Namma Metro ಜಾಲ ವಿಸ್ತರಣೆಗೆ ವೇಗ; 2026, 2027ರಲ್ಲಿ ಯಾವ ಮಾರ್ಗಗಳು ಓಪನ್? 2028, 2030 ಟಾರ್ಗೆಟ್ ಇಲ್ಲಿದೆ
ಬೆಂಗಳೂರು: ಗುಲಾಬಿ ಮೆಟ್ರೋ ಮಾರ್ಗ (7.5 ಕಿಮೀ) ಲೋಕಾರ್ಪಣೆಯೊಂದಿಗೆ ನಮ್ಮ ಮೆಟ್ರೋ ಬೆಂಗಳೂರಿನ ಜಾಲವು ಇತರ ನಗರಗಳಂತೆ ಇದೇ ವರ್ಷ 2026ರಲ್ಲಿ 100 ಕಿಲೋ ಮೀಟರ್ ನೆಟ್‌ವರ್ಕ್ ಗಡಿ ದಾಟಲಿದೆ. ಹಾಲಿ ಹೊಸ ಮಾರ್ಗಗಳಿಗೆ ಹೊಸ ಗಡುವು ನೀಡುವ ಮುಖೇನ 2028 ಮತ್ತು 2030ರ ವೇಳೆಗೆ ರೈಲು ನೆಟ್ ವರ್ಕ್ ಮತ್ತಷ್ಟು ವಿಸ್ತರಣೆ ಗುರಿ ಇಟ್ಟುಕೊಳ್ಳಲಾಗಿದೆ. ಹೊಸ ಗಡುವಿನ ಪ್ರಕಾರ ನೂತನ ಪ್ರಗತಿಯಲ್ಲಿರುವ ಮೆಟ್ರೋ ಮಾರ್ಗಗಳು (72 ಕಿಮೀ) ಯಾವಾಗ ಪ್ರಯಾಣಿಕರಿಗೆ ಮುಕ್ತವಾಗಲಿವೆ.?
ಕಾಮಗಾರಿ ವಿಳಂಬ, ಕೋರ್ಟ್ ಪ್ರಕರಣ, ಭೂಸ್ವಾಧೀನ ಸಂಬಂಧಿ ಕಾರಣಗಳಿಂದ ಕಳೆದ 15 ವರ್ಷಗಳಲ್ಲಿ ಬೆಂಗಳೂರು ನಮ್ಮ ಮೆಟ್ರೋ 100 ಕಿಲೋ ಮೀಟರ್‌ವರೆಗೆ ಪ್ರಯಾಸದಾಯಕವಾಗಿ, ಆಮೆಗತಿಯಲ್ಲಿ ವಿಸ್ತರಣೆ ಆಗುತ್ತಾ ಬಂದಿದೆ. ಆದರೆ ಇನ್ನು ಮುಂದೆ ಹಾಗಾಗುವುದಿಲ್ಲ. ತಡವಾದರೂ ಒಟ್ಟು 3 ಮಾರ್ಗಗಳ ಸೇವೆ ಪ್ರಯಾಣಿಕರಿಗೆ ಲಭ್ಯವಾಗಲಿವೆ.

ನಮ್ಮ ಮೆಟ್ರೋ ಹಾಲಿ ವ್ಯಾಪ್ತಿ 96.1 ಕಿಲೋ ಮೀಟರ್. ಸದ್ಯ ಗುಲಾಬಿ ಮೆಟ್ರೋ ಕಾರಿಡಾರ್ (ಕಾಳೇನ ಅಗ್ರಹಾರ-ತಾವರೆಕರೆ) ಇದೇ ಅಕ್ಟೋಬರ್ ತಿಂಗಳಾಂತ್ಯಕ್ಕೆ ತೆರೆಯುವುದು ಬಹುತೇಕ ಖಚಿತವಾಗಿದೆ. ಈ ಮೂಲಕ 7.5ಕಿಲೋ ಮೀಟರ್ ಹೊಸ ಲೈನ್ ಸೇರ್ಪಡೆಯೊಂದಿಗೆ ಮೆಟ್ರೋ ಜಾಲ 103.6 ಕಿಲೋ ಮೀಟರ್‌ಗೆ ವಿಸ್ತರಣೆ ಆಗಲಿದೆ. ಇನ್ನೊಂದೆಡೆ ನಗರದ ವಿವಿಧ ಭಾಗಗಳಲ್ಲಿ 72 ಕಿಲೋ ಮೀಟರ್ ಲೈನ್ ಕಾಮಗಾರಿಯ ಕೆಲಸ ನಡೆಯುತ್ತಿದೆ.
ಗುಲಾಬಿ ಮಾರ್ಗದ ಎರಡನೇ ಹಂತವಾಗಿರುವ 13.5 ಕಿಲೋ ಮೀಟರ್ ಉದ್ದದ ಭೂಗತ ಮಾರ್ಗವು (ತಾವೆಕೆರೆ-ನಾಗವಾರ) 2026ರ ಡಿಸೆಂಬರ್ ಹೊತ್ತಿಗೆ ತೆರೆಯಬೇಕಿತ್ತು. ಆದರೆ ವಿಳಂಬದಿಂದಾಗಿ 2027ರ ಮಾರ್ಚ್ ಒಳಗೆ ಕೆಲಸ ಮುಗಿಸಿ ಕಾರ್ಯಾಚರಣೆ ಆರಂಭಿಸುವಂತೆ ಗಡುವು ವಿಧಿಸಲಾಗಿದೆ. ಇದೇ ಡಿಸೆಂಬರ್ ಹೊತ್ತಿಗೆ ಈ ಮಾರ್ಗದಲ್ಲಿ ಟ್ರಯಲ್ ರನ್ ನಡೆಯುವ ನಿರೀಕ್ಷೆಗಳು ಇವೆ.
ಮೆಟ್ರೋ ನೀಲಿ ಮಾರ್ಗ ಟ್ರಯಲ್ ರನ್ನೇ ಆಗಿಲ್ಲ!
ಇನ್ನೂ ಕುಂಟುತ್ತ ಸಾಗಿರುವ ಮೆಟ್ರೋ ನೀಲಿ ಮಾರ್ಗ-2ಎ (ಸೆಂಟ್ರಲ್ ಸಿಲ್ಕ್ ಬೋರ್ಡ್-ಕೆ.ಆರ್.ಪುರಂ) ಮಾರ್ಗದಲ್ಲಿ ಇದೇ ಅಕ್ಟೋಬರ್ ನಲ್ಲಿ ಟ್ರಯಲ್ ರನ್ ನಡೆಯಬೇಕಿತ್ತು. ಆದರೆ ಸಿವಿಲ್ ಕಾಮಗಾರಿ ಸಂಪೂರ್ಣ ಪೂರ್ಣಗೊಳ್ಳದ ಹಿನ್ನೆಲೆ ಟ್ರಯಲ್ ರನ್ ಇನ್ನೂ ತಡವಾಗಬಹುದು ಎನ್ನಲಾಗಿದೆ. ಹೊರ ವರ್ತುಲ ರಸ್ತೆ (ORR) ಉದ್ದಕ್ಕೆ ಬರುವ ಈ ಮಾರ್ಗವನ್ನು (19.75 ಕಿಮೀ) 2027ರ ಮಧ್ಯ ಭಾಗದಲ್ಲಿ ತೆರೆಯುವಂತೆ, ಅಷ್ಟರೊಳಗೆ ಪೂರ್ತಿ ಕಾಮಗಾರಿ ಮುಗಿಸುವ ಜೊತೆಗೆ ರೈಲುಗಳ ತಪಾಸಣೆ, ಪ್ರಾಯೋಗಿಕ ಸಂಚಾರ ಮುಗಿಸುವಂತೆ ಸೂಚಿಸಲಾಗಿದೆ.
ಏರ್‍ಪೋರ್ಟ್ ನೀಲಿ ಮಾರ್ಗ ವರ್ಷಾಂತ್ಯಕ್ಕೆ..
ನೀಲಿ ಮಾರ್ಗ ಕೆ.ಆರ್.ಪುರಂನಿಂದ ಹೆಬ್ಬಾಳ ಮೂಲಕ ಬೆಂಗಳೂರು ಏರ್ ಪೋರ್ಟ್ (KIA) ವರೆಗಿನ ಮಾರ್ಗವನ್ನು (38.44 ಕಿಮೀ) 2027 ಡಿಸೆಂಬರ್ ಒಳಗೆ ತೆರೆಯುವಂತೆ ಹೊಸ ಗುಡುವು ನೀಡಲಾಗಿದೆ. ಒಟ್ಟಾರೆ ನೀಲಿ ಮಾರ್ಗವು ಸುಮಾರು 59 ಕಿಲೋ ಮೀಟರ್ ಉದ್ದವಿದ್ದು, ಎರಡು ಹಂತಗಳಲ್ಲಿ ಈ ಮಾರ್ಗವು ಲೋಕಾರ್ಪಣೆಗೊಳ್ಳಲಿದೆ.
257 ಕಿಮೀ ಜಾಲ ವಿಸ್ತರಣೆ ಆಗೋದ್ಯಾವಾಗ?
ಈ ಹೊಸ ಗಡುವುಗಳ ಮೂಲಕ 2028ರ ಒಳಗೆ ಬೆಂಗಳೂರು ಮೆಟ್ರೋ ಜಾಲವನ್ನು 175 ಕಿಲೋ ಮೀಟರ್‍ವರೆಗೆ ವಿಸ್ತರಣೆ ಮಾಡಬೇಕೆಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಗುರಿ ಹಾಕಿಕೊಂಡಿದೆ. ಹೀಗಾದಗಲೇ ಈ ಹಿಂದೆ ತಿಳಿಸಿದಂತೆ 2030ರ ಹೊತ್ತಿಗೆ ನಮ್ಮ ಮೆಟ್ರೋ ಬರೋಬ್ಬರಿ ಅಷ್ಟ ದಿಕ್ಕುಗಳಿಗೂ ವಿಸ್ತರಿಸಿ ಒಟ್ಟು 257 ಕಿಲೋ ಮೀಟರ್ ಜಾಲ ವಿಸ್ತರಣೆ ಗುರಿ ತಲುಪಲು ಸಾಧ್ಯವಾಗುತ್ತದೆ.


Click it and Unblock the Notifications
