Bengaluru-Mysuru Highway: ಬೆಂಗಳೂರು-ಮೈಸೂರು ರಸ್ತೆ ವಾಹನ ಸವಾರರೇ ಗಮನಿಸಿ
ಬೆಂಗಳೂರು, ಸೆಪ್ಟೆಂಬರ್ 04: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯು ಬಹುದೊಡ್ಡ ಆರೋಪದಿಂದ ಮುಕ್ತವಾಗುತ್ತಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಾಣ ಮಾಡಿರುವ ಈ ರಸ್ತೆ ಉದ್ಘಾಟನೆಗೊಂಡ ಕೆಲವು ದಿನಗಳ ಕಾಲ ಸಾವಿನ ಹೆದ್ದಾರಿ ಎಂದೇ ಖ್ಯಾತಿ ಪಡೆದಿತ್ತು. ಅಷ್ಟು ಅಪಘಾತಗಳು ನಡೆದು ಜನರು ಜೀವ ಕಳೆದುಕೊಂಡಿದ್ದರು. ಆದರೆ ಈಗ ಇವುಗಳನ್ನು ನಿಯಂತ್ರಿಸಲು ಕೈಗೊಂಡ ಕ್ರಮಗಳು ಯಶಸ್ವಿಯಾಗಿದ್ದು, ರಸ್ತೆ ಅಪಘಾತಗಳಿಂದ ಸಾವಿನ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆ.
ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಈ ಕುರಿತು ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ. ಆಗಸ್ಟ್ 2024ರಲ್ಲಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ರಸ್ತೆ ಅಪಘಾತಗಳಿಂದ ಸಂಭವಿಸುವ ಸಾವುಗಳ ಸಂಖೆಯಲ್ಲಿ ಇಳಿಮುಖವಾಗಿದೆ ಎಂದು ಹೇಳಿದ್ದಾರೆ. ಅಂಕಿ-ಸಂಖ್ಯೆಗಳ ಮಾಹಿತಿಯನ್ನು ನೀಡಿದ್ದಾರೆ.

2023ರಲ್ಲಿ ಜನವರಿಯಿಂದ ಆಗಸ್ಟ್ ತನಕ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ 147 ಜನರು ಮೃತಪಟ್ಟಿದ್ದರು. 2024ರಲ್ಲಿ 50 ಜನರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಪ್ರತಿ ತಿಂಗಳಿನಲ್ಲಿ ಅಪಘಾತಗಳ ಸಂಖ್ಯೆ ಹೇಗೆ ಕಡಿಮೆಯಾಗಿದೆ? ಎಂದು ತಿಂಗಳುವಾರು ಮಾಹಿತಿಯನ್ನು ಕೊಟ್ಟಿದ್ದಾರೆ.
Deaths due to road accidents on Bengaluru- Mysore Highway down to 2 in August 24
— alok kumar (@alokkumar6994) September 3, 2024
Saving 97 precious lives is worth increasing the travel time by 15 minutes
“Rash and distracted driving still remains the single most aggravating factor causing road accidents on this Highway too” pic.twitter.com/y37hubryuc
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಅಪಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಅಪಘಾತಗಳ ಸಂಖ್ಯೆಯಲ್ಲಿಯೂ ಭಾರೀ ಇಳಿಕೆಯಾಗಿದೆ. 2023ರಲ್ಲಿ ಜನವರಿಯಲ್ಲಿ 14, ಫೆಬ್ರವರಿಯಲ್ಲಿ 17, ಮಾರ್ಚ್‌ನಲ್ಲಿ 20, ಏಪ್ರಿಲ್‌ನಲ್ಲಿ 20, ಮೇನಲ್ಲಿ 29, ಜೂನ್ 27, ಜುಲೈ 10 ಮತ್ತು ಆಗಸ್ಟ್‌ನಲ್ಲಿ 147 ಜನರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು.
ಅದೇ 2024ರಲ್ಲಿ ಜನವರಿಯಲ್ಲಿ 12, ಫೆಬ್ರವರಿಯಲ್ಲಿ 6, ಮಾರ್ಚ್ 9, ಏಪ್ರಿಲ್ 3, ಮೇ 3, ಜೂನ್ 9, ಜುಲೈ 6, ಆಗಸ್ಟ್‌ನಲ್ಲಿ 2 ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.
2023ರಲ್ಲಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ರಾಮನಗರದಲ್ಲಿ 283, ಮಂಡ್ಯದಲ್ಲಿ 282, ಮೈಸೂರು 30 ಸೇರಿ ಒಟ್ಟು 595 ಅಪಘಾತ ಪ್ರಕರಣಗಳು ದಾಖಲಾಗಿದ್ದವು. ರಾಮನಗರ 87, ಮಂಡ್ಯ 63, ಮೈಸೂರು 8 ಸೇರಿ ಒಟ್ಟು 158 ಜನರು ಸಾವನ್ನಪ್ಪಿದ್ದರು. 538 ಜನರು ಗಾಯಗೊಂಡಿದ್ದರು.
ಈಗ ಹೆದ್ದಾರಿಯಲ್ಲಿ ವೇಗವನ್ನು ಮಿತಿಗೊಳಿಸಲು ಎಐ ಕ್ಯಾಮರಾಗಳನ್ನು ಅಳವಡಿಕೆ ಮಾಡಲಾಗಿದೆ. ವೇಗವಾಗಿ ಸಾಗುವ ವಾಹನ ಸವಾರರಿಗೆ ಅವರ ಮೊಬೈಲ್‌ಗೆ ಅರ್ಧಗಂಟೆಯಲ್ಲಿ ನೋಟಿಸ್ ಬರುವಂತೆ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಅಪಘಾತಗಳ ಕುರಿತು ವಿಧಾನಸಭೆಯಲ್ಲಿಯೂ ಚರ್ಚೆ ನಡೆದಿತ್ತು. ಗೃಹ ಸಚಿವ ಡಾ. ಜಿ. ಪರಮೇಶ್ವರ ಬಿಜೆಪಿ ಸದಸ್ಯ ಎಸ್. ಸುರೇಶ್ ಕುಮಾರ್ ಪ್ರಶ್ನೆಗೆ ಉತ್ತರವನ್ನು ನೀಡಿದ್ದರು. ಈ ಹೆದ್ದಾರಿಯಲ್ಲಿ ಗಸ್ತು ವಾಹನ ನಿಯೋಜನೆ ಮಾಡಲಾಗಿದೆ. ವಾಹನ ಮಾರ್ಗ ಮಧ್ಯೆ ನಿಂತಿದ್ದರೆ ಗಸ್ತು ವಾಹನದ ಮೂಲಕ ತೆರವುಗೊಳಿಸಲಾಗುತ್ತದೆ ಎಂದು ತಿಳಿಸಿದ್ದರು.












Click it and Unblock the Notifications