Namma Metro: ತಾಂತ್ರಿಕ ದೋಷ, ಎಂಜಿ ರೋಡ್-ಬೈಯಪ್ಪನಹಳ್ಳಿ ಮೆಟ್ರೋ ರೈಲು ಸೇವೆ ವ್ಯತ್ಯಯ
ಬೆಂಗಳೂರು, ಜನವರಿ 27: ಬೆಂಗಳೂರು ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಇಂದು(ಜನವರಿ 27)ರಂದು ತಾಂತ್ರಿಕ ದೋಷ ಉಂಟಾಗಿದ್ದು, ಎಂ.ಜಿ.ರಸ್ತೆ-ಬೈಯಪ್ಪನಹಳ್ಳಿ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ಸದ್ಯ ಚಲ್ಲಘಟ್ಟ-ಎಂ.ಜಿ.ರಸ್ತೆ ಮತ್ತು ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ನಡುವೆ ಎಂದಿನಂತೆ ಮೆಟ್ರೋ ಸಂಚಾರ ಇರಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ತಿಳಿಸಿದೆ.
ನೇರಳೆ ಮಾರ್ಗದಲ್ಲಿ ಮೆಟ್ರೊ ರೈಲು ಸೇವೆಯಲ್ಲಿ ಅಡಚಣೆ ಉಂಟಾಗಿದೆ. ತಾಂತ್ರಿಕ ಅಡಚಣೆಯಿಂದಾಗಿ ಎಂಜಿ ರಸ್ತೆ ಮತ್ತು ಬೈಯಪ್ಪನಹಳ್ಳಿ ನಡುವೆ ಒಂದು ಗಂಟೆ ಕಾಲ ರೈಲು ಸೇವೆ ಲಭ್ಯವಿರುವುದಿಲ್ಲ.

ಪ್ರಸ್ತುತ ರೈಲು ಸೇವೆಗಳು ಎಂಜಿ ರಸ್ತೆ ಮತ್ತು ಚಲ್ಲಘಟ್ಟ ಮತ್ತು ಬೈಯಪ್ಪನಹಳ್ಳಿ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ನಡುವೆ ಮಾತ್ರ ಲಭ್ಯವಿರುತ್ತವೆ. ಹಸಿರು ಮಾರ್ಗದಲ್ಲಿ ರೈಲುಗಳು ಎಂದಿನಂತೆ ಚಲಿಸುತ್ತವೆ. ಉಂಟಾದ ಅನಾನುಕೂಲತೆಗಾಗಿ ವಿಷಾದಿಸುತ್ತೇವೆ ಎಂದು ಬಿಎಂಆರ್‌ಸಿಎಲ್ ವಕ್ತಾರರು ತಿಳಿಸಿದ್ದಾರೆ.
ಪೀಣ್ಯ ಇಂಡಸ್ಟ್ರಿ- ನಾಗಸಂದ್ರ ಮೂರು ದಿನಗಳ ಕಾಲ ಮೆಟ್ರೋ ಸೇವೆ ರದ್ದು
ಇನ್ನು ಹಸಿರು ಮಾರ್ಗದ ಪೀಣ್ಯ ಇಂಡಸ್ಟ್ರಿ ಮತ್ತು ನಾಗಸಂದ್ರ ನಡುವೆ ಮೂರು ದಿನಗಳ ಕಾಲ ಮೆಟ್ರೋ ರೈಲು ಸೇವೆ ಲಭ್ಯವಿರುವುದಿಲ್ಲ ಎಂದು ಈ ಹಿಂದೆಯೇ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಮಾಹಿತಿ ನೀಡಿದೆ.
ನಾಗಸಂದ್ರ ಮತ್ತು ಮಾದಾವರ ನಡುವೆ ಮಾರ್ಗ ವಿಸ್ತರಣೆಗೆ ಸಂಬಂಧಿಸಿದ ವಿದ್ಯುತ್ ಕಾಮಗಾರಿಗಳಿಗೆ ಅನುಕೂಲವಾಗುವಂತೆ ಜನವರಿ 26, 27 ಮತ್ತು 28 ರಂದು ಸಿಲ್ಕ್ ಇನ್‌ಸ್ಟಿಟ್ಯೂಟ್ ಮತ್ತು ಪೀಣ್ಯ ಇಂಡಸ್ಟ್ರಿ ನಡುವೆ ಮಾತ್ರ ಹಸಿರು ಮಾರ್ಗದ ರೈಲುಗಳು ಸಂಚರಿಸಲಿವೆ. ಪೀಣ್ಯ ಇಂಡಸ್ಟ್ರಿ ಮತ್ತು ನಾಗಸಂದ್ರ ನಡುವಿನ ರೈಲು ಸಂಚಾರ ಜನವರಿ 29 ರಂದು ಬೆಳಿಗ್ಗೆ 5 ಗಂಟೆಗೆ ಮತ್ತೆ ಆರಂಭವಾಗಲಿದೆ ಎಂದು ಹೇಳಿದೆ. ಜಾಲಹಳ್ಳಿ, ದಾಸರಹಳ್ಳಿ ಮತ್ತು ನಾಗಸಂದ್ರ ನಿಲ್ದಾಣಗಳಿಂದ/ನಿಲ್ದಾಣಗಳಿಗೆ ತೆರಳುವ ಪ್ರಯಾಣಿಕರಿಗೆ ಮೂರು ದಿನ ತೊಂದರೆಯಾಗಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಜನವರಿ 26ರಿಂದ 29ರವರೆಗೆ ಮೂರು ದಿನ ಪೀಣ್ಯ ಇಂಡಸ್ಟ್ರಿ ಮತ್ತು ಗೊರಗುಂಟೆಪಾಳ್ಯ ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚಿನ ಜನ ಸಂದಣಿ ಉಂಟಾಗುವ ಸಾಧ್ಯತೆ ಇದ್ದು, ಪ್ರಯಾಣಿಕರು ವಿಳಂಬವಾಗುವುದನ್ನು ತಪ್ಪಿಸಲು ವಾಟ್ಸಾಪ್ ಅಥವಾ ನಮ್ಮ ಮೆಟ್ರೋ ಅಪ್ಲಿಕೇಶನ್ ಮೂಲಕ ಕ್ಯೂಆರ್ ಟಿಕೆಟ್ ಖರೀದಿಸುವಂತೆ ಮನವಿ ಮಾಡಿದೆ.












Click it and Unblock the Notifications