Namma Metro: ಪ್ರಯಾಣ ದರ ಏರಿಕೆ ಬಗ್ಗೆ ಅಂಜುಮ್ ಪರ್ವೇಜ್ ಪ್ರತಿಕ್ರಿಯೆ
ಬೆಂಗಳೂರು, ಜೂನ್ 09: ರಾಜ್ಯದಲ್ಲಿ ಹೊಸದಾಗಿ ಬಂದ ಕಾಂಗ್ರೆಸ್ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿದೆ. ನಿರ್ವಹಣಾ ವೆಚ್ಚ ಹೆಚ್ಚಾಗಿದ್ದರೂ ಸಹ ವೇಗದ ಸಾರಿಗೆಯಾಗಿರುವ ಬೆಂಗಳೂರು 'ನಮ್ಮ ಮೆಟ್ರೋ' ರೈಲು ಪ್ರಯಾಣ ದರ ಏರಿಕೆ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ.
ವಿದ್ಯುತ್ ದರ ಪರಿಷ್ಕರಣೆ, ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿದೆ. ಆದರೂ ಸಹ ಮೆಟ್ರೋ ಪ್ರಯಾಣ ಶುಲ್ಕ ಏರಿಕೆ ಮಾಡುವ ಚಿಂತನೆ ಇಲ್ಲ ಎಂದು ನಮ್ಮ ಮೆಟ್ರೋದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮೂಲಕ ಸಾರ್ವಜನಿಕರಲ್ಲಿ ದರ ಏರಿಕೆ ಆತಂಕವನ್ನು ದೂರು ಮಾಡಿದ್ದಾರೆ.

ನಮ್ಮ ಮೆಟ್ರೋ ಶುಲ್ಕ ಹೆಚ್ಚಿಸುವುದು ನಿಗಮದ ಕೈಯಲ್ಲಿ ಇಲ್ಲ. ದರ ಹೆಚ್ಚಳವೇ ಆಗಲಿ, ಇಲ್ಲ ಕಡಿಮೆ ಮಾಡುವುದೇ ಆಗಲಿ ಅದನ್ನ ನಿಗಮ (BMRCL) ನಿರ್ಧರಿಸುವುದಿಲ್ಲ. ಮೆಟ್ರೋ ಟಿಕೆಟ್ ದರ ಪರಿಷ್ಕರಣೆ ಬಗ್ಗೆ ಸಮಿತಿ ರಚಿಸಿ ವರದಿ ಪಡೆದು ಪ್ರಸ್ತಾವನೆ ಸಲ್ಲಿಸಲು ನಮಗೆ ಅವಕಾಶ ಇದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಕೇಂದ್ರ ಸಾರಿಗೆ ಇಲಾಖೆಯು ದರ ಏರಿಕೆಯ ಅನುಕೂಲ, ಅನನಕೂಲ ಬಗ್ಗೆ ಚಿಂತನೆ ನಡೆಸುತ್ತದೆ. ಆ ಅಧಿಕಾರ ಅವರಿಗಿದೆ. ಹೈಕೋರ್ಟ್ ವಿಶ್ರಾಂತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚನೆ ಆಗಲಿದೆ. ಸಮಿತಿಗಳು ಸಲ್ಲಿಸುವ ವರದಿ ಪರಿಗಣಿಸಿ ದರ ಪರಿಷ್ಕರಣೆ ಆಗಬಹುದು. ಆದರೆ ನಿಗಮದಿಂದ ದರ ಏರಿಕೆ ಬಗ್ಗೆ ಯಾವುದೇ ಪ್ರಸ್ತಾವನೆ ಸಲ್ಲಿಸಲಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮಹಿಳೆಯರ ಉಚಿತ ಬಸ್ ಪ್ರಯಾಣ: ಮೆಟ್ರೋಗೆ ಆದಾಯ ಕುಸಿತ?
ಇದೇ ತಿಂಗಳು ಜೂನ್ 11ರಂದು ಸರ್ಕಾರವು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡಲಿದೆ. ನಂತರ ಕೆಲ ಬಸ್‌ಗಳ ಹೊರತಾಗಿ ಉಳಿದೆಲ್ಲ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಸಂಚರಿಸಲಿದ್ದಾರೆ. ಈ ಸಂಬಂಧ ಮೆಟ್ರೋ ತನ್ನ ಒಂದಿಷ್ಟು ಮಹಿಳಾ ಪ್ರಯಾಣಿಕರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಇದರಿಂದ ನಮ್ಮ ಮೆಟ್ರೋ ಆದಾಯ ಕಡಿಮೆಯಾಗುವ ಸಂಭವವಿದೆ.

ಸದ್ಯಕ್ಕೆ ಬಿಎಂಆರ್‌ಸಿಎಲ್‌ನಿಂದ ಮೆಟ್ರೋ ಪ್ರಯಾಣದ ದರ ಏರಿಕೆ ಇಲ್ಲ. ಮುಂದಿನ ದಿನಗಳಲ್ಲಿ ಕೈಗೊಳ್ಳುವ ನಿರ್ಧಾರದ ಬಗ್ಗೆ ಕಾದು ನೋಡಬೇಕಿದೆ. ಸುಮಾರು 12 ವರ್ಷಗಳಿಂದ ಮೆಟ್ರೋ ಸೇವೆ ನೀಡುತ್ತಿರುವ ನಮ್ಮ ಮೆಟ್ರೋ 2023ಕ್ಕೆ ವರೆಗೆ ಮಾರ್ಗ ವಿಸ್ತರಣೆ ಆಗಿದೆ. ಹಲವೆಡೆ ಹೊದ ಮೆಟ್ರೋ ಲೈನ್‌ಗಳು, ಮಾರ್ಗ ವಿಸ್ತರಣೆ ಕಾರ್ಯಗಳು ನಡೆಯಲಿವೆ ಎಂದು ಸುವರ್ಣ ನ್ಯೂಸ್ ವರದಿ ಮಾಡಿದೆ.












Click it and Unblock the Notifications