ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ತಡೆ: ನನ್ನ ಮನವಿಗೆ ಕೇಂದ್ರ ಸಚಿವರು ಶೀಘ್ರವೇ ಸ್ಪಂದಿಸಿದ್ರು ಎಂದ ಅಶೋಕ್
ಬೆಂಗಳೂರು ಮೆಟ್ರೋ ದರ ಏರಿಕೆಗೆ ಸದ್ಯಕ್ಕೆ ತಾತ್ಕಾಲಿಕ ತಡೆ ಬಿದ್ದಿದೆ. ಸೋಮವಾರದಿಂದ ಜಾರಿಗೆ ಬರಬೇಕಿದ್ದ ಮೆಟ್ರೋ ದರ ಏರಿಕೆಯನ್ನು ತಡೆಹಿಡಿಯುವಂತೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಬಿಜೆಪಿ ನಾಯಕ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಆರ್.ಅಶೋಕ್, "ಬೆಂಗಳೂರು ಈಗಾಗಲೇ ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ ದರ ಹೊಂದಿರುವ ನಗರ. ಇಂತಹ ಸಂದರ್ಭದಲ್ಲಿ ಮತ್ತೊಮ್ಮೆ ದರ ಏರಿಕೆ ಮಾಡುವುದು ಲಕ್ಷಾಂತರ ಪ್ರಯಾಣಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ" ಎಂದು ಕೇಂದ್ರ ಸಚಿವರ ಗಮನಕ್ಕೆ ತಂದಿರುವುದಾಗಿ ಹೇಳಿದ್ದಾರೆ.

ಕೇಂದ್ರ ಸಚಿವರೊಂದಿಗೆ ದೂರವಾಣಿ ಸಂಭಾಷಣೆ
ಮೆಟ್ರೋ ದರ ಏರಿಕೆ ವಿಚಾರವಾಗಿ ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರೊಂದಿಗೆ ದೂರವಾಣಿ ಮೂಲಕ ಸುದೀರ್ಘ ಚರ್ಚೆ ನಡೆಸಿರುವುದಾಗಿ ಆರ್.ಅಶೋಕ್ ತಿಳಿಸಿದ್ದಾರೆ. ಪ್ರಯಾಣಿಕರ ಸಂಕಷ್ಟವನ್ನು ಮನಗಂಡ ಕೇಂದ್ರ ಸಚಿವರು ತಕ್ಷಣ ಸ್ಪಂದಿಸಿ, ಪ್ರಸ್ತಾವಿತ ದರ ಏರಿಕೆಯನ್ನು ಸದ್ಯಕ್ಕೆ ಜಾರಿಗೆ ತರಬಾರದೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಹೊಸ ದರ ನಿಗದಿ ಸಮಿತಿಯ ಭರವಸೆ
ದರ ನಿಗದಿ ಸಮಿತಿಯ (Fare Fixation Committee) ಕಾರ್ಯವೈಖರಿಯಲ್ಲಿರುವ ಲೋಪದೋಷಗಳನ್ನು ವೈಯಕ್ತಿಕವಾಗಿ ಪರಿಶೀಲಿಸುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ. ಅಲ್ಲದೆ, ರಾಜ್ಯ ಸರ್ಕಾರ ವಿನಂತಿಸಿದಲ್ಲಿ ವೈಜ್ಞಾನಿಕವಾಗಿ ದರ ಪರಿಷ್ಕರಣೆ ಮಾಡುವ ಹೊಸ ಎಫ್‌ಎಫ್‌ಸಿ ರಚನೆಗೂ ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಎಂದು ಅಶೋಕ್ ಹೇಳಿದ್ದಾರೆ.
ದರ ಏರಿಕೆ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಅಶೋಕ್ ತೀವ್ರ ಟೀಕೆ ನಡೆಸಿದ್ದಾರೆ. "ಜನರ ಹಿತಾಸಕ್ತಿಯನ್ನು ಬದಿಗಿಟ್ಟು ದರ ಏರಿಕೆಗೆ ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತನ್ನ ಹಠಮಾರಿ ಧೋರಣೆಯನ್ನು ಕೈಬಿಟ್ಟು ಕೂಡಲೇ ಹೊಸ ಎಫ್‌ಎಫ್‌ಸಿ ರಚಿಸುವ ಪ್ರಕ್ರಿಯೆ ಆರಂಭಿಸಬೇಕು" ಎಂದು ಅವರು ಆಗ್ರಹಿಸಿದ್ದಾರೆ.
ಮೆಟ್ರೋ ಪ್ರಯಾಣವು ಸಾಮಾನ್ಯ ನಾಗರಿಕನಿಗೂ ಕೈಗೆಟುಕುವ ದರದಲ್ಲಿ ಲಭ್ಯವಾಗುವವರೆಗೂ ಹಾಗೂ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವವರೆಗೂ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ. ಮೆಟ್ರೋ ದರ ಏರಿಕೆ ವಿಚಾರ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ, ತಾತ್ಕಾಲಿಕ ತಡೆ ದೊರೆತಿರುವುದು ಪ್ರಯಾಣಿಕರಿಗೆ ನಿಟ್ಟುಸಿರು ಬಿಡುವಂತಾಗಿದೆ. ಸರ್ಕಾರಗಳು ಮುಂದಿನ ದಿನಗಳಲ್ಲಿ ದರ ಏರಿಕೆ ಬಗ್ಗೆ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ದರ ಹೆಚ್ಚಿಸಿ ಸುಲಿಗೆ
ದರ ಏರಿಕೆ ಸಮಿತಿ ರಚಿಸುವಂತೆ ರಾಜ್ಯ ಸರ್ಕಾರವೇ ಬಿಎಂಆರ್‌ಸಿಎಲ್‌ಗೆ ಪತ್ರಗಳನ್ನು ಬರೆದು ಒತ್ತಡ ಹೇರಿ ಈಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದೆ. ಆರ್ಥಿಕವಾಗಿ ದಿವಾಳಿಯಾಗಿರುವ ಕಾಂಗ್ರೆಸ್ ಸರ್ಕಾರ ಮೆಟ್ರೋ ದರ ಹೆಚ್ಚಿಸಿ ಬಡ-ಮಧ್ಯಮ ವರ್ಗದ ಜನರಿಂದ ತಿಂಗಳಿಗೆ 5-6 ಸಾವಿರ ರೂ. ಸುಲಿಗೆ ಮಾಡುತ್ತಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಒಬ್ಬರು ಕುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ, ಇನ್ನೊಬ್ಬರು ಕುರ್ಚಿ ಕಸಿಯಲು ಓಡಾಡುತ್ತಿದ್ದಾರೆ! ಇವರ ಈ 'ಕುರ್ಚಿ ಕಿತ್ತಾಟ'ಕ್ಕೆ ಬೆಂಗಳೂರಿನ ಜನ ಬಲಿಯಾಗುತ್ತಿದಾರೆ ಎಂದಿದ್ದಾರೆ.












Click it and Unblock the Notifications