೇ ವಾಹನ ಸವಾರರು ತಾಸುಗಟ್ಟಲೆ ಕಳೆಯುವಂತೆ ಆಗಿದೆ. ಈಚೆಗೆ 1.04 ಲಕ್ಷಕ್ಕೂ ಅಧಿಕ ವಾಹನಗಳ ರಿಜಿಸ್ಟ್ರೇಷನ್ ಆಗಿದೆ. ಈ ರೀತಿ ಪ್ರತಿ ವರ್ಷವೂ ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಲ್ಲೇ ಇರುವುದು ವಾಹನ ಸವಾರರು ಹಾಗೂ ಸಾರ್ವಜನಿಕರಿಗೂ ಸಮಸ್ಯೆ ಆಗುತ್ತಿದೆ.
ಅದರಲ್ಲೂ ಬೆಂಗಳೂರಿನಲ್ಲಿ ಹೆಚ್ಚು ವಾಹನಗಳು ಸಂಚಾರ ಮಾಡುವ ಭಾಗಗಳಲ್ಲೇ ರಸ್ತೆಗಳು ಸರಿಯಾಗಿ ಇಲ್ಲ. ಉದಾ: ಬೆಂಗಳೂರಿನ ಐಟಿ - ಬಿಟಿ ಹಾಗೂ ಕಂಪನಿಗಳು ಜಾಸ್ತಿ ಇರುವ ಹಲವು ರಸ್ತೆಗಳು ಅಧ್ವಾನವಾಗಿವೆ. ಈ ರಸ್ತೆಗಳನ್ನು ಅಭಿವೃದ್ಧಿ ಮಾಡಬೇಕು ಎಂದು ಬೆಂಗಳೂರಿಗರು ಆಗ್ರಹಿಸುತ್ತಲ್ಲೇ ಇದ್ದಾರೆ. ಈ ವಿಷಯದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮಹತ್ವ ನಿರ್ಧಾರವನ್ನು ಮಾಡಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರು ವಾಹನ ಸವಾರರು ಆರಾಮಾಗಿ ವಾಹನ ಚಲಾಯಿಸಲು ಇದು ಸಹಕಾರಿಯಾಗಲಿದೆ.

ಬೆಂಗಳೂರಿನಲ್ಲಿನ ಪ್ರಮುಖ ರಸ್ತೆಗಳನ್ನು ಪಾಲಿಕೆಯು ಎರಡು ವಿಭಾಗವಾಗಿ ವಿಭಜಿಸಿದೆ. ಅದರಲ್ಲಿ ಮುಖ್ಯ ರಸ್ತೆಗಳು (ಆರ್ಟೀರಿಯಲ್) ಹಾಗೂ ಅತಿ ಮುಖ್ಯ ರಸ್ತೆಗಳು (ಸಬ್ ಆರ್ಟೀರಿಯಲ್) ರಸ್ತೆಗಳು ಎಂದಿದೆ. ಈ ರಸ್ತೆಗಳಲ್ಲಿ ಹೆಚ್ಚು ವಾಹನ ಸಂಚಾರ, ನಗರದ ಹೃದಯಭಾಗ ಹಾಗೂ ಪ್ರಮುಖ ರಸ್ತೆಗಳಾಗಿವೆ.
ಕೆಲವು ರಸ್ತೆಗಳಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ರಸ್ತೆಗಳನ್ನು ಇಂದಿನ ವಾಹನ ಸಂಚಾರಕ್ಕೆ ಅವಶ್ಯಕತೆ ಇರುವಂತೆ ಅಭಿವೃದ್ಧಿ ಮಾಡುವ ಅವಶ್ಯಕತೆ ಇದೆ. ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿ ಮಾಡುವುದು ಇಂದಿನ ತುರ್ತು ಕೆಲಸವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರಮುಖ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ಪಾಲಿಕೆಯ ಅಧಿಕಾರಿಗಳು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಒಟ್ಟು 8 ವಲಯಗಳಿದ್ದು, ವಲಯಗಳ ಹಂತದಲ್ಲೇ ಕೆಲವು ಪ್ರಮುಖ ರಸ್ತೆಗಳನ್ನು ನಿರ್ವಹಿಸಲಾಗುತ್ತಿದೆ. ಇನ್ಮುಂದೆ ಬೆಂಗಳೂರಿನಲ್ಲಿ ವಲಯ ಮಟ್ಟದಲ್ಲಿ ನಿರ್ವಹಿಸಲಾಗುತ್ತಿರುವ ಪ್ರಮುಖ ಹಾಗೂ ಆಯ್ದ ರಸ್ತೆಗಳನ್ನು ಮುಖ್ಯ ಹಾಗೂ ಅತಿ ಮುಖ್ಯ ರಸ್ತೆಗಳ ಅಧಿಕಾರ ವ್ಯಾಪ್ತಿಗೆ ಸೇರಿಸುವುದಕ್ಕೆ ನಿರ್ಧರಿಸಲಾಗಿದೆ. ಹೀಗಾಗಿ, ಬೆಂಗಳೂರಿನ ಪ್ರಮುಖ 337 ಕಿ.ಮೀ ಉದ್ದದ 227 ರಸ್ತೆಗಳನ್ನು ಗುರುತಿಸಲಾಗಿದೆ.
ಇನ್ನು ಬೆಂಗಳೂರಿನ ಹೊರ ವಲಯದಲ್ಲೇ ಹೆಚ್ಚು ರಸ್ತೆಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಬೆಂಗಳೂರಿನ ಹೊರ ವಲಯದ ರಸ್ತೆಗಳು ಪಾಲಿಕೆಗೆ ಸೇರ್ಪಡೆಯಾದ ಮೇಲೆ ಅವುಗಳ ಅಭಿವೃದ್ಧಿ ಆಗಿಲ್ಲ ಎನ್ನುವ ಆರೋಪ ಇದೆ.
ಅಲ್ಲದೆ ಬೆಂಗಳೂರಿನ ಹೊರವಲಯಗಳಾದ ಯಲಹಂಕ, ಬೊಮ್ಮನಹಳ್ಳಿ, ಮಹದೇವಪುರ,ಆರ್‌ಆರ್‌ನಗರ ಹಾಗೂ ದಾಸರಹಳ್ಳಿ ವಲಯಗಳ ಕೆಲವು ರಸ್ತೆಗಳನ್ನು ಅಭಿವೃದ್ಧಿಪಡಿಸುವ ಅಗತ್ಯ ಇದೆ. ಇದೀಗ ಈ ರಸ್ತೆಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಪಾಲಿಕೆ ಮುಂದಾಗಿದೆ. ಅಲ್ಲದೆ ಬೆಂಗಳೂರಿನ ಹೊರ ವಲಯದೊಂದಿಗೆ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯದ ಪ್ರಮುಖ ರಸ್ತೆಗಳ ಅಭಿವೃದ್ಧಿಯೂ ಆಗಲಿದೆ.
ಇದರಿಂದ ಲಾಭವೇನು: ಬೆಂಗಳೂರಿನ ರಸ್ತೆಗಳನ್ನು ಮುಖ್ಯರಸ್ತೆಗಳ ಪಟ್ಟಿಗೆ ಸೇರಿಸುವುದರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ವಾರ್ಡ್ ರಸ್ತೆಗಳ ಅಭಿವೃದ್ಧಿ ಮೀಸಲಿಡುತ್ತಿರುವ ಅನುದಾನಕ್ಕಿಂತಲೂ ಮುಖ್ಯ ರಸ್ತೆಗಳಿಗೆ ನೀಡುವ ಅನುದಾನ ಜಾಸ್ತಿ ಆಗಲಿದೆ. ಇನ್ನು ಬೆಂಗಳೂರಿನ ಈ ರಸ್ತೆಗಳಿಗೆ ರಾಜ್ಯ ಸರ್ಕಾರ ಸಹ ಅಭಿವೃದ್ಧಿಗೆ ಹಾಗೂ ಮೂಲಸೌಕರ್ಯ ವಿಭಾಗದ ಅಡಿಯಲ್ಲಿ ವಿಶೇಷ ಯೋಜನೆಗಳಿಗೆ ಸಂಬಂಧಿಸಿದಂತೆ ಅನುದಾನ ಕೊಡುತ್ತದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಬೆಂಗಳೂರಿನ ಪ್ರಮುಖ ರಸ್ತೆಗಳು ಅಭಿವೃದ್ಧಿಯಾಗಿ, ಟ್ರಾಫಿಕ್ ಫ್ರೀ ರಸ್ತೆ ನಿರ್ಮಾಣವಾಗುವ ಕನಸು ಹೆಚ್ಚಾಗಿದೆ.












Click it and Unblock the Notifications