Bengaluru Heavy Rain: ಬನ್ನಿ.. ಬನ್ನಿ "ದ್ವೀಪವಾದ ಬೆಂಗಳೂರಿಗೆ" ಬಿಬಿಎಂಪಿ ತಂದಿದೆ ಹೊಸ ಸೇವೆ!
ಬನ್ನಿ.. ಬನ್ನಿ ಬಿಬಿಎಂಪಿ ಟ್ಯಾಕ್ಟರ್ ಬಂತು. ಈ ಕೂಗು ಬೆಂಗಳೂರಿನ ಹೊರ ವಲಯದಲ್ಲಿ ಹೆಚ್ಚಾಗಿ ಕೇಳಿ ಬರ್ತಿದೆ. ಬೆಂಗಳೂರಿನಲ್ಲಿ ಜಿಟಿ ಜಿಟಿ ಮಳೆ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ಕಳೆದ ಮೂರು ದಿನದಿಂದ ಮಳೆಯಾಗ್ತಿದೆ. ಒಂದೇ ಮಳೆಗೆ ಬೆಂಗಳೂರಿನ ರಸ್ತೆಗಳು ಮರು ಜೀವ ಪಡೆದುಕೊಂಡಂತೆ ಆಗಿದೆ. ಇದರಲ್ಲಿ ಕೆರೆ ಯಾವುದು, ರಸ್ತೆ ಯಾವುದು ಅಂತನೂ ಗೊತ್ತಾಗ್ತಿಲ್ಲ.
ಬೆಂಗಳೂರು ಐಟಿ ರಾಜಧಾನಿ, ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿದೆ ಎನ್ನುವುದರ ಹೊರತಾಗಿಯೂ ಸಣ್ಣ ಮಳೆ ಬಂದರೂ ಜನ ಪರದಾಡುವುದು ತಪ್ಪುತ್ತಿಲ್ಲ. ಈ ಬಾರಿಯ ಮಳೆಗೂ ಬೆಂಗಳೂರಿನಲ್ಲಿ ದೋಣಿಗಳು, ಟ್ಯಾಕ್ಟರ್ ಸೇವೆ ಪ್ರಾರಂಭವಾಗಿದೆ. ಮಳೆಯಿಂದ ಮನೆಯಿಂದ ಹೊರಬರಲಾಗದೆ ಸಂಕಷ್ಟದಲ್ಲಿರುವ ಜನರಿಗೆ ಬಿಬಿಎಂಪಿ ಇದೀಗ ಹೊಸ ಸೇವೆ ಪ್ರಾರಂಭಿಸಿದೆ.

ಸಣ್ಣ ಮಳೆಗೂ ಬೆಂಗಳೂರಲ್ಲಿ ಅವಾಂತರಗಳು ಸೃಷ್ಟಿಯಾಗುವುದು ತಿಳಿದಿರುವ ವಿಷಯವೇ. ಬಿಜೆಪಿ ಅವಧಿಯಲ್ಲಾಗಲೀ ಇದೀಗ ಕಾಂಗ್ರೆಸ್ ಅವಧಿಯಲ್ಲಾಗಲೀ ಇದಕ್ಕೆ ಒಂದು ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಪ್ರತಿ ಬಾರಿ ಮಳೆಬಂದಾಗಲೂ ಜನ ಪರದಾಡುವುದು ತಪ್ಪಲಿಲ್ಲ. ಈ ಬಾರಿಯೂ ಅದೇ ಮುಂದುವರಿದಿದೆ. ಬೆಂಗಳೂರಿನ ರಮಣಶ್ರೀ ಕ್ಯಾಲಿಫೋರ್ನಿಯಾ ಲೇಔಟ್ ಹಾಗೂ ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ ಸೇರಿದಂತೆ ವಿವಿಧ ಅಪಾರ್ಟ್‌ಮೆಂಟ್‌ಗಳು ಜಲಾವೃತವಾಗಿವೆ.
ಮಳೆಯಿಂದ ಪರದಾಡುತ್ತಿರುವ ಜನರಿಗೆ ಅಗತ್ಯ ಸೇವೆಗಳನ್ನು ಬಳಸಲು ಬಿಬಿಎಂಪಿ ಟ್ಯ್ರಾಕ್ಟರ್ ಸೇವೆ ಪ್ರಾರಂಭಿಸಿದೆ. ಹೌದು ಬೆಂಗಳೂರಿನ ವಿವಿಧ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಅಪಾರ್ಟ್‌ಮೆಂಟ್ ನಿವಾಸಿಗಳ ಪರಿಸ್ಥಿತಿ ದ್ವೀಪದಲ್ಲಿ ಜೀವಿಸುವಂತಾಗಿದೆ. ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಿನ ಯಲಹಂಕ ವಲಯದ ವಿವಿಧ ಭಾಗದಲ್ಲಿ ಮಳೆಯಿಂದ ಭಾರೀ ಅನಾಹುತ ಸೃಷ್ಟಿಯಾಗಿದೆ. ಈ ಪ್ರದೇಶಗಳಿಗೆ ತುಷಾರ್ ಗಿರಿನಾಥ್ ಭೇಟಿ ನೀಡಿ ಬಿಬಿಎಂಪಿಯ ಅಧಿಕಾರಿಗಳಿಗೆ ಕೆಲವು ನಿರ್ದಿಷ್ಟ ಸೂಚನೆಗಳನ್ನು ನೀಡಿದ್ದಾರೆ.

ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್‌ನಲ್ಲಿ ಅವಾಂತರ: ಬೆಂಗಳೂರಿನ ಯಲಹಂಕದ ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ ಜನ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಲ್ಲಿಂದ ಜನಕ್ಕೆ ಹೊರಗೆ ಬರಲು ಆಗುತ್ತಿಲ್ಲ. ಈ ಅಪಾರ್ಟ್ಮೆಂಟ್‌ನಲ್ಲಿ ಈಗಲೂ ಸುಮಾರು 3 ಅಡಿ ನೀರು ನಿಂತಿದೆ. ಸದ್ಯ ಇಲ್ಲಿನ ರಾಜಕಾಲುವೆ ಪಕ್ಕ ಖಾಸಗಿ ಜಾಗದಲ್ಲಿ ಇಟಾಚಿ ಮೂಲಕ ಕಚ್ಚಾ ಡ್ರೈನ್ ಮಾಡಲಾಗುತ್ತಿದೆ. ಕೂಡಲೆ ಕೆಲಸ ಮುಗಿಸಿ ಕಚ್ಚಾ ಡ್ರೈನ್ ಮೂಲಕ ನೀರು ಹರಿದು ಹೊಗುವಂತೆ ಮಾಡಲಾಗುವುದು ಎಂದು ಬಿಬಿಎಂಪಿ ಹೇಳಿದೆ. ಒಂದು ಕಾರ್ಯಾಚರಣೆ ಮುಗಿಸಿ ಇನ್ನೊಂದು ಪ್ರಾರಂಭಿಸಿ ಒಂದು ದಿನ ಆಗುವ ಸಾಧ್ಯತೆ ಇದೆ.
ಈ ಭಾಗದಲ್ಲಿ 2 ಅಗ್ನಿ ಶಾಮಕ ವಾಹನಗಳ ಪಂಪ್‌ನ ಮೂಲಕ ಮಳೆಯಿಂದ ತುಂಬಿರುವ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಅಲ್ಲಿ ಬಿಬಿಎಂಪಿಯಿಂದ ಸಹಾಯ ಕೇಂದ್ರ(Help Desk) ತೆಗಯಲಾಗಿದೆ. ಸ್ಥಳೀಯರಿಗೆ ಕುಡಿಯುವ ನೀರು, ಹಾಲು, ಬ್ರೆಡ್ ಹಾಗೂ ಬಿಸ್ಕೆಟ್ ಸೇರಿದಂತೆ ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ.
ಟ್ರ್ಯಾಕ್ಟರ್ ಸೇವೆ: ಬೆಂಗಳೂರಿನಲ್ಲಿ ಭಾರೀ ಮಳೆಯಿಂದ ಪರದಾಡುತ್ತಿರುವ ಜನರಿಗೆ ಪಾಲಿಕೆ ಟ್ರ್ಯಕ್ಟರ್ ಮೂಲಕ ಸಹಾಯ ಮಾಡುತ್ತಿದೆ. ಇಲ್ಲಿನ ಅಪಾರ್ಟ್ಮೆಂಟ್ ನಿಂದ ನಿವಾಸಿಗಳು ಹೊರಗೆ ಬರಲು ಹಾಗೂ ಒಳಗೆ ಹೋಗಲು 2 ಟ್ರ್ಯಾಕ್ಟರ್‌ಗಳ ವ್ಯವಸ್ಥೆ ಮಾಡಲಾಗಿದೆ. ಈ ಟ್ರ್ಯಾಕ್ಟರೇ ಮೂಲಕವೇ ಜನ ಒಳಗೆ ಹೋಗುವುದು ಹಾಗೂ ಹೊರ ಬರುವುದನ್ನು ಮಾಡುತ್ತಿದ್ದಾರೆ.
ಇನ್ನು ಯಲಹಂಕ ಕೆರೆಗೆ ಎರಡು ಕೋಡಿಗಳಿವೆ. ಉತ್ತರ ಹಾಗೂ ದಕ್ಷಿಣದಲ್ಲಿ ಕೋಡಿಗಳು ಬರಲಿದೆ. ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ ಕಡೆಗೆ ಉತ್ತರ ಕೋಡಿ ಬರಲಿದೆ. ಇಲ್ಲಿ ನೀರಿನ ಹರಿವನ್ನು ಕಡಿಮೆ ಮಾಡಬೇಕಿದೆ. ದಕ್ಷಿಣದ ಕೋಡಿಯಲ್ಲಿ ನೀರಿನ ಹರಿವಿನ ಮಟ್ಟ ಹೆಚ್ಚಿಸಿದಾಗ ಉತ್ತರದ ಕೋಡಿಯಲ್ಲಿ ನೀರಿನ ಹರಿವಿನ ಮಟ್ಟ ಕಡಿಮೆಯಾಗುತ್ತೆ. ಹೀಗಾಗಿ, ಪರಿಹಾರ ಕಾರ್ಯದಲ್ಲಿ ತೊಡಗಿರುವುದಾಗಿ ಬಿಬಿಎಂಪಿಯ ಅಧಿಕಾರಿಗಳು ಹೇಳಿದ್ದಾರೆ. ಬಿಬಿಎಂಪಿಯ 20ಕ್ಕೂ ಹೆಚ್ಚು ಅಧಿಕಾರಿ ಹಾಗೂ ಸಿಬ್ಬಂದಿ ಸ್ಥಳದಲ್ಲೇ ಇದ್ದಾರೆ.
ರಮಣಶ್ರೀ ಕ್ಯಾಲಿಫೋರ್ನಿಯಾ ಲೇಔಟ್: ಬೆಂಗಳೂರಿನ ರಮಣಶ್ರೀ ಲೇಔಟ್‌ನಲ್ಲೂ ಮಳೆಯಿಂದ ಭಾರೀ ಅನಾಹುತಗಳು ಸಂಭವಿಸಿವೆ. ಲೇಔಟ್‌ಗೆ ಬರುವ ನೀರುನ್ನು ತಡೆಯು ಡೈವರ್ಷನ್ ಚಾನಲ್ (ನೀರು ಬೇರೆ ಕಡೆ ಹರಿದು ಹೋಗುವಂತೆ) ಮಾಡಲಾದೆ. ಹೀಗಾಗಿ, ನೀರಿನ ಮಟ್ಟವನ್ನು ಸಾಕಷ್ಟು ತಡೆಯಲಾಗಿದೆ. ಆದರೆ, ಇನ್ನೂ ನೀರು ನಿಂತಿದೆ ಲೇಔಟ್‌ನಲ್ಲಿ ನಿಂತಿರುವ ನೀರನ್ನು ಪಂಪ್ ಮೂಲಕ ಹೊರಕ್ಕೆ ಹಾಕಲಾಗುತ್ತಿದೆ.












Click it and Unblock the Notifications