Bengaluru Metro: ಮೆಟ್ರೋಗೆ ಫೀಡರ್ ಬಸ್ ಸೇವೆ ಆರಂಭಿಸಿದ ಟೆಕ್ ಪಾರ್ಕ್- ಯಾವುದು ತಿಳಿಯಿರಿ
ಬೆಂಗಳೂರು, ಜೂನ್ 12: ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆಯನ್ನು ಬಳಸಲು ನೌಕರರನ್ನು ಉತ್ತೇಜಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋಗೆ ಸಂಪರ್ಕ ಕಲ್ಪಿಸಲು ಫೀಡರ್ ಬಸ್ ಸೇವೆಯನ್ನು ಹಲವು ಟೆಕ್ ಪಾರ್ಕ್‌ಗಳು ನೀಡಲು ಆರಂಭವಿಸಿವೆ. ಟೆಕ್ಕಿಗಳು ಈ ಸೇವೆಯನ್ನು ಬಳಸಿಕೊಂಡು ತಮ್ಮ ಪ್ರಯಾಣದ ಸಮಯವನ್ನೂ ಕಡಿತಗೊಳಿಸಬಹುದು.
ವೈಟ್‌ಫೀಲ್ಡ್- ಕೆಆರ್ ಪುರಂ ನಡುವಿನ ಮೆಟ್ರೋ ಸೇವೆಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಈ ಮಾರ್ಗವು ಟೆಕ್ಕಿಗಳಿಗೆ ಭಾರೀ ಅನುಕೂಲ ಮಾಡಿಕೊಡಲಿದೆ. ವೈಟ್‌ಫಿಲ್ಡ್, ಐಟಿಪಿಎಲ್, ಬಾಗ್ಮನೆ ಟೆಕ್ ಪಾರ್ಕ್ ಸೇರಿದಂತೆ ನಗರದ ಹೆಸರಾಂತ ಟೆಕ್ ಪಾರ್ಕ್‌ಗಳಿಗೆ ಈ ಮೆಟ್ರೋ ಮಾರ್ಗವು ಸಮೀಪವಿದೆ. ಈ ಟೆಕ್‌ಪಾರ್ಕ್‌ಗಳಿಂದ ಮೆಟ್ರೋ ನಿಲ್ದಾಣಕ್ಕೆ ತೆರಳಲು ಸಾಫ್ಟ್‌ವೇರ್ ನೌಕರರಿಗೆ ಫೀಡರ್ ಬಸ್‌ಗಳ ಅವಕಾಶ ನೀಡಲಾಗಿದೆ.

ಈ ಫೀಡರ್ ಬಸ್‌ಗಳು ಟೆಕ್‌ಪಾರ್ಕ್‌ಗಳಿಂದ ಸಮೀಪವಿರುವ ಮೆಟ್ರೋ ನಿಲ್ದಾಣಗಳಿಗೆ ಸೇವೆ ಒದಗಿಸಲಿವೆ. ಈಗಾಗಲೇ ಹಲವು ಟೆಕ್ ಪಾರ್ಕ್‌ಗಳು ಫೀಡರ್ ಸೇವೆಗಳನ್ನು ಆರಂಭಿಸುವ ಹಂತದಲ್ಲಿವೆ.
ಬೆಂಗಳೂರಿನ ಕುಂದನಹಳ್ಳಿಯಲ್ಲಿರುವ ಬಾಗ್ಮನೆ ಸೋಲಾರಿಯಂ ಸಿಟಿಯು ( ಟೆಕ್ ಪಾರ್ಕ್ ) ಕೆಆರ್ ಪುರಂ - ವೈಟ್‌ಫೀಲ್ಡ್ ಮೆಟ್ರೋ ಮಾರ್ಗದ ಸೀತಾರಾಮಪಾಳ್ಯ ಮೆಟ್ರೋ ನಿಲ್ದಾಣಕ್ಕೆ ಫೀಡರ್ ಬಸ್ ಸೇವೆಯನ್ನು ಪ್ರಾರಂಭಿಸಿದೆ. ಇದರಿಂದ ಟೆಕ್ ಪಾರ್ಕ್‌ನಲ್ಲಿ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುವ ನೂರಾರು ಉದ್ಯೋಗಿಗಳ ಪ್ರಯಾಣಕ್ಕೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಫೀಡರ್ ಬಸ್ ಸೇವೆಯು ಪೀಕ್ ಅವರ್‌ನಲ್ಲಿ 10 ನಿಮಿಷಗಳ ಸಮಯ ಆವರ್ತನದೊಂದಿಗೆ ಲಭ್ಯವಿರುತ್ತದೆ ಎಂದು ಹೇಳಲಾಗುತ್ತದೆ.
ಕುಂದನಹಳ್ಳಿ - ವೈಟ್‌ಫೀಲ್ಡ್ ರಸ್ತೆಯು ಟ್ರಾಫಿಕ್ ಸಮಸ್ಯೆಗಳಿಗೆ ಹೆಸರುವಾಸಿಯಾಗಿರುವುದರಿಂದ, ಫೀಡರ್ ಬಸ್ ಸೇವೆಯು ಸಾರ್ವಜನಿಕ ಸಾರಿಗೆ ಬಳಕೆಗೆ ಉತ್ತೇಜನ ನೀಡುತ್ತದೆ. ವಿಶೇಷವಾಗಿ ಟೆಕ್ಕಿಗಳ ಒತ್ತಡವನ್ನೂ ಕಡಿಮೆ ಗೊಳಸುತ್ತದೆ.
ಈ ವಿಚಾರವಾಗಿ ಮಾತನಾಡಿರುವ ಬೆಂಗಳೂರು ಪೊಲೀಸ್ ಕಮಿಷನರ್, 'ಇದು ವಿಶೇಷವಾಗಿ ಐಟಿ ಕಾರಿಡಾರ್‌ನಲ್ಲಿ ದಟ್ಟಣೆಯನ್ನು ಕಡಿಮೆ ಮಾಡಲು ಉತ್ತಮ ಉಪಕ್ರಮವಾಗಿದೆ' ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮೊದಲು ಸಿವಿ ರಾಮನ್ ನಗರದ ಬಾಗ್ಮನೆ ಟೆಕ್ ಪಾರ್ಕ್ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಫೀಡರ್ ಬಸ್ ಸೇವೆಯನ್ನು ಪ್ರಾರಂಭಿಸಿತ್ತು. ಹೆಚ್ಚಿನ ಫೀಡರ್ ಬಸ್‌ಗಳು ಪೂರ್ಣ ಆಕ್ಯುಪೆನ್ಸಿಯನ್ನು ಕಂಡಿದ್ದರಿಂದ ಅದು ಯಶಸ್ವಿಯಾಯಿತು. ಹೊಸದಾಗಿ ಆರಂಭಿಸಲಾದ ಸೇವೆಯು ಸಹ ಅದೇ ರೀತಿಯ ಪ್ರತಿಕ್ರಿಯೆಯನ್ನು ಪಡೆಯುವ ನಿರೀಕ್ಷೆಯಿದೆ.
ಏತನ್ಮಧ್ಯೆ, ಕರ್ನಾಟಕ ಸರ್ಕಾರವು ಈಗಾಗಲೇ ಹೊರವರ್ತುಲ ರಸ್ತೆಯಲ್ಲಿ ಮೆಟ್ರೋ ನಿರ್ಮಾಣವನ್ನು ವೇಗಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದೆ.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು 2026 ರ ವೇಳೆಗೆ ಆರು ಹೊಸ ಮೆಟ್ರೋ ಮಾರ್ಗಗಳನ್ನು ಉದ್ಘಾಟಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಈ ಪೈಕಿ ನಾಲ್ಕು ಮಾರ್ಗಗಳು ಈ ವರ್ಷದ ನವೆಂಬರ್ ವೇಳೆಗೆ ಸಿದ್ಧವಾಗಲಿದೆ ಎಂದು ಘೋಷಿಸಿದ್ದಾರೆ. ಬಹು ನಿರೀಕ್ಷಿತ ಬೈಯಪ್ಪನಹಳ್ಳಿ-ಕೆಆರ್ ಪುರಂ ಮೆಟ್ರೋ ಮಾರ್ಗ ಜುಲೈ ವೇಳೆಗೆ ಉದ್ಘಾಟನೆಗೊಳ್ಳಲಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.











Click it and Unblock the Notifications