Bengaluru: ಒಂದೇ ಮಾರ್ಗದಲ್ಲಿ ಬಿಬಿಎಂಪಿ-ನಮ್ಮ ಮೆಟ್ರೋ ಯೋಜನೆ ಮುಖಾಮುಖಿ? ಎಲ್ಲಿ-ಯೋಜನೆಗಳ ವಿವರ
ಬೆಂಗಳೂರು, ಜನವರಿ 31: ಬಿಬಿಎಂಪಿಯು ಬೆಂಗಳೂರಿನ ಮೊದಲ ಸುರಂಗ ಮಾರ್ಗವನ್ನು ಪ್ರಸ್ತಾಪಿಸಿದೆ. ಇತ್ತ ಬೆಂಗಳೂರು ನಮ್ಮ ಮೆಟ್ರೋವು ಅದೇ ಮಾರ್ಗದಲ್ಲಿ ಸುರಂಗ ಮಾರ್ಗ ಪ್ರಸ್ತಾಪಿಸಿದೆ. ಹೀಗಾದರೆ ಯೋಜನೆಗಳ ಕತೆ ಏನು? ಇವು ಸಾಕಾರಗೊಳ್ಳುತ್ತವೆಯೇ?, ಇಲಾಖೆಗಳ ಮಧ್ಯೆ ಸಮನ್ವಯತೆ ಇರಲಿಲ್ಲವೇ ಎನ್ನುತ್ತಿದ್ದಾರೆ ಬೆಂಗಳೂರಿನ ಜನತೆ.
ಹೌದು, ಬೆಂಗಳೂರಿನ ಒಂದೇ ಮಾರ್ಗದಲ್ಲಿ ಎರಡು ಪ್ರತ್ಯೇಕ ಸುರಂಗ ಯೋಜನೆಗಳು ಮುಖಾ ಮುಖಿ ಆಗಲಿವೆ. ಅಚ್ಚರಿ ಎನಿಸಿದರೂ ಇದು ಸತ್ಯ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ (KIA) ನಗರವನ್ನು ಸಂಪರ್ಕಿಸುವ ಬಳ್ಳಾರಿ ರಸ್ತೆಯ ಉದ್ದಕ್ಕೂ ಅಂದರೆ ಮೇಖ್ರಿ ವೃತ್ತದಿಂದ ಹೆಬ್ಬಾಳದವರೆಗೆ ನಾಲ್ಕು ಪಥದ ರಸ್ತೆ ಸುರಂಗ ಮಾರ್ಗದ ಕಾರ್ಯಸಾಧ್ಯತೆಯ ಅಧ್ಯಯನ ಆರಂಭಿಸಿದೆ.

ಡಿಪಿಆರ್ ಸಿದ್ಧಪಡಿಸಿರುವ ಮೆಟ್ರೋ
ಮತ್ತೊಂದೆಡೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮೊದಲೇ ಉದ್ದೇಶಿಸಿದಂತೆ ಸರ್ಜಾಪುರ-ಹೆಬ್ಬಾಳ ಮೆಟ್ರೋ ಯೋಜನೆಯ (ಹಂತ III A) ಭಾಗವಾಗಿ ಅದೇ ಪ್ರದೇಶದಲ್ಲಿ ಮೆಟ್ರೋ ಸುರಂಗವನ್ನು ನಿರ್ಮಿಸಲು ವಿವರವಾದ ಯೋಜನಾ (ಡಿಪಿಆರ್) ವರದಿ ಸಿದ್ಧಪಡಿಸಿದೆ ಎಂದು TOI ವರದಿ ಮಾಡಿದೆ.
BMRCL ಪ್ರಕಾರ, ಎಲಿವೇಟೆಡ್ ಕಾರಿಡಾರ್ ಸರ್ಜಾಪುರ ಕಡೆಯಿಂದ ಪ್ರಾರಂಭವಾಗಿ ಕೋರಮಂಗಲ ತಲುಪಿದ ನಂತರ ಭೂಗತವಾಗಿ ಮೆಟ್ರೋ ರೈಲುಗಳು ಸಂಚರಿಸುವಂತೆ ಯೋಜನೆ ರೂಪಿಸಿದೆ. ಅಲ್ಲದೇ ಹೆಬ್ಬಾಳ ಕಡೆಗೆ ಹೋಗುವ ಮೊದಲು ಪಶುವೈದ್ಯಕೀಯ ಕಾಲೇಜು ನಂತರ ಮತ್ತೆ ಎಲಿವೇಟೆಡ್ ಕಾರಿಡಾರ್ ಆಗುತ್ತದೆ. ಎಸ್ಟೀಮ್ ಮಾಲ್, ಹೆಬ್ಬಾಳ ಮೇಲ್ಸೇತುವೆ, ಮೇಖ್ರಿ ವೃತ್ತದ ಬಳಿಯ ಅರಮನೆ ಮೈದಾನದ ಬಳಿ ಸುರಂಗ ರಸ್ತೆಗೆ ಪ್ರವೇಶ ಮತ್ತು ನಿರ್ಗಮನವನ್ನು ಒದಗಿಸುವುದು ಬಿಬಿಎಂಪಿಯ ಯೋಚನೆಯಾಗಿದೆ.
ಬಿಬಿಎಂಪಿ ಯೋಜನೆ ಬಗ್ಗೆ ಮೆಟ್ರೋ ಪ್ರತಿಕ್ರಿಯೆ
ಉದ್ದೇಶಿತ ಬಿಬಿಎಂಪಿಯ ರಸ್ತೆ ಸುರಂಗ ಮಾರ್ಗ ಹಾಗೂ ಅದರ ಜೋಡಣೆ ಬಗ್ಗೆ ನಮಗೆ ಮಾಹಿತಿ ಇಲ್ಲ. ಅವರು ತಮ್ಮ ಯೋಜನೆಗಳನ್ನು ನಮ್ಮೊಂದಿಗೆ ಹಂಚಿಕೊಂಡಿಲ್ಲ, ಈ ಮಾಹಿತಿ ನೀಡಿದ ಬಳಿಕವೇ ನಾವು ಈ ಬಗ್ಗೆ ಪ್ರತಿಕ್ರಿಯಿಸಬಹುದು ಎಂದು ಬಿಎಂಆರ್‌ಸಿಎಲ್ ಹೇಳಿಕೊಂಡಿದೆ.

ನಮ್ಮ ಮೆಟ್ರೋ ಈಗಾಗಲೇ ಸಿದ್ಧಪಡಿಸಿಕೊಂಡ ಡಿಪಿಆರ್ ಗೆ ಮಾರ್ಪಾಡುಗಳನ್ನು ತರುವುದಾದರೆ ಕೆಲ ಕಾಲ ಸಮಯ ಹಿಡಿಯುತ್ತದೆ. ಏಕೆಂದರೆ ಪ್ಲಾನ್ ಬದಲಾದರೆ ಮತ್ತೆ ಅಧ್ಯಯನ ನಡೆಸಿ ಒಂದಷ್ಟು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಸದ್ಯ ಮೆಟ್ರೋ ಡಿಪಿಆರ್ ಸಿದ್ಧಪಡಿಸಿದ್ದು, ಅದನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ.
ಉದ್ದೇಶಿತ ಯೋಜನೆಗಳ ಮಾಹಿತಿ ಹೀಗಿದೆ
ಮೆಟ್ರೋದ ಡಿಪಿಆರ್ ಸಿಲ್ಕ್ ಬೋರ್ಡ್-ಕೆಐಎವರೆಗೆ ಬ್ಲೂ ಲೈನ್, ಕೆಂಪಾಪುರ-ಜೆಪಿ ನಗರ 3 ನೇ ಹಂತದ ಮಾರ್ಗ ಮತ್ತು ಹೆಬ್ಬಾಳದಲ್ಲಿ ಉಪನಗರ ರೈಲು ಯೋಜನೆ (ಬೈಪ್ಪನಹಳ್ಳಿ-ಚಿಕ್ಕಬಾಣಾವರ) ಯೊಂದಿಗೆ ನಿರ್ಮಾಣಕ್ಕೆ ಪರಿಗಣಿಸಲಾಗಿದೆ.
ಗಂಗಾನಗರ ಮತ್ತು ಹೆಬ್ಬಾಳದಲ್ಲಿ ಎರಡು ಎಲಿವೇಟೆಡ್ ಮೆಟ್ರೋ ನಿಲ್ದಾಣಗಳನ್ನು ಯೋಜಿಸಲು ಎರಡು ಕಾರಣಗಳಿವೆ. ಒಂದು ಹೆಬ್ಬಾಳ ಸರೋವರದ ಉಪಸ್ಥಿತಿ ಮತ್ತು ಇನ್ನೊಂದು ಹೆಬ್ಬಾಳದಲ್ಲಿರುವ ಮೆಟ್ರೋ ನಿಲ್ದಾಣವನ್ನು ಇತರ ಮೆಟ್ರೋ ನಿಲ್ದಾಣಗಳು ಮತ್ತು ಉಪನಗರ ರೈಲು ನಿಲ್ದಾಣಗಳೊಂದಿಗೆ ಸಂಯೋಜಿಸುವ ಉದ್ದೇಶ ಮೆಟ್ರೋ ಹೊಂದಿದೆ.
ಯೋಜನೆ ಬಗ್ಗೆ ಪಾಲಿಕೆ ಹೇಳಿದ್ದೇನು?
ಮೆಟ್ರೊ ಕಾರಿಡಾರ್‌ಗೆ ಸ್ಥಳದಲ್ಲಿ ರಸ್ತೆ ಸುರಂಗ ಮಾರ್ಗ ನಿರ್ಮಾಣ ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಿದ ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಿ.ಎಸ್ ಪ್ರಹ್ಲಾದ್ ಅವರು, ಎಸ್ಟೀಮ್ ಮಾಲ್‌ಗೆ ಸಮೀಪವಿರುವ ರಾಜಕಾಲುವೆ ಬಳಿ ಖಾಲಿ ಜಾಗ ಇದೆ. ಅಲ್ಲಿಂದ ಸುರಂಗ ಮಾರ್ಗ ನಿರ್ಮಾಣಗೊಳ್ಳಲಿದೆ. ಮೆಖ್ರಿ ವೃತ್ತದ ಬಳಿ ಅರಮನೆ ಮೈದಾನದವರೆಗೆ ನಿರ್ಮಿಸಲಾಗಿದೆ. ಸುರಂಗ ರಸ್ತೆಯನ್ನು 30 ಮೀ ಕೆಳಗೆ ನಿರ್ಮಿಸಲಾಗುವುದು ಮತ್ತು ಈ ಪ್ರದೇಶದಲ್ಲಿ ಉದ್ದೇಶಿತ ಮೆಟ್ರೋ ಕಾರಿಡಾರ್ ಮತ್ತು ಹೆಬ್ಬಾಳ ಮೇಲ್ಸೇತುವೆಯ ಕೆಳಗೆ ಚಲಿಸುತ್ತದೆ ಎಂದು ಹೇಳಿದರು.
ಬಿಎಂಆರ್‌ಸಿಎಲ್ ಇಲ್ಲಿನ ಸುರಂಗ ಮಾರ್ಗ ಯೋಜನೆ ಡಿಪಿಆರ್ ಸಿದ್ಧಪಡಿಸಿದೆ. ಆದರೆ ಬಿಬಿಎಂಪಿ ಇದೇ ಮೊದಲ ಬಾರಿಗೆ ರಸ್ತೆ ಸುರಂಗ ಮಾರ್ಗ ನಿರ್ಮಾಣದ ಕಾರ್ಯಸಾಧ್ಯತೆ ನಡೆಸುತ್ತಿದೆ. ಎಲ್ಲ ಅಂತಿಮಗೊಳ್ಳುವುದು ಬಾಕಿ ಇದೆ ಎನ್ನಲಾಗಿದೆ.












Click it and Unblock the Notifications