ಬೆಂಗಳೂರಲ್ಲಿ ಇ ಖಾತಾ ಸೇರಿ ಈ ಸಮಸ್ಯೆಗಳ ಪರಿಹಾರಕ್ಕೆ ಫೋನ್ ಇನ್ ಕಾರ್ಯಕ್ರಮ
ಬೆಂಗಳೂರಿನ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬದಲಾಗಿ, ಗ್ರೇಟರ್ ಬೆಂಗಳೂರು ಆಡಳಿತ ರಚನೆ ಮಾಡಲಾಗಿದೆ. ಇದೀಗ ಬೆಂಗಳೂರಿನಲ್ಲಿ ಗ್ರೇಟರ್ ಬೆಂಗಳೂರು ಆಡಳಿತದ ಐದು ನಗರ ಪಾಲಿಕೆಗಳನ್ನು ರಚನೆ ಮಾಡಲಾಗಿದ್ದು. ಈ ಐದು ನಗರ ಪಾಲಿಕೆಗಳಲ್ಲಿ ಒಂದೊಂದು ಪಾಲಿಕೆಯು ಒಂದೊಂದು ಮಹತ್ವದ ಯೋಜನೆಗಳನ್ನು ಪರಿಚಯಿಸುತ್ತಿವೆ. ಈ ವಿನೂತನ ಯೋಜನೆಗಳಿಂದ ಜನರಿಗೆ ಅನುಕೂಲವಾಗುತ್ತಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆಯು ಇದೀಗ ಹೊಸ ಯೋಜನೆಯೊಂದನ್ನು ಪರಿಚಯಿಸುತ್ತಿದೆ. ಈ ಹಿಂದೆ ಮೇಯರ್ ಹಾಗೂ ಉಪ ಮೇಯರ್ ಇರುವ ಸಂದರ್ಭದಲ್ಲಿ ವಿವಿಧ ಸ್ಥಳಗಳಿಗೆ ಭೇಟಿ ಕೊಡುತ್ತಿದ್ದರು. ಅಲ್ಲದೇ ಫೋನ್ ಇನ್ ಕಾರ್ಯಕ್ರಮಗಳು ಸಹ ನಡೆದಿದ್ದವು. ಇದೀಗ ಕಳೆದ ಐದು ವರ್ಷಗಳಿಂದ ನಗರ ಪಾಲಿಕೆ ಚುನಾವಣೆ ನಡೆದಿಲ್ಲ. ಈ ನಡುವೆ ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರವರಿಂದ ಪ್ರತಿ ಶುಕ್ರವಾರ ಫೋನ್-ಇನ್ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ.

ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಅಹವಾಲುಗಳನ್ನು ನೇರವಾಗಿ ಅಧಿಕಾರಿಗಳಿಗೆ ತಲುಪಿಸುವ ಮೂಲಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ಇದೇ ಸೆಪ್ಟಂಬರ್ 26 ರಿಂದ ಪ್ರತಿ ಶುಕ್ರವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಎರಡು ಗಂಟೆಗಳ ಕಾಲ ಕಾಲಮಿತಿಯೊಳಗೆ ಫೋನ್-ಇನ್ ಕಾರ್ಯಕ್ರಮ ನಡೆಸಲಿದ್ದಾರೆ.
ಈ ವೇಳೆಯಲ್ಲಿ ಸಾರ್ವಜನಿಕರು ರಸ್ತೆ ಗುಂಡಿಗಳು, ಬೀದಿ ದೀಪ ದುರಸ್ತಿ, ಕಸದ ಸಮಸ್ಯೆಗಳು, ಅಪಾಯಕರಿ ಮರ/ಕೊಂಬೆಗಳ ಕತ್ತರಿಸುವಿಕೆ, ಸೊಳ್ಳೆ ನಿಯಂತ್ರಣ, ಬೀದಿ ನಾಯಿಗಳ ಹಾವಳಿ, ಉದ್ಯಾನವನಗಳ ನಿರ್ವಹಣೆ,ಅನಧಿಕೃತ ಬ್ಯಾನರ್/ಪೋಸ್ಟರ್‌ಗಳ ತೆರವು, ಪಾದಚಾರಿ ಮಾರ್ಗದ ಒತ್ತುವರಿ, ಇ-ಖಾತಾ ಸಂಬಂಧಿತ ಸಮಸ್ಯೆಗಳು ಮತ್ತು ಚರಂಡಿ ಶುದ್ಧೀಕರಣಕ್ಕೆ ಸಂಬಂಧಿಸಿದ ಅಹವಾಲುಗಳನ್ನು ಸಲ್ಲಿಸಬಹುದಾಗಿದ್ದು, ಪ್ರತಿ ದೂರು ಸಹಾಯ 2.0 ಪೋರ್ಟಲ್‌ನಲ್ಲಿ ದಾಖಲಾಗಿ, ಸಂಬಂಧಿಸಿದ ಅಧಿಕಾರಿಗೆ ನಿಯೋಜಿಸಲಾಗುವುದು. ಅಲ್ಲದೇ ಸಾರ್ವಜನಿಕರಿಗೆ SMS ಮುಖಾಂತರ ದೂರು ಸ್ವೀಕೃತಿಯ ಮಾಹಿತಿ ಹಾಗೂ ಅಧಿಕಾರಿಯ ವಿವರ ಕಳುಹಿಸಲಾಗುತ್ತದೆ ಎಂದು ಬೆಂಗಳೂರು ಉತ್ತರ ನಗರ ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಿಯಂತ್ರಣ ಕೊಠಡಿ ಸಂಪರ್ಕ ಸಂಖ್ಯೆ:
ಮೊಬೈಲ್ & ವಾಟ್ಸಪ್: 9480685705
ಲ್ಯಾಂಡ್‌ಲೈನ್: 080-22975936 / 080-23636671
ಅಥವಾ ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ಸಹಾಯ ಆಪ್ ಮುಂಖಾಂತರ ನೊಂದಾಯಿಸಬಹುದು. ಕ್ಯೂ ಆರ್ ಕೊಡ್ ಸ್ಕ್ಯಾನ್ ಮಾಡಿ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.












Click it and Unblock the Notifications