ಬೆಂಗಳೂರು ಕಂಬಳ: ಬಹುಮಾನ ಘೋಷಣೆ ಹೇಗೆ..? ಗೆದ್ದವರಿಗೆ ಸಿಗುವ ಚಿನ್ನವೆಷ್ಟು..?
ಬೆಂಗಳೂರು, ನವೆಂಬರ್ 24: ಕರಾವಳಿಯ ಕ್ರೀಡೆ ಹಾಗೂ ಸಂಸ್ಕೃತಿಗಳ ಆಚರಣೆಗಳು ಬೆಂಗಳೂರು ನಗರದಲ್ಲಿಯೂ ನಡೆಯುತ್ತಿದ್ದು, ಇದೀಗ ಇತಿಹಾಸದಲ್ಲೇ ಮೊದಲ ಬಾರಿಗೆ ಸಿಲಿಕಾನ್ ಸಿಟಿಯಲ್ಲಿ ಕಂಬಳ ಆಯೋಜನೆ ಮಾಡಲಾಗಿದೆ. ನಾಳೆ ಹಾಗೂ ನಾಡಿದ್ದು, ಅಂದರೆ ನವೆಂಬರ್ 25 ಮತ್ತು 26 ರಂದು ಅರಮನೆ ಮೈದಾನದಲ್ಲಿ ಬೆಂಗಳೂರು ಕಂಬಳ ನಡೆಯಲಿದೆ.
ಬೆಂಗಳೂರು ಕಂಬಳಕ್ಕೆ ಸಕಲ ಸಿದ್ಧತೆಗಳು ಅಂತಿಮಗೊಂಡಿದ್ದು, ಉಡುಪಿ, ಕುಂದಾಪುರ, ದಕ್ಷಿಣ ಕನ್ನಡ ಹಾಗೂ ಮಂಗಳೂರಿನಿಂದ ಬರೋಬ್ಬರಿ 200 ಕೋಣಗಳು ಬೆಂಗಳೂರಿಗೆ ಬಂದಿಳಿದಿವೆ. ಬೆಂಗಳೂರು ಕಂಬಳದಲ್ಲಿ ಸುಮಾರು ಎಂಟು ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗುವ ನಿರೀಕ್ಷೆಯಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ರಾಜ್ಯ ಸರ್ಕಾರದ ನೆರವಿನೊಂದಿಗೆ ಅದ್ಧೂರಿಯಾಗಿ ನಡೆಯುತ್ತಿರುವ ಬೆಂಗಳೂರಿನ ಕಂಬಳದ ಬಗ್ಗೆ ಒಂದಿಷ್ಟು ಕುತೂಹಲಕಾರಿಯಾದ ವಿಚಾರಗಳು ಇಲ್ಲಿವೆ. ಕಂಬಳ ಹೇಗೆ ನಡೆಯುತ್ತದೆ. ಕಂಬಳದಲ್ಲಿ ಗೆದ್ದವರಿಗೆ ಏನು ಸಿಗುತ್ತದೆ..? ಬಹುಮಾನ ಘೋಷಣೆ ಹೇಗೆ..? ಕಂಬಳದಲ್ಲಿ ಏನೇನು ಇರಲಿದೆ ಎಂಬಿತ್ಯಾದಿ ಮಾಹಿತಿಗಳು ಇಲ್ಲಿದೆ.
ಬಹುಮಾನ ಘೋಷಣೆ ಹೇಗೆ..?
ಬೆಂಗಳೂರು ಕಂಬಳಲ್ಲಿ ಕಿರಿಯ ಹಾಗೂ ಹಿರಿಯ ವಿಭಾದಲ್ಲಿ ಸ್ಫರ್ಧೆ ನಡೆಯಲಿದೆ. ಹಗ್ಗದ ಓಟ, ನೇಗಿಲು ಓಟ, ಹಾಗೂ ಅಡ್ಡ ಹಲಗೆ ಓಟಗಳು ನಡೆಯಲಿದೆ. ಹೀಗೆ ವಿವಿಧ ಭಾಗದಲ್ಲಿ ಕಂಬಳ ನಡೆಯಲಿದ್ದು, ಅದರ ವಿಜಯಶಾಲಿಗಳ ಆಯ್ಕೆ ಭಿನ್ನವಾಗಿರಲಿದೆ. ಹಗ್ಗ, ನೆಗಿಲು, ಹಲಗೆ ಓಟಗಳಲ್ಲಿ ವೇಗ ಮುಖ್ಯವಾಗಿರುತ್ತದೆ. ಯಾವ ಜೋಡಿ ವೇಗವಾಗಿ ಓಟ ಮುಗಿಸುತ್ತವೆಯೋ ಅವು ಗೆಲುವು ಸಾಧಿಸುತ್ತವೆ. ಕೆನೆ ಹಲಗೆ ಓಟ ಸ್ವಲ್ಪ ಭಿನ್ನವಾಗಿದ್ದು, ಓಟದ ಗದ್ದೆಯ ಮಧ್ಯೆ ಅಡ್ಡ ಹಾಯುವಂತೆ ನಿಗದಿತ ಎತ್ತರದಲ್ಲಿ ಮೇಲೆ ಕಟ್ಟಲಾದ ಬಟ್ಟೆಗೆ ತಾಗುವಂತೆ ಕೆನೆ ಹಲಗೆಯ ಮೂಲಕ ಕೆಸರು ನೀರು ಚಿಮ್ಮಿಸಬೇಕು. ಯಾವ ಜೋಡಿ ಅತಿ ಎತ್ತರಕ್ಕೆ ಕೆಸರು ನೀರನ್ನು ಚಿಮ್ಮಿಸುತ್ತವೆಯೇ ಅವು ಗೆಲುವು ಸಾಧಿಸಿದಂತೆ.

ಕಂಬಳದಲ್ಲಿ ಗೆದ್ದವರಿಗೆ ಏನು ಸಿಗುತ್ತದೆ..?
ಬೆಂಗಳೂರು ಕಂಬಳದಲ್ಲಿ ಗೆದ್ದವರಿಗೆ ಬಹುಮಾನವಾಗಿ ಚಿನ್ನ ಸಿಗಲಿದೆ. ಸಾಮಾನ್ಯವಾಗಿ ಕರಾವಳಿಯಲ್ಲಿ ಗೆದ್ದ ಕೋಣದ ಜೋಡಿಗಳಿಗೆ ಒಂದು ಪವನ್ ಅಂದರೆ ಎಂಟು ಗ್ರಾಂ ಚಿನ್ನ ಹಾಗೂ ಐವತ್ತು ಸಾವಿರ ರೂಪಾಯಿ ನಿಗದಿಯಾಗಿರುತ್ತದೆ. ಆದರೆ ಬೆಂಗಳೂರು ಕಂಬಳದಲ್ಲಿ ಪ್ರಥಮ ಬಹುಮಾನ ಪಡೆದ ಜೋಡಿಗೆ ಎರಡು ಪವನ್ ಅಂದರೆ ಹದಿನಾರು ಗ್ರಾಂ ಚಿನ್ನ ಹಾಗೂ ಒಂದು ಲಕ್ಷ ರೂಪಾಯಿ ಸಿಗಲಿದೆ.
ದ್ವಿತೀಯ ಬಹುಮಾನ ಪಡೆದ ಕೋಣದ ಜೋಡಿಗೆ ಒಂದು ಪವನ್ ಅಂದರೆ ಎಂಟು ಗ್ರಾಂ ಚಿನ್ನ ಹಾಗೂ ಐವತ್ತು ಸಾವಿರ ರೂಪಾಯಿ ಸಿಗಲಿದೆ. ಹಾಗೂ ತೃತೀಯ ಬಹುಮಾನ ಪಡೆದ ಕೋಣದ ಜೋಡಿಗೆ ಇಪ್ಪತೈದು ಸಾವಿರ ರೂಪಾಯಿ ಸಿಗಲಿದೆ.
ಕಂಬಳದಲ್ಲಿ ಕರಾವಳಿ ಖಾದ್ಯ
ಬೆಂಗಳೂರು ಕಂಬಳದಲ್ಲಿ ಸುಮಾರು ನೂರೈವತ್ತಕ್ಕೂ ಹೆಚ್ಚು ಕರಾವಳಿ ತಿನಿಸುಗಳ ಮಳಿಗೆಗಳನ್ನು ತೆರೆಯಲಾಗುತ್ತಿದೆ. ಪುಂಡಿ ಗಸಿ, ನೀರು ದೋಸೆ, ಚಿಕನ್ ಸುಕ್ಕ, ಕೊಟ್ಟೆ ಕಡಬು, ಮಂಗಳೂರು ಬನ್ಸ್, ಸುಕ್ಕಿ ನುಂಡೆ, ಗೋಳಿ ಬಜೆ, ಪತ್ರೊಡೆ, ಫಿಶ್ ಫ್ರೈ, ಮೀನು ಸಾರು, ಹಾಲು ಬಾಯಿ, ಚಟ್ಲಿ ಸಾರು, ಮರಗೆಣಸು ಸೇರಿದಂತೆ ವಿವಿಧ ಖಾದ್ಯಗಳು ಇರಲಿದೆ.












Click it and Unblock the Notifications