ಪತ್ನಿಯನ್ನೇ ತಂಗಿ ಎಂದು ನಂಬಿಸಿ ಮ್ಯಾಟ್ರಿಮೋನಿಯಲ್ಲಿ ಬೇರೆ ಯುವತಿಗೆ ಗಾಳ, ₹1.75 ಕೋಟಿ ವಂಚನೆ
ಬೆಂಗಳೂರು: ಡಿಜಿಟಲ್ ಯುಗದಲ್ಲಿ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳ ಮೂಲಕ ನಡೆಯುವ ವಂಚನೆಗಳು ಎಷ್ಟರ ಮಟ್ಟಿಗೆ ಅಪಾಯಕಾರಿ ಎನ್ನುವುದಕ್ಕೆ ಮತ್ತೊಂದು ಬೆಚ್ಚಿಬೀಳಿಸುವ ಉದಾಹರಣೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ವೈಟ್‌ಫೀಲ್ಡ್‌ನ ಸಾಫ್ಟ್‌ವೇರ್ ಇಂಜಿನಿಯರ್ ಯುವತಿಯನ್ನು ಮದುವೆಯಾಗುವ ಭರವಸೆ ನೀಡಿ, ಅಪಾರ ಸಂಪತ್ತಿನ ಸುಳ್ಳು ಕಥೆ ಕಟ್ಟಿ, ಬರೋಬ್ಬರಿ ₹1.75 ಕೋಟಿ ರೂಪಾಯಿ ವಂಚಿಸಿರುವ ಘಟನೆ ನಗರವನ್ನ ಬೆಚ್ಚಿಬೀಳಿಸಿದೆ.
₹715 ಕೋಟಿ ಒಡೆಯ ಎಂದು ಪರಿಚಯ
ಈ ಪ್ರಕರಣದಲ್ಲಿ ಆರೋಪಿಯೊಬ್ಬನೇ ಅಲ್ಲ, ಅವನ ಇಡೀ ಕುಟುಂಬವೇ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ಪೊಲೀಸರ ತನಿಖೆಯಿಂದ ಹೊರಬರುತ್ತಿದೆ. ಮಾರ್ಚ್ 2024ರಲ್ಲಿ ಈ ಯುವತಿ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ವಿಜಯ್ ರಾಜ್ ಗೌಡ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ತನ್ನನ್ನು ₹715 ಕೋಟಿ ಮೌಲ್ಯದ ಆಸ್ತಿ ಹೊಂದಿರುವ ಶ್ರೀಮಂತ ಉದ್ಯಮಿ ಎಂದು ವಿಜಯ್ ಪರಿಚಯಿಸಿಕೊಂಡಿದ್ದ. ಅಲ್ಲದೆ ತನ್ನ ತಂದೆಯನ್ನು ನಿವೃತ್ತ ತಹಶೀಲ್ದಾರ್ ಎಂದು ಪರಿಚಯಿಸಿದ್ದ.

ಕುಟುಂಬದ ಸದಸ್ಯರೊಂದಿಗೆ ಭೇಟಿ, ನಿರಂತರ ಮಾತುಕತೆ, ಸಾಮಾಜಿಕ ಸ್ಥಾನಮಾನವನ್ನು ತೋರಿಸುವ ಸುಳ್ಳು ನಾಟಕಗಳಿಂದ ಯುವತಿಯನ್ನು ನಂಬಿಸಿದ್ದ. ಅಲ್ಲದೆ ಕೆಂಗೇರಿ ಸಮೀಪ ಸುಳ್ಳು ಮದುವೆ ಕಥೆ ಕಟ್ಟಿ, ನಿಮ್ಮ ಹಣಕ್ಕೆ ನಾನು ಹೊಣೆ ಎಂದು ಭರವಸೆ ನೀಡಿದ್ದ. ಆದರೆ ಅಸಲಿಗೆ ವಿಜಯ್ ಈಗಾಗಲೇ ಮದುವೆಯಾಗಿದ್ದು, ಒಂದು ಮಗು ಕೂಡ ಇದೆ. ಆದರೆ ತನ್ನ ಪತ್ನಿಯನ್ನೇ 'ತಂಗಿ' ಎಂದು ಈ ಯುವತಿಗೆ ಪರಿಚಯಿಸಿ, ತಾನು ಅವಿವಾಹಿತನಂತೆ ನಟಿಸಿದ್ದ ಎನ್ನಲಾಗಿದೆ.
ಯುವತಿಯ ವಿಶ್ವಾಸ ಗಳಿಸಿದ ನಂತರ, ವಿಜಯ್ ಜಾರಿ ನಿರ್ದೇಶನಾಲಯ ತನ್ನ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿದೆ ಎಂಬ ನಕಲಿ ದಾಖಲೆಗಳನ್ನು ತೋರಿಸಿ, ಹಣ ಕೇಳಲು ಆರಂಭಿಸಿದ್ದ. ಯುವತಿಯಿಂದ ವಿವಿಧ ಬ್ಯಾಂಕ್‌ಗಳಿಂದ ಸಾಲ ಪಡೆಯುವಂತೆ ಪ್ರೇರೇಪಿಸಿದ್ದು, ಆಕೆಯ ಸ್ನೇಹಿತರು ಹಾಗೂ ಸಂಬಂಧಿಕರಿಂದಲೂ ಹಣ ತರಿಸಿಕೊಂಡಿದ್ದ. ಇದೇ ರೀತಿ ಹಂತ ಹಂತವಾಗಿ ಒಟ್ಟು ₹1.75 ಕೋಟಿ ಹಣ ವಿಜಯ್ ಖಾತೆಗೆ ವರ್ಗಾವಣೆಯಾಗಿತ್ತು.
ಹಣ ವಾಪಸ್ ಕೇಳಿದಾಗ, ವಿಜಯ್ ಹೈಕೋರ್ಟ್, ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿದೆ ಎಂದು ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದ. ಆದರೆ ಯುವತಿಯ ಒತ್ತಡಕ್ಕೆ ಒಳಗಾಗಿ ₹22 ಲಕ್ಷ ವಾಪಸ್ ನೀಡಿದ್ದ. ಉಳಿದ ಹಣ ಕೇಳಿದ್ದಕ್ಕೆ ಜೀವ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ವಂಚನೆ ಬಯಲಿಗೆ ಬಂದಿದ್ದೇಗೆ?
ನಂತರ ಯುವತಿಗೆ ವಿಜಯ್ ಈಗಾಗಲೇ ಮದುವೆಯಾಗಿರುವ ವಿಚಾರ ಗೊತ್ತಾಗಿ ವಂಚನೆಗೆ ಒಳಗಾದ ಅರಿವಾಯಿತು. ಬಳಿಕ ವಿಜಯ್ ರಾಜ್ ಗೌಡ, ಬೋರೇಗೌಡ ಹಾಗೂ ಸೌಮ್ಯ ವಿರುದ್ಧ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಇದನ್ನು ನಂತರ ಕೆಂಗೇರಿ ಠಾಣೆಗೆ ವರ್ಗಾಯಿಸಲಾಗಿದೆ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸತ್ಯಾಂಶಗಳು ಹೊರಬರಲಿದೆ.
ಮ್ಯಾಟ್ರಿಮೋನಿಯಲ್ ತಾಣಗಳ ಮೂಲಕ ಪರಿಚಯವಾಗುವವರ ಬಗ್ಗೆ ಸಂಪೂರ್ಣ ಹಿನ್ನೆಲೆ ಪರಿಶೀಲನೆ, ಮದುವೆ ಮತ್ತು ವ್ಯವಹಾರಗಳ ಹೆಸರಿನಲ್ಲಿ ನಂಬಿಕೆ ದುರುಪಯೋಗಪಡಿಸಿಕೊಳ್ಳುವ ಇಂತಹ ವಂಚನೆಗಳಿಂದ ಜನರು ಎಚ್ಚರಿಕೆಯಿಂದಿರಬೇಕೆಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications