ಕರ್ನಾಟಕಕ್ಕೆ ನ್ಯಾಯ ಕೇಳಿದರೆ; ಕೇಂದ್ರದಿಂದ ವಿಚಿತ್ರ ಬಹುಮಾನ ಸಿಕ್ಕಿದೆ ಎಂದ ಸಚಿವ ಕೃಷ್ಣಬೈರೇಗೌಡ
ಬೆಂಗಳೂರು: ಬೆಂಗಳೂರು ನಗರದ ನಮ್ಮ ಮೆಟ್ರೋ ಯೋಜನೆಗೆ ಯಾರು ಹೆಚ್ಚು ಹಣ / ಅನುದಾನ ಕೊಡುತ್ತಿದ್ದಾರೆ ಎನ್ನುವ ವಿಚಾರವು ವಿವಾದ ಸ್ವರೂಪವನ್ನು ಪಡೆದುಕೊಂಡಿದೆ. ಸಂಸದ ತೇಜಸ್ವಿ ಸೂರ್ಯ ಈ ವಿಷಯವನ್ನು ಪ್ರಸ್ತಾಪಿಸಿರುವುದು, ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಸಹ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಕರ್ನಾಟಕ ರಾಜ್ಯಕ್ಕೆ ನ್ಯಾಯ ಕೇಳಿದ್ದಕ್ಕೆ ಸಿಕ್ಕ ಬಹುಮಾನ - ನನ್ನ ಭಾಷಣ ಕಟ್ ಮಾಡಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಆರೋಪಿಸಿದ್ದಾರೆ.
ಕರ್ನಾಟಕ ರಾಜ್ಯಕ್ಕೆ ನ್ಯಾಯ ಕೇಳಿದ್ದಕ್ಕೆ ಸಿಕ್ಕ ಬಹುಮಾನ - ನನ್ನ ಭಾಷಣ ಕಟ್ ಮಾಡಲಾಗಿದೆ. ಬೆಂಗಳೂರು ಅಭಿವೃದ್ಧಿ ಸಚಿವನಿಗೆ ಮೆಟ್ರೋ ಉದ್ಘಾಟನೆಯಲ್ಲಿ ಮಾತನಾಡಲು ಇಲ್ಲ ಅವಕಾಶ. ಸಭಾ ಕಾರ್ಯಕ್ರಮದ ಡ್ರಾಫ್ಟ್ ನಲ್ಲಿ ನನ್ನ ಮಾತಿಗೆ ಅವಕಾಶ ನಿಗದಿಯಾಗಿತ್ತು. ನಿನ್ನೆ ರಾತ್ರಿ ಬಂದ ಅಂತಿಮ ಪಟ್ಟಿಯಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವರ ಮಾತನ್ನು ಕಟ್ ಮಾಡಲಾಗಿದೆ. ಬಹುತೇಕ ಬಂಡವಾಳ ಖರ್ಚು ನಮ್ಮದು. ಕರ್ನಾಟಕಕ್ಕೆ ನ್ಯಾಯಯುತ ಪಾಲು ಕೇಳಿದರೆ ಈ ರೀತಿ ಶಿಕ್ಷೆ. ಪರವಾಗಿಲ್ಲ, ನೀವು ನನ್ನ ಮಾತನ್ನು ಕಟ್ ಮಾಡಬಹುದು. ಆದರೆ ಬೆಂಗಳೂರಿನ ಅಭಿವೃದ್ಧಿಗೆ ಕೆಲಸ ಮಾಡೋದನ್ನ ನಿಲ್ಲಿಸಲಿಕ್ಕೆ ಆಗೋದಿಲ್ಲ. ಇನ್ನೂ ಹೆಚ್ಚಿನ ಪರಿಶ್ರಮದಿಂದ ಕೆಲಸ ಮಾಡುತ್ತೇವೆ ಎಂದೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಹೇಳಿದ್ದಾರೆ.

ಬೆಂಗಳೂರಿನ ಸುಸ್ಥಿರ ಅಭಿವೃದ್ಧಿಗೆ ಸಮರ್ಥ ಮತ್ತು ಬಲಿಷ್ಠ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅತ್ಯಗತ್ಯ. ಮೆಟ್ರೋ ಜಾಲದ ವಿಸ್ತರಣೆ ಹಾಗೂ ನಗರದಲ್ಲಿ ಉತ್ತಮ ಸಾರಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಿರಂತರವಾಗಿ ಹೂಡಿಕೆ ಮಾಡುತ್ತಿದೆ. ಕೇಂದ್ರ ಸರ್ಕಾರದ ಸಹಭಾಗಿತ್ವವೂ ಮತ್ತಷ್ಟು ಬಲಗೊಂಡಲ್ಲಿ, ಮೆಟ್ರೋ ವಿಸ್ತರಣೆಗೆ ಹೆಚ್ಚಿನ ವೇಗ ದೊರೆಯಲಿದ್ದು, ನಗರದ ಹೆಚ್ಚಿನ ಜನರಿಗೆ ಸುಗಮ, ಸುಲಭ ಹಾಗೂ ಪರಿಣಾಮಕಾರಿ ಸಾರಿಗೆ ಸೌಲಭ್ಯ ಒದಗಿಸಲು ಸಾಧ್ಯವಾಗಲಿದೆ ಅಂತ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಹೇಳಿದ್ದಾರೆ.
ನಮ್ಮ ಮೆಟ್ರೋ ಬೆಂಗಳೂರಿನ ಭವಿಷ್ಯದ ಬಗೆಗಿನ ಸಾಮೂಹಿಕ ಬದ್ಧತೆಯಾಗಿದೆ. ಇದರ ವಿಸ್ತರಣೆಗೆ ನಿರಂತರ ಸಹಕಾರ, ಸಮಯೋಚಿತ ನಿರ್ಧಾರಗಳು ಹಾಗೂ ಸಾಮೂಹಿಕ ಜವಾಬ್ದಾರಿಯ ಅಗತ್ಯವಿದೆ. ಉತ್ತಮ ಸಂಪರ್ಕ ವ್ಯವಸ್ಥೆಯನ್ನು ಹೊಂದಿರುವ #BetterBengaluru ನಿರ್ಮಾಣದತ್ತ ನಮ್ಮ ಗಮನ ಸದಾ ಇರಲಿದೆ ಎಂದಿದ್ದಾರೆ.
Bengaluru Metro: ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದೇನು ?
ಇನ್ನು ಈ ವಿಚಾರವಾಗಿ ಮಾತನಾಡಿರುವ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ನಮ್ಮ ಮೆಟ್ರೋಗೆ ಕರ್ನಾಟಕದ ಕೊಡುಗೆ ಕೇವಲ ನಿರ್ಮಾಣ ಕಾರ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಭೂಸ್ವಾಧೀನದಿಂದ ಹಿಡಿದು ದೈನಂದಿನ ಕಾರ್ಯಾಚರಣೆ, ಸಾಲ ಮರುಪಾವತಿ ಹಾಗೂ ಆರ್ಥಿಕ ನೆರವಿನವರೆಗೂ ಪ್ರತಿಯೊಂದು ಹಂತದಲ್ಲೂ ರಾಜ್ಯದ ಪಾಲು ಬಹುದೊಡ್ಡದು. ಬೆಂಗಳೂರಿನ ಮೆಟ್ರೋ ಜಾಲವನ್ನು ಕಟ್ಟಿ, ಯಶಸ್ವಿಯಾಗಿ ಮುನ್ನಡೆಸುವ ಹೊಣೆಗಾರಿಕೆಯನ್ನು ನಾವು ನಿರಂತರವಾಗಿ ನಿಭಾಯಿಸುತ್ತಿದ್ದೇವೆ ಎಂದಿದ್ದಾರೆ.





Click it and Unblock the Notifications
