ಬೆಂಗಳೂರಲ್ಲಿ ಹೊಸ ರೈಲ್ವೆ ಟರ್ಮಿನಲ್: ಯಾವ ಪ್ರದೇಶ, ವಿವರ
ಬೆಂಗಳೂರು, ಜನವರಿ 09: ಭಾರತೀಯ ರೈಲ್ವೆ ಬೆಂಗಳೂರು ನಗರದ ಹೊರ ಭಾಗದಲ್ಲಿ ಬೃಹತ್ ರೈಲ್ವೆ ಟರ್ಮಿನಲ್ ನಿರ್ಮಾಣ ಮಾಡಲು ಮುಂದಾಗಿದೆ. ಕೇಂದ್ರ ಸರ್ಕಾರದ ಯೋಜನೆಯ ಭಾಗವಾಗಿ, ನಗರದಲ್ಲಿ ಭವಿಷ್ಯದಲ್ಲಿ ಉಂಟಾಗುವ ರೈಲುಗಳ ಒತ್ತಡವನ್ನು ಕಡಿಮೆ ಮಾಡಲು ಈ ಟರ್ಮಿನಲ್ ನಿರ್ಮಾಣವಾಗುತ್ತಿದೆ. ಸುಮಾರು 750 ಎಕರೆ ಪ್ರದೇಶದಲ್ಲಿ ಈ ಟರ್ಮಿನಲ್ ನಿರ್ಮಾಣವಾಗಲಿದ್ದು, ಪ್ರದೇಶದ ಬಗ್ಗೆ ಇಲಾಖೆ ಇನ್ನೂ ಅಂತಿಮ ತೀರ್ಮಾನ ಮಾಡಬೇಕಿದೆ.
ಕರ್ನಾಟಕದಲ್ಲಿ ಸದ್ಯದ ಮಟ್ಟಿಗೆ ಮೆಜೆಸ್ಟಿಕ್‌ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ಅತಿ ದೊಡ್ಡ ಟರ್ಮಿನಲ್ ಆಗಿದೆ. ಆದರೆ ಇದನ್ನು ವಿಸ್ತರಣೆ ಮಾಡಲು ಜಾಗದ ಸಮಸ್ಯೆ ಇದೆ. ಆದ್ದರಿಂದ ನಗರದ ಹೊರಗೆ, ಸಮತಟ್ಟಾದ ಜಾಗದಲ್ಲಿ ಹೊಸ ಟರ್ಮಿನಲ್ ನಿರ್ಮಾಣವಾಗಲಿದೆ.

ನಗರದ ಒಳಗಿರುವ ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ವಿಶ್ವೇಶ್ವರಯ್ಯ ಟರ್ಮಿನಲ್ ಮೇಲಿನ ಒತ್ತಡವನ್ನು ಕಡಿಮೆ ಮಾಡಲು, ಭವಿಷ್ಯದಲ್ಲಿ ನಗರದಲ್ಲಿ ಆಗುವ ರೈಲುಗಳ ಒತ್ತಡ ಕಡಿಮೆ ಮಾಡಲು, ವಂದೇ ಭಾರತ್ ಮಾದರಿ ರೈಲುಗಳನ್ನು ನಿರ್ವಹಣೆ ಮಾಡಲು ಈ ಟರ್ಮಿನಲ್ ನಿರ್ಮಾಣ ಮಾಡಲಾಗುತ್ತಿದೆ.
ಎಲ್ಲಿ ನಿರ್ಮಾಣವಾಗಲಿದೆ?: ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗ ನಗರದ ಹೊರ ಭಾಗದಲ್ಲಿ ರೈಲ್ವೆ ಟರ್ಮಿನಲ್ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಿದೆ. ಈ ಯೋಜನೆ ಪ್ರಾಥಮಿಕ ಹಂತವಾಗಿ ಕಾರ್ಯಸಾಧ್ಯತಾ ವರದಿಯನ್ನು ತಯಾರು ಮಾಡಲು ಅನುಮತಿ ನೀಡಲಾಗಿದೆ. ಈ ವರದಿಯನ್ನು ರೈಲ್ವೆ ಮಂಡಳಿಗೆ ಸಲ್ಲಿಕೆ ಮಾಡಿದ ಬಳಿಕ ಅಂತಿಮ ಒಪ್ಪಿಗೆ ಸಿಗಬೇಕಿದೆ.
ದೇವನಹಳ್ಳಿ ಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ-44ಕ್ಕೆ ಹೊಂದಿಕೊಂಡಂತೆ ಇರುವ ವೆಂಕಟಗಿರಿಕೋಟೆ ವ್ಯಾಪ್ತಿಯಲ್ಲಿ ಹೊಸ ಟರ್ಮಿನಲ್ ನಿರ್ಮಾಣವಾಗಲಿದೆ. ಮಾಹಿತಿಗಳ ಪ್ರಕಾರ ಅವತಿ ಹಾಗೂ ವೆಂಕಟಗಿರಿಕೋಟೆ ರೈಲು ನಿಲ್ದಾಣಗಳ ನಡುವೆ ಬುಳ್ಳಹಳ್ಳಿ, ವೆಂಕಟಗಿರಿಕೋಟೆ, ತಟ್ಟಮಾಚನಹಳ್ಳಿ, ಇರಿಗೇನಹಳ್ಳಿ, ಜಿ. ಹೊಸೂರು ಭಾಗದಲ್ಲಿ 750 ಎಕರೆ ಪ್ರದೇಶವಿದೆ. ಇಲ್ಲಿಯೇ ಟರ್ಮಿನಲ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.
ಈ ಪ್ರದೇಶ ಸಮತಟ್ಟಾಗಿದೆ, ಅಲ್ಲದೇ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿದೆ. ಇಲ್ಲಿ ಟರ್ಮಿನಲ್ ನಿರ್ಮಾಣ ಮಾಡಿದರೆ ಚಿಕ್ಕಬಳ್ಳಾಪುರ, ಗುಂತಕಲ್ ಮೂಲಕ ಹೊರ ರಾಜ್ಯಕ್ಕೆ ಸಹ ಸಂಪರ್ಕ ಕಲ್ಪಿಸಲು ಅನುಕೂಲವಾಗಲಿದೆ. ಆದ್ದರಿಂದ ಈ ಸ್ಥಳ ಅಂತಿಮವಾಗುವು ನಿರೀಕ್ಷೆ ಇದೆ.
ಸದ್ಯ ಕೆಎಸ್‌ಆರ್ ಬೆಂಗಳೂರು ನಿಲ್ದಾಣದಲ್ಲಿರುವ ಟರ್ಮಿನಲ್ 10 ಪ್ಲಾಟ್ ಫಾರಂ, 6 ಸ್ಟಾಬ್ಲಿಂಗ್ ಲೈನ್ ಹಾಗೂ ರೈಲುಗಳ ಸ್ವಚ್ಛತೆ ಮತ್ತು ನಿರ್ವಹಣೆಗಾಗಿ 5 ಪಿಟ್‌ಲೈನ್‌ಗಳಿವೆ. ಆದರೆ ಈಗ ಉದ್ದೇಶಿಸಿರುವ ಟರ್ಮಿನಲ್ ಇದಕ್ಕಿಂತ ದೊಡ್ಡದು. ಸುಮಾರು 16 ಪ್ಲಾಟ್ ಫಾರಂ, 20 ಸ್ಟಾಬ್ಲಿಂಗ್ ಲೈನ್ ಹಾಗೂ 10 ಪಿಟ್‌ಲೈನ್‌ಗಳು ಇರಲಿವೆ ಎಂದು ಅಂದಾಜಿಸಲಾಗಿದೆ.
ಭವಿಷ್ಯದಲ್ಲಿ ಸಬ್ ಅರ್ಬನ್ ರೈಲಿಗೆ ಸಂಪರ್ಕ ಕಲ್ಪಿಸುವುದು, ನಗರದ ಒಳಗಿರುವ ನಿಲ್ದಾಣದ ಒತ್ತಡ ಕಡಿಮೆ ಮಾಡುವುದು ಮತ್ತು ಕೇಂದ್ರ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವ ಉದ್ದೇಶಗಳನ್ನು ಇಟ್ಟುಕೊಂಡು ಈ ಟರ್ಮಿನಲ್ ಯೋಜನೆ ರೂಪಿಸಲಾಗಿದೆ.












Click it and Unblock the Notifications