ಇದು ನಮ್ ಪ್ರಾಬ್ಲಂ ಸೋಮಣ್ಣ ಸಾರ್: ಗೋಳು ತೋಡಿಕೊಂಡ ಬೆಂಗಳೂರು - ಮೈಸೂರು ರೈಲು ಪ್ರಯಾಣಿಕರು
ಬೆಂಗಳೂರು: ಬೆಂಗಳೂರು ಹಾಗೂ ಮೈಸೂರಿನ ನಡುವೆ ರೈಲು ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ಗಮನದಲ್ಲಿ ಇರಿಸಿಕೊಂಡು ಈ ಮಾರ್ಗದಲ್ಲಿ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಹಾಗೂ ಬೆಂಗಳೂರು - ಮೈಸೂರು ಮಾರ್ಗವಾಗಿ ಸಂಚರಿಸುವ ರೈಲುಗಳನ್ನು ಬೆಂಗಳೂರಿನ ನಮ್ಮ ಮೆಟ್ರೋ ಸಮೀಪದ ನಿಲ್ದಾಣಗಳಿಗೆ ಹೊಂದಾಣಿಕೆಯಾಗುವ ರೈಲು ನಿಲ್ದಾಣಗಳಲ್ಲಿ ನಿಲುಗಡೆ ನೀಡಬೇಕು ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಮಾಡಲಾಗಿದೆ.
ಬೆಂಗಳೂರು ಹಾಗೂ ಮೈಸೂರಿನ ನಡುವೆ ದಿನವೂ ಸಾವಿರಾರು ಜನ ಪ್ರಯಾಣ ಮಾಡುತ್ತಾರೆ. ರೈಲು ಸಂಚಾರ ಸೇವೆಯಿಂದ ಸಾವಿರಾರು ಜನರು ಬೆಂಗಳೂರಿನಲ್ಲಿ ನೆಲೆಸುವುದು ತಪ್ಪಿದ್ದು, ಬೆಂಗಳೂರಿನ ಮೇಲಿನ ಒತ್ತಡವೂ ಸಹ ಕಡಿಮೆಯಾಗಿದೆ. ಮೈಸೂರು ಹಾಗೂ ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಜನ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಬೆಂಗಳೂರು - ಮೈಸೂರಿನ ರೈಲು ಮಾರ್ಗವು ಸಾವಿರಾರು ಜನರಿಗೆ ಅನುಕೂಲವಾಗಿದೆ. ಆದರೆ ಈ ಮಾರ್ಗದಲ್ಲಿ ಸಕಾಲದಲ್ಲಿ ರೈಲು ಬರುತ್ತಿಲ್ಲ ಹಾಗೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದು ಅದಕ್ಕೆ ಪೂರಕವಾಗಿ ರೈಲು ಸಂಖ್ಯೆ ಹೆಚ್ಚಿಸಬೇಕು ಎನ್ನುವ ಮನವಿ ಈ ಭಾಗದ ರೈಲು ಪ್ರಯಾಣಿಕರಿಂದ ವ್ಯಕ್ತವಾಗಿದೆ.

ಬೆಂಗಳೂರಿನ ನಾಯಂಡಹಳ್ಳಿಗೆ 4 ರೈಲು
ಇನ್ನು ಬೆಂಗಳೂರು - ಮೈಸೂರು ಮಾರ್ಗವಾಗಿ ಸಂಚರಿಸುವ ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್ ಕೊಡಲಾಗಿದೆ. ಮೈಸೂರು - ಕೆಎಸ್‌ಆರ್ ಸಿಟಿ ಚಾಮುಂಡಿ ಎಕ್ಸ್‌ಪ್ರೆಸ್ (16215/16216), ಮೈಸೂರು-ಬಾಗಲಕೋಟೆ ಬಸವ ಎಕ್ಸ್‌ಪ್ರೆಸ್ (17307/17308), ಟುಟಿಕೋರಿನ್-ಮೈಸೂರು ಎಕ್ಸ್‌ಪ್ರೆಸ್ (16235/16236) ಹಾಗೂ ಮೈಸೂರು-ಪಂಡರಾಪುರ ಗೋಲ್ ಗುಂಬಜ್ ಎಕ್ಸ್‌ಪ್ರೆಸ್ (16535/16536) ರೈಲುಗಳಿಗೆ ಬೆಂಗಳೂರಿನ ನಾಯಂಡಹಳ್ಳಿ ರೈಲು ನಿಲ್ದಾಣದಲ್ಲಿ ನಿಲುಗಡೆ ನೀಡಬೇಕೆಂಬ ಈ ಭಾಗದ ಪ್ರಯಾಣಿಕರ ಬಹುದಿನದ ಬೇಡಿಕೆಯನ್ನು ಈಡೇರಿಸಲಾಗಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಅವರು ಹೇಳಿದ್ದಾರೆ.
ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ವಿ.ಸೋಮಣ್ಣ ಅವರ ಟ್ವೀಟ್‌ಗೆ ಹಲವು ರೈಲು ಪ್ರಯಾಣಿಕರು ಕಮೆಂಟ್ ಮಾಡಿದ್ದಾರೆ. ಮುಖ್ಯವಾಗಿ ಬೆಂಗಳೂರು - ಮೈಸೂರು ಮಾರ್ಗದಲ್ಲಿ ಇರುವ ಸಮಸ್ಯೆಗಳ ಬಗ್ಗೆ ಸಚಿವರ ಗಮನಕ್ಕೆ ತಂದಿದ್ದಾರೆ. ರವಿ ಕೀರ್ತಿಗೌಡ ಅವರು, ಜ್ಞಾನಭಾರತಿ ಮೆಟ್ರೋಗೆ ತುಂಬಾ ಹತ್ತಿರದಲ್ಲಿದ್ದರಿಂದ ಸಹಾಯವಾಗುತ್ತಿತ್ತು ಎಂದಿದ್ದಾರೆ. ರವೀಂದ್ರ ಎನ್ನುವವರೂ ಸಹ ಇದೇ ಅಭಿಪ್ರಾಯಪಟ್ಟಿದ್ದಾರೆ. ಜ್ಞಾನಭಾರತಿ ರೈಲು ನಿಲುಗಡೆಯು ಮೆಟ್ರೋ ಸಮೀಪದಲ್ಲೇ ಇದೆ. ಈ ರೈಲುಗಳ ನಿಲುಗಡೆಯನ್ನು ಈ ಭಾಗದಲ್ಲಿ ಕೊಟ್ಟರೆ ಪ್ರಯಾಣಿಕರ ಸಂಚಾರಕ್ಕೆ ಅನುಕೂಲವಾಗಲಿದೆ ಎಂದಿದ್ದಾರೆ.
ಬೆಂಗಳೂರು - ಮೈಸೂರು ರೈಲು ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ರೈಲು ಸೇವೆಗಳನ್ನು ವಿಸ್ತರಿಸಲು, ಹೆಚ್ಚುವರಿ ರೈಲುಗಳನ್ನು /ಮೆಮು ಸಂಚಾರಕ್ಕೆ ಪ್ರಯಾಣಿಕರು ಮನವಿ ಮಾಡಿದ್ದಾರೆ.
ರೈಲುಗಳ ವಿಳಂಬದಿಂದ ಸಮಸ್ಯೆ
ಇನ್ನು ರೈಲುಗಳ ಸಂಚಾರದಲ್ಲಿ ಸಮಸ್ಯೆ ಆಗುತ್ತಿದ್ದು, ಇದರಿಂದ ನಿತ್ಯವೂ ಬೆಂಗಳೂರು - ಮೈಸೂರು ಮಾರ್ಗದ ಪ್ರಯಾಣಿಕರಿಗೆ ತಡವಾಗುತ್ತಿದೆ. ಅನಧಿಕೃತವಾಗಿ ನಿಲುಗಡೆ ಅಥವಾ ಕ್ರಾಸಿಂಗ್‌ಗಳಲ್ಲಿ ನಿಲುಗಡೆ ಕೊಡುತ್ತಿರುವುದು ಸಮಸ್ಯೆ ಆಗುತ್ತಿದೆ. ಇದನ್ನು ತಪ್ಪಿಸಬೇಕು ಎಂದು ಹಲವು ರೈಲು ಪ್ರಯಾಣಿಕರು ವಿ. ಸೋಮಣ್ಣ ಅವರಿಗೆ ಮನವಿ ಮಾಡಿದ್ದಾರೆ.












Click it and Unblock the Notifications