Bengaluru-Mysuru expressway: ಎಕ್ಸ್‌ಪ್ರೆಸ್‌ವೇನಲ್ಲಿ ಉಳಿಸಿದ ಸಮಯ ಕೆಂಗೇರಿ ಟ್ರಾಫಿಕ್‌ನಲ್ಲಿ ಕಳೆದುಹೋಗಲಿದೆ- ವರದಿ, ವಿವರ
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ವೇಗದ ಹಾಗೂ ಸುಗಮ ಸಂಚಾರಕ್ಕೆ ಉತ್ತಮ ಸೌಕರ್ಯ ಕಲ್ಪಸಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಬೆಂಗಳೂರಿನ ಕೆಂಗೇರಿಯಲ್ಲಿ ಮೊದಲಿನಂತೆಯೇ ಟ್ರಾಪಿಕ್ ಕಿರಿಕಿರಿ ಗಮನಕ್ಕೆ ಬಂದಿದೆ.
ಬೆಂಗಳೂರು, ಮಾರ್ಚ್ 13: ಪ್ರಧಾನಿ ನರೇಂದ್ರ ಮೋದಿ ಅವರು 119 ಕಿಮೀ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ಭಾನುವಾರ ಉದ್ಘಾಟಿಸಿದ್ದಾರೆ. ಈ ನೂತನ ಎಕ್ಸ್‌ಪ್ರೆಸ್‌ವೇ ವೇಗದ ಹಾಗೂ ಸುಗಮ ಸಂಚಾರಕ್ಕೆ ಉತ್ತಮ ಸೌಕರ್ಯ ಕಲ್ಪಸಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಬೆಂಗಳೂರಿನ ಕೆಂಗೇರಿಯಲ್ಲಿ ಮೊದಲಿನಂತೆಯೇ ಟ್ರಾಪಿಕ್ ಕಿರಿಕಿರಿ ಗಮನಕ್ಕೆ ಬಂದಿದೆ. ಇದನ್ನು ಕಡಿಮೆ ಮಾಡುವುದು ಹೇಗೆಂಬ ಚಿಂತೆ ಅಧಿಕಾರಿಗಳನ್ನು ಕಾಡುತ್ತಿದೆ.

ಕೆಂಗೇರಿಯಲ್ಲಿ ಮೊದಲಿನಿಂದಲೂ ವಾಹನ ದಟ್ಟಣೆ ಸಮಸ್ಯೆ
ಕೆಂಗೇರಿಯಲ್ಲಿ ಈ ಮೊದಲಿನಿಂದಲೂ ವಾಹನ ದಟ್ಟಣೆ ಸಮಸ್ಯೆ ಇದೆ. ಈಗಲೂ ಅದು ಮುಂದುವರಿಯುವ ಸಾಧ್ಯತೆ ಇದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಕೆಂಗೇರಿಯಲ್ಲಿರುವ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಬಳಿಯ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇಯಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಬರುವ ವಾಹನಗಳು ಟ್ರಾಫಿಕ್ ಜಾಮ್ ಅನ್ನು ಎದುರಿಸುತ್ತಿವೆ. ಭಾನುವಾರ ಸಂಜೆ ಮತ್ತು ಸೋಮವಾರ ಬೆಳಗ್ಗೆ ಸಮಸ್ಯೆ ತೀವ್ರವಾಗುತ್ತದೆ ಎಂದು 'ಡೆಕ್ಕನ್ ಹೆರಾಲ್ಡ್' ವರದಿ ಮಾಡಿದೆ.

ನೈಸ್ ರಸ್ತೆ ಜಂಕ್ಷನ್‌ನ ಸುತ್ತಲೂ ಕಿರಿಕಿರಿ
ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಉಳಿಸಿದ ಎಲ್ಲಾ ಸಮಯವೂ ನೈಸ್ ರಸ್ತೆ ಜಂಕ್ಷನ್‌ನ ಸುತ್ತಲೂ ಕಳೆದುಕೊಳ್ಳುತ್ತದೆ ಎಂದು ಪ್ರಯಾಣಿಕರು ದೂರಿದ್ದಾರೆ. ಕೆಂಗೇರಿಯಲ್ಲಿ ಭೂಸ್ವಾಧೀನದ ವೆಚ್ಚವನ್ನು ಬಿಬಿಎಂಪಿ ಅಥವಾ ರಾಜ್ಯ ಸರ್ಕಾರ ಭರಿಸಬೇಕು. ಅಂದರೆ ಮಾತ್ರ ಕೆಂಗೇರಿ ವಾಹನ ದಟ್ಟಣೆ ಸಮಸ್ಯೆಗೆ ಪರಿಹಾರ ಒದಗಿಸಲು ನಾವು ಸಿದ್ದವೆಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಹೇಳಿದೆ.

ಅಧಿಕಾರಿ ವಿವೇಕ್ ಜೈಸ್ವಾಲ್ ಹೇಳಿದ್ದೇನು?
'ಈ ಸ್ಥಳದಲ್ಲಿ ( ಕೆಂಗೇರಿ ) ದಟ್ಟಣೆಯನ್ನು ಕಡಿಮೆ ಮಾಡುವ ಅಗತ್ಯವಿದೆ ಎಂದು ನಾವು ನಂಬುತ್ತೇವೆ. ಇದಕ್ಕೆ ಪರಿಹಾರಗಳನ್ನು ನೀಡಲು ನಾವು ಸಿದ್ಧರಿದ್ದೇವೆ. ಆದರೆ ನಿರ್ಮಾಣಕ್ಕೆ ಅವಕಾಶವಿಲ್ಲದ ರಸ್ತೆಯುದ್ದಕ್ಕೂ ನಾವು ಕನಿಷ್ಠ ಮುಕ್ತ ಜಾಗವನ್ನು ಪಡೆದರೆ ಮಾತ್ರ ಅದು ಸಾಧ್ಯವಾಗುತ್ತದೆ. ಭೂಮಿಯು ನಗರ ವ್ಯಾಪ್ತಿಯಲ್ಲಿರುವುದರಿಂದ, ಇದು ತುಂಬಾ ದುಬಾರಿಯಾಗಿದೆ' ಎಂದು ಎನ್‌ಎಚ್‌ಎಐನ ಪ್ರಾದೇಶಿಕ ಅಧಿಕಾರಿ ವಿವೇಕ್ ಜೈಸ್ವಾಲ್ 'ಡೆಕ್ಕನ್ ಹೆರಾಲ್ಡ್'ಗೆ ತಿಳಿಸಿದ್ದಾರೆ.

ಅಡಚಣೆಯನ್ನು ತಡೆಯಲು ಅಗತ್ಯವಿರುವ ಭೂಮಿ ಬೇಕಿದೆ
ಪ್ರದೇಶವನ್ನು ಪರಿಶೀಲಿಸಿದ ನಂತರ ಅಡಚಣೆಯನ್ನು ತಡೆಯಲು ಅಗತ್ಯವಿರುವ ಭೂಮಿಯನ್ನು NHAI ಲೆಕ್ಕಾಚಾರ ಮಾಡುತ್ತದೆ. ನಾವು BBMP, BDA, PWD ಮತ್ತು NICE ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸುತ್ತಿದ್ದೇವೆ. ನಮ್ಮ ಬಳಿ ಇರುವ ಸಂಪನ್ಮೂಲಗಳೊಂದಿಗೆ ಪ್ರಯಾಣಿಕರಿಗೆ ಸಂಚಾರವನ್ನು ಸುಲಭಗೊಳಿಸಲು ನಾವು ಪ್ರಯತ್ನಿಸುತ್ತೇವೆ. ಹೆಚ್ಚುವರಿ ಭೂಮಿ ಲಭ್ಯವಿರುವಲ್ಲೆಲ್ಲಾ ಎಕ್ಸ್‌ಪ್ರೆಸ್‌ವೇ ಉದ್ದಕ್ಕೂ ಶೌಚಾಲಯ ಸೌಲಭ್ಯಗಳನ್ನು ನಿರ್ಮಿಸಲು ಎನ್‌ಎಚ್‌ಎಐ ಯೋಜಿಸುತ್ತಿದೆ. ಫುಡ್ ಜಾಯಿಂಟ್‌ಗಳಂತಹ ವೇಸೈಡ್ ಸೌಕರ್ಯಗಳು ಇಲ್ಲಿ ಬರಲಿವೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಯೋಜನೆ
NH-275 ನಲ್ಲಿ 119 ಕಿಮೀ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಯೋಜನೆಯು 6-10 ಲೇನ್ ಪ್ರವೇಶ-ನಿಯಂತ್ರಿತ ಹೆದ್ದಾರಿಯಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 8,480 ಕೋಟಿ ರೂಪಾಯಿ ವೆಚ್ಚದಲ್ಲಿ ಇದನ್ನು ಅಭಿವೃದ್ಧಿಪಡಿಸಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ದಿಲೀಪ್ ಬಿಲ್ಡ್‌ಕಾನ್‌ಗೆ ಈ ಯೋಜನೆಯನ್ನು ನೀಡಿತು. ಬೆಂಗಳೂರು ಮತ್ತು ಮೈಸೂರು ನಡುವಿನ ಸಂಚಾರ ದಟ್ಟಣೆಯನ್ನು ನಿವಾರಿಸುವ ಮತ್ತು ಅಂತಿಮವಾಗಿ ಪ್ರಯಾಣದ ಸಮಯವನ್ನು ಮೂರು ಗಂಟೆಗಳಿಂದ 75 ನಿಮಿಷಗಳಿಗೆ ಕಡಿಮೆ ಮಾಡುವ ಗುರಿಯನ್ನು ಇದು ಹೊಂದಿದೆ.

ಎರಡು ಹಂತಗಳಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಯೋಜನೆ
ಯೋಜನೆಯು ಎರಡು ಹಂತಗಳನ್ನು ಒಳಗೊಂಡಿದೆ: ಬೆಂಗಳೂರು ಮತ್ತು ನಿಡಘಟ್ಟ ನಡುವೆ 58 ಕಿಮೀ ಉದ್ದದ ಹಂತ 1, ನಿಡಘಟ್ಟ ಮತ್ತು ಮೈಸೂರು ನಡುವೆ 61 ಕಿಮೀ ಉದ್ದದ ಹಂತ 2. ಇದು 19 ದೊಡ್ಡ ಸೇತುವೆಗಳು, 44 ಸಣ್ಣ ಸೇತುವೆಗಳು ಮತ್ತು ನಾಲ್ಕು ರೈಲ್ವೆ ಮೇಲ್ಸೇತುವೆಗಳು (ROB ಗಳು) ಮತ್ತು ಪಾದಚಾರಿಗಳಿಗೆ 50 ಅಂಡರ್‌ಪಾಸ್‌ಗಳನ್ನು ಹೊಂದಿದೆ.

ಯೋಜನೆಯ ಕಾಮಗಾರಿಯು ಮೇ 2019 ರಲ್ಲಿ ಪ್ರಾರಂಭ
ಹೆಚ್ಚುವರಿಯಾಗಿ, ಇದು ಬಿಡದಿ (7 ಕಿಮೀ), ರಾಮನಗರ-ಚನ್ನಪಟ್ಟಣ (22 ಕಿಮೀ), ಮದ್ದೂರು (3.5 ಕಿಮೀ ಎತ್ತರಿಸಿದ ಹೆದ್ದಾರಿ ಸೇರಿದಂತೆ 7 ಕಿಮೀ), ಮಂಡ್ಯ (10 ಕಿಮೀ) ಮತ್ತು ಶ್ರೀರಂಗಪಟ್ಟಣ (7 ಕಿಮೀ) ಸುತ್ತಲೂ ಬೈಪಾಸ್‌ಗಳನ್ನು ರೂಪಿಸುವ ಗ್ರೀನ್‌ಫೀಲ್ಡ್ ವಿಭಾಗಗಳನ್ನು ಸಹ ಒಳಗೊಂಡಿದೆ. ಯೋಜನೆಯ ಕಾಮಗಾರಿಯು ಮೇ 2019 ರಲ್ಲಿ ಪ್ರಾರಂಭವಾಯಿತು ಮತ್ತು ಎರಡು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.











Click it and Unblock the Notifications