Kamaraj Road: ಮೆಟ್ರೋ ಕಾಮಗಾರಿಗಾಗಿ 5 ವರ್ಷ ಮುಚ್ಚಿದ್ದ 'ಕಾಮರಾಜ್' ರಸ್ತೆ ಒನ್‌ವೇ ಮುಕ್ತ ಶೀಘ್ರ
ಬೆಂಗಳೂರು, ಏಪ್ರಿಲ್ 26: ಬೆಂಗಳೂರು ನಮ್ಮ ಮೆಟ್ರೊ ಕಾಮಗಾರಿ ಸಂಬಂಧ ನಗರದ ಪ್ರಮುಖ ರಸ್ತೆಯೊಂದರ ಸಂಚಾರವನ್ನು ಸುಮಾರು ಐದು ವರ್ಷಗಳ ಸ್ಥಗಿತಗೊಳಿಸಲಾಗಿತ್ತು. ಇದೀಗ ಆ ರಸ್ತೆಯ ಒಂದು ಬದಿ (oneway) ಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲು ತೀರ್ಮಾನಿಸಲಾಗಿದೆ.
ಬೆಂಗಳೂರಿನ ಎಂಜಿ ರಸ್ತೆ ಹಾಗೂ ಕಬ್ಬನ್ ರಸ್ತೆಯ ನಡುವಿನ ಕಾಮರಾಜ್ ರಸ್ತೆಯ ಒಂದು ಬದಿಯ ರಸ್ತೆಯನ್ನು ಮುಂದಿನ ಮೇ ತಿಂಗಳ ಮಧ್ಯದಲ್ಲಿ ಸಂಚಾರಕ್ಕೆ ಮುಕ್ತಗೊಳಿಸಲು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಮತ್ತು ಸಂಚಾರಿ ಪೊಲೀಸರು ನಿರ್ಧರಿಸಿದ್ದಾರೆ ಎಂದು TNIE ವರದಿ ಮಾಡಿದೆ.

ಮೆಟ್ರೋ ಗುಲಾಬಿ ಮಾರ್ಗದ ಕಾಮಗಾರಿಗೆ ರಸ್ತೆ ಬಂದ್
ಎಂಜಿ ರಸ್ತೆ ಹಾಗೂ ಕಬ್ಬನ್ ಉದ್ಯಾನ ವ್ಯಾಪ್ತಿಯಲ್ಲಿ ನಮ್ಮ ಮೆಟ್ರೋ ಗುಲಾಬಿ ಮಾರ್ಗದ (Metro Pink Line) ಭೂಗತ ಕಾಮಗಾರಿ ಕೈಗೊಂಡಿದೆ. ಈ ಕಾರಣದಿಂದ ಕಳೆದ ಐದು ವರ್ಷದಿಂದ (2019) ಈ ಕಾಮರಾಜ್ ರಸ್ತೆಯನ್ನು ಮುಚ್ಚಲಾಗಿದೆ. ಇಲ್ಲಿ ಇದನ್ನು ಏಕಮುಖ ರಸ್ತೆಯನ್ನಾಗಿ ಮಾಡಲು ಸಂಚಾರ ಪೊಲೀಸರು ನಿರ್ಧರಿಸಿದ್ದಾರೆ. ಎಂಜಿ ರಸ್ತೆಯಿಂದ ಕಬ್ಬನ್ ರಸ್ತೆ ಕಡೆಗೆ ಸಂಚರಿಸುವ ವಾಗಹನಗಳಿಗೆ ಮಾತ್ರ ಈ ಕಾಮರಾಜ್ ರಸ್ತೆ ಲಭ್ಯವಾಗುವಂತೆ ಮಾಡಲು ಪೊಲೀಸರು ಪ್ಲಾನ್ ಮಾಡಿಕೊಂಡಿದ್ದಾರೆ.
2019 ರಲ್ಲಿ ಮುಚ್ಚಲಾಗಿದ್ದ ರಸ್ತೆ
ಈ ಕಬ್ಬನ್ ಪಾರ್ಕ್ ಮತ್ತು ಎಂಜಿ ರಸ್ತೆಯ 220 ಮೀಟರ್ ಉದ್ದದ ಕಾಮರಾಜ್ ರಸ್ತೆಯ ಕೆಳಗೆ ಮೆಟ್ರೋ ಗುಲಾಬಿ ಮಾರ್ಗ (ನಾಗವಾರ-ಕಾಳೇನ ಅಗ್ರಹಾರ) ಭೂಗತ ಮೆಟ್ರೋ ನಿಲ್ದಾಣ ನಿರ್ಮಿಸುತ್ತಿದೆ. ಹೀಗಾಗಿ 2019 ರಲ್ಲಿ ಮಧ್ಯ ಭಾಗದಲ್ಲಿ ಈ ರಸ್ತೆ ಸಂಚಾರ ಸ್ಥಗಿತಗೊಳಿಸಲಾಯಿತು.

ಈ ಗುಲಾಬಿ ಮಾರ್ಗದ ಭೂಗತ ಮೆಟ್ರೋ ನಿಲ್ದಾಣವು ನೇರಳೆ ಮಾರ್ಗದೊಂದಿಗೆ ಇಂಟರ್‌ಚೇಂಜ್ ರೂಪದಲ್ಲಿ ಕಾರ್ಯ ನಿರ್ವಹಿಸುತ್ತದೆ. ಕಾಮರಾಜ್ ರಸ್ತೆ ಬಂದ್ ಆಗ ಪರಿಣಾಮ ಸವಾರರು, ಶಿವಾಜಿನಗರ ಅಥವಾ ಕಮರ್ಷಿಯಲ್ ಸ್ಟ್ರೀಟ್‌ಗೆ ತೆರಳಲು ಅನಿಲ್ ಕುಂಬ್ಳೆ ವೃತ್ತ ಅಥವಾ ಟ್ರಿನಿಟಿ ವೃತ್ತದವರೆಗೆ ಹೋಗಿ ತಿರುವು ಪಡೆದು ಬರಬೇಕಿತ್ತು. ಇದರಿಂದ ಅಲ್ಲಲ್ಲಿ ಸಂಚಾರ ದಟ್ಟಣೆಯು ಕಂಡು ಬಂದಿತ್ತು.
ಮೇ ಮಧ್ಯ ಭಾಗ ಭಾಗಶಃ ರಸ್ತೆ ಮುಕ್ತ
ಈ ಕುರಿತು ಪ್ರತಿಕ್ರಿಯಿಸಿರುವ BMRCL ಮುಖ್ಯ ಸಂಪರ್ಕ ಅಧಿಕಾರಿ ಬಿಎಲ್ ಯಶವಂತ ಚವ್ಹಾಣ ಅವರು, ಸದ್ಯ ಗುಲಾಬಿ ಮಾರ್ಗ ಸಂಬಂಧಿಸಿದ ಭೂಗತ ಕಾಮಗಾರಿ ನಿರಂತರವಾಗಿ ಮುಂದುವರಿಯಲಿದೆ. ಇನ್ನೊಂದು ತಪಾಸಣೆ ಬಳಿಕ ಸಂಚಾರಿ ಪೊಲೀಸರು ರಸ್ತೆಯನ್ನು ಭಾಗಶಃ ತೆರೆಯಲು ಯೋಜಿಸಿದ್ದಾರೆ ಎಂದರು.
ಎರಡು ಬದಿಯ ಈ ರಸ್ತೆಯಲ್ಲಿ ಒಂದು ಬದಿಯ 8 ಮೀಟರ್ ಅಗಲದ ರಸ್ತೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಇದು ಒನ್ ವೇ ಆಗಿರಲಿದೆ. ಇದರಲ್ಲಿಯೇ 2.5 ಮೀಟರ್‌ಗೆ ಪಾದಾಚಾರಿ ಮಾರ್ಗ ಸಹ ನಿರ್ಮಿಸಲಾಗಿದೆ.
ಎಂಜಿ ರಸ್ತೆ ಭಾಗದಲ್ಲಿ ಅತೀವ ಸಂಚಾರ ದಟ್ಟಣೆ ಆದ ಪರಿಣಾಮ ತುರ್ತಾಗಿ ಈ ರಸ್ತೆಯನ್ನು ಸಾರ್ವಜನಿಕರಿಗಾಗಿ ಪುನರ್ ಸ್ಥಾಪಿಸಬೇಕೆಂದು ಪೊಲೀಸರು ನಿರ್ಧರಿಸಿದರು. ಕಮರ್ಷಿಯಲ್ ಸ್ಟ್ರೀಟ್ ಕಡೆ ತೆರಳುವವರು ಈ ರಸ್ತೆ ತೆರೆಯಲು ಬಹಳಷ್ಟು ಬೇಡಿ ಇಟ್ಟಿದ್ದರು. ಪೊಲೀಸರು ಸದ್ಯ ಕಾಮಗಾರಿ ಬೇಕಾದ ವಸ್ತುಗಳನ್ನು, ರಸ್ತೆಯಿಂದ ತೆಗೆಯುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications