ತರಕಾರಿ, ಹೂವು ವ್ಯಾಪಾರಿಗಳ ತಲೆಯಲ್ಲಿ ವಿಚಿತ್ರ ಕ್ಯಾಮೆರಾ: ಕೆಆರ್ ಮಾರುಕಟ್ಟೆನಲ್ಲಿ ನಡೆಯುತ್ತಿದೆಯಾ AI ರೋಬೋಟ್ ತರಬೇತಿ?
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಎಂದರೆ ಅಲ್ಲಿ ಪ್ರತಿದಿನ ಒಂದಲ್ಲ ಒಂದು ಹೊಸ ತಂತ್ರಜ್ಞಾನದ ಆವಿಷ್ಕಾರಗಳು ಅಥವಾ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಆದರೆ, ಈ ಬಾರಿ ಇಂತಹದೊಂದು ವಿಚಿತ್ರ ಪ್ರಯೋಗಕ್ಕೆ ನಡೆದಿದೆ. ಆದ್ರೆ ಅದು ಐಟಿ ಕಾರಿಡಾರ್‌ಗಳಲ್ಲ, ಬದಲಿಗೆ ನಗರದ ಅತ್ಯಂತ ಜನದಟ್ಟಣೆಯ ಹಾಗೂ ಹಳೆಯ ಮಾರುಕಟ್ಟೆಯಾದ ಕೆಆರ್ ಮಾರುಕಟ್ಟೆಯಲ್ಲಿ.
ಹೌದು, ಹೂವು, ಹಣ್ಣು ಮತ್ತು ತರಕಾರಿಗಳ ವ್ಯಾಪಾರಕ್ಕೆ ಹೆಸರಾಗಿರುವ ಕೆಆರ್ ಮಾರುಕಟ್ಟೆ ಇದೀಗ ಇನ್ನೊಂದು ಅಚ್ಚರಿಯ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಇಲ್ಲಿನ ಕೆಲವು ತರಕಾರಿ ಮತ್ತು ಹೂವಿನ ವ್ಯಾಪಾರಿಗಳು ತಮ್ಮ ತಲೆಗೆ ವಿಚಿತ್ರವಾದ ಕ್ಯಾಮೆರಾವೊಂದನ್ನ ಅಳವಡಿಸಿಕೊಂಡು ದೈನಂದಿನ ವ್ಯಾಪಾರ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ತಲೆಗೆ ಕ್ಯಾಮೆರಾ ಧರಿಸಿಕೊಂಡ ತರಕಾರಿ ವ್ಯಾಪಾರಿಗಳು
ಇನ್‌ಸ್ಟಾಗ್ರಾಮ್‌ನ ಕ್ಯಾಂಡಿಡ್ ಬೆಂಗಳೂರು ಎಂಬ ಪೇಜ್‌ನಲ್ಲಿ ಈ ಅಚ್ಚರಿಯ ಫೋಟೋಗಳನ್ನ ಹಂಚಿಕೊಳ್ಳಲಾಗಿದೆ. ಈ ಫೋಟೋಗಳಲ್ಲಿ, ಮಾರುಕಟ್ಟೆಯ ತರಕಾರಿ ವ್ಯಾಪಾರಿಗಳು ಮತ್ತು ಹೂವು ಮಾರುವವರು ತಲೆಗೆ ಹೆಡ್-ಮೌಂಟೆಡ್ (head-mounted) ಕ್ಯಾಮೆರಾಗಳನ್ನ ಧರಿಸಿರುವುದು ಕಾಣಿಸುತ್ತಿದೆ.
ತಲೆಗೆ ಇಷ್ಟೊಂದು ದೊಡ್ಡ ಸಾಧನವನ್ನ ಅಳವಡಿಸಿಕೊಂಡಿದ್ದರೂ, ವ್ಯಾಪಾರಿಗಳು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಗ್ರಾಹಕರೊಂದಿಗೆ ಚೌಕಾಸಿ ಮಾಡುತ್ತಾ, ತಮ್ಮ ದೈನಂದಿನ ಕಾಯಕದಲ್ಲಿ ನಿರತರಾಗಿದ್ದಾರೆ. ಈ ಕ್ಯಾಮೆರಾಗಳು ವ್ಯಾಪಾರಿಗಳ ಪ್ರತಿಯೊಂದು ಚಲನವಲನ, ಅವರು ವಸ್ತುಗಳನ್ನ ಕೈಯಿಂದ ಹಿಡಿಯುವ ರೀತಿ ಹಾಗೂ ಗ್ರಾಹಕರೊಂದಿಗೆ ಅವರು ನಡೆಸುವ ಸಂವಹನವನ್ನ ನಿರಂತರವಾಗಿ ರೆಕಾರ್ಡ್ ಮಾಡುತ್ತಿವೆ.
ಎಐ ರೋಬೋಟ್ ತರಬೇತಿಗೆ ಡೇಟಾ ಸಂಗ್ರಹದ ತಂತ್ರ?
ಸಾಂಪ್ರದಾಯಿಕ ಮಾರುಕಟ್ಟೆಯಲ್ಲಿ ಇಂತಹ ಹೈಟೆಕ್ ತಂತ್ರಜ್ಞಾನವನ್ನ ಏಕೆ ಬಳಸಲಾಗುತ್ತಿದೆ ಎಂಬ ಪ್ರಶ್ನೆಗೆ ನೆಟ್ಟಿಗರು ಹಲವು ಉತ್ತರಗಳನ್ನ ನೀಡುತ್ತಿದ್ದಾರೆ. ತಜ್ಞರು ಮತ್ತು ಕೆಲವು ಟೆಕ್ ಆಸಕ್ತರು ಹೇಳುವ ಪ್ರಕಾರ, ಇದು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಒಂದು ಭಾಗವಾಗಿದೆ.
ಮನುಷ್ಯರು ಕೆಲಸ ಮಾಡುವ ವಿಧಾನವನ್ನ ಸೆರೆಹಿಡಿಯಲು ವೇರಬಲ್ ಮೋಷನ್-ಕ್ಯಾಪ್ಚರ್ ಸಾಧನಗಳನ್ನ ಬಳಸಲಾಗುತ್ತಿದೆ. ಮನುಷ್ಯನ ಸಣ್ಣಪುಟ್ಟ ಕೈಸನ್ನೆಗಳು, ಚಲನೆಗಳು ಮತ್ತು ದಿನನಿತ್ಯದ ಕಾರ್ಯಗಳನ್ನ ಎಐ ರೋಬೋಟ್‌ಗೆ ತರಬೇತಿ ನೀಡಲು ಈ ಡೇಟಾವನ್ನ ಬಳಸಿಕೊಳ್ಳಲಾಗುತ್ತದೆ. ಅಂದರೆ, ಭವಿಷ್ಯದಲ್ಲಿ ಹ್ಯೂಮನಾಯ್ಡ್ ರೋಬೋಟ್‌ಗಳು ಮನುಷ್ಯರಂತೆಯೇ ಸರಿಯಾಗಿ ಕೆಲಸ ಮಾಡಲು ಈ ದತ್ತಾಂಶಗಳು ಸಹಾಯ ಮಾಡುತ್ತವೆ.
ಜಾಲತಾಣದಲ್ಲಿ ಕುತೂಹಲ, ನೆಟ್ಟಿಗರ ತಮಾಷೆಯ ಪ್ರತಿಕ್ರಿಯೆ
ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಬಳಕೆದಾರರಿಂದ ತರಹೇವಾರಿ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಬಳಕೆದಾರರೊಬ್ಬರು ತಮಾಷೆಯಾಗಿ, "ಅಂದರೆ ಭವಿಷ್ಯದಲ್ಲಿ ರೋಬೋಟ್‌ಗಳು ನಮಗೆ ಸೊಪ್ಪು ಮತ್ತು ಈರುಳ್ಳಿ ಮಾರಾಟ ಮಾಡುತ್ತವೆಯೇ?" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಬಳಕೆದಾರರು, "ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಗ್ರಾಹಕರನ್ನ ಕರೆಯಲು 'ಕಾಲ್ ಕೆಜಿ ಐವತ್ತು.. ಕಾಲ್ ಕೆಜಿ ಐವತ್ತು..' ಎಂದು ಕೂಗುತ್ತಾರಲ್ಲ, ಆ ಮೆದುಳಿನ ತರಂಗಾಂತರಗಳನ್ನ ರೆಕಾರ್ಡ್ ಮಾಡಲು ಈ ಗ್ಯಾಜೆಟ್ ಬಳಸುತ್ತಿರಬಹುದು" ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಭವಿಷ್ಯದಲ್ಲಿ ಮನುಷ್ಯರ ಉದ್ಯೋಗ ಕಸಿದುಕೊಳ್ಳುವ ಆತಂಕ
ಒಂದೆಡೆ ಈ ತಂತ್ರಜ್ಞಾನದ ಬಗ್ಗೆ ಕುತೂಹಲ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಇದು ಮಾನವರ ಉದ್ಯೋಗಕ್ಕೆ ಕುತ್ತು ತರುವ ಆತಂಕವನ್ನ ಸೃಷ್ಟಿಸಿದೆ. "ಕೆಲವೇ ಕೆಲವು ಹಣಕ್ಕಾಗಿ ದಯವಿಟ್ಟು ಇಂತಹ ಸಾಧನಗಳನ್ನ ಧರಿಸಿ ನಿಮ್ಮ ಡೇಟಾ ನೀಡಬೇಡಿ. ಮುಂದೊಂದು ದಿನ ಇದು ನಮ್ಮ ಉದ್ಯೋಗಗಳನ್ನ ಕಸಿದುಕೊಂಡು, ನಮ್ಮನ್ನ ಗುಲಾಮರನ್ನಾಗಿ ಮಾಡುತ್ತದೆ" ಎಂದು ಬಳಕೆದಾರರೊಬ್ಬರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.




Click it and Unblock the Notifications
