ಬೆಂಗಳೂರು ವಾಟರ್ ಸರಪ್ಲಸ್ ಅಭಿಯಾನಕ್ಕೆ ಕೈಗಾರಿಕೋದ್ಯಮಿಗಳು ಕೈಜೋಡಿಸಿ: BWSSB
ಬೆಂಗಳೂರು, ಮೇ 16: ನೀರು ಉಳಿತಾಯ ಮತ್ತು ಸದ್ಬಳಕೆ, ಸಂಸ್ಕರಿಸಿದ ನೀರಿನ ಬಳಕೆ ಹಾಗೂ ಮಳೆ ನೀರಿನ ಸಮರ್ಪಕ ಬಳಕೆಯನ್ನು ಪ್ರೋತ್ಸಾಹಿಸುವ ಪಂಚಸೂತ್ರಗಳನ್ನು ಅಳವಡಿಸಿಕೊಂಡು ವಾಟರ್ ಸರ್‌ಪ್ಲಸ್ ಬೆಂಗಳೂರನ್ನಾಗಿಸಲು ಕೈಗಾರಿಕೋದ್ಯಮಿಗಳು ಕೈಜೋಡಿಸಬೇಕು ಎಂದು ಬೆಂಗಳೂರು ಜಲಮಂಡಳಿ ಮನವಿ ಮಾಡಿದೆ.
ಗುರುವಾರ ಬೆಂಗಳೂರಿನ FKCCI ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಎಫ್‌ಕೆಸಿಸಿಐ ಪದಾಧಿಕಾರಿಗಳು ಹಾಗೂ ಸದಸ್ಯರುಗಳೊಂದಿಗಿನ ಸಂವಾದದಲ್ಲಿ ಜಲಮಂಡಳಿ ಅಧ್ಯಕ್ಷ ಡಾ ರಾಮ್ ಪ್ರಸಾತ್ ಮನೋಹರ್ ಮಾತನಾಡಿದರು.

ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಕೊರತೆ ಇಲ್ಲ. ಮಳೆಯ ಅಭಾವದಿಂದ ಅಂತರ್ಜಲ ಮಟ್ಟ ಕಡಿಮೆಯಾದ ಪರಿಣಾಮ ಕೊಳವೆ ಬಾವಿಗಳು ಬತ್ತಿಹೋದ ಪರಿಣಾಮ ಕಾವೇರಿ ನೀರಿನ ಮೇಲೆ ಒತ್ತಡ ಹೆಚ್ಚಾಯಿತು. ಇದನ್ನ ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಹಾಗೂ ಭವಿಷ್ಯದ ಅವಶ್ಯಕತೆಗಳಿಗೆ ಸಿದ್ದವಾಗುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನ ಜಲಮಂಡಳಿಯ ವತಿಯಿಂದ ಕೈಗೊಳ್ಳಲಾಗಿದೆ.
ಅಭಿಮಾನಕ್ಕೆ ಕೈ ಜೋಡಿಸಲು ಕರೆ ಕೊಟ್ಟ ಜಲಮಂಡಳಿ
ನೀರು ಉಳಿತಾಯ, ನೀರಿನ ಸದ್ಬಳಕೆ, ಸಂಸ್ಕರಿಸಿದ ನೀರಿನ ಬಳಕೆ, ಅಂತರ್ಜಲ ಹೆಚ್ಚಳದ ಕ್ರಮಗಳ ಮೂಲಕ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲಾಗಿದೆ. ಆದರೆ, ಭವಿಷ್ಯದ ಸುಸ್ಥಿರ ಬೆಂಗಳೂರಿಗಾಗಿ ಹಾಗೂ ಕೈಗಾರಿಕೆಗಳ ಅಭಿವೃದ್ಧಿಗಾಗಿ ಎಲ್ಲರ ಸಹಕಾರವೂ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೈಗಾರಿಕೋದ್ಯಮಿಗಳು ಜಲಮಂಡಳಿಯ ಅಭಿಯಾನದಲ್ಲಿ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಪ್ರತ್ಯೇಕ ಪೈಪ್‌ಲೈನ್ ಮೂಲಕ ಸಂಸ್ಕರಿಸಿದ ನೀರು ನೀಡಲು ಅಗತ್ಯ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ. ಪೀಣ್ಯ ಕೈಗಾರಿಕಾ ಪ್ರದೇಶ ಹೊರತುಪಡಿಸಿ ಬೇರೆ ಪ್ರದೇಶಗಳಲ್ಲಿರುವ ಕೈಗಾರಿಕೆಗಳಿಗೆ ಟ್ಯಾಂಕರ್ ಮೂಲಕ ಕಡಿಮೆ ದರದಲ್ಲಿ ಸಂಸ್ಕರಿಸಿದ ನೀರನ್ನು ನೀಡಲು ಸಿದ್ದರಿದ್ದೇವೆ.
ಬೆಂಗಳೂರು ಜಲಮಂಡಳಿಯ ಬಳಿ ಸುಮಾರು 1200 ಎಂ.ಎಲ್.ಡಿ ಯಷ್ಟು ಸಂಸ್ಕರಿಸಿದ ನೀರು ಲಭ್ಯವಿದ್ದು ಇದರ ಸದ್ಬಳಕೆಯಿಂದ ಕಾವೇರಿ ನೀರಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಇದರಿಂದ ಸಣ್ಣ ಕೈಗಾರಿಕೆಗಳಿಗೆ ಹಣದ ಉಳೀತಾಯವೂ ಆಗಲಿದೆ ಎಂದರು.

ವರ್ಷಪೂರ್ತಿ ಪಂಚಸೂತ್ರಗಳ ಅಭಿಯಾನ
ಎಫ್‌ಕೆಸಿಸಿಐ ಅಧ್ಯಕ್ಷರಾದ ರಮೇಶ್ ಚಂದ್ರ ಲಹೋಟಿ ಮಾತನಾಡಿ, ಬೆಂಗಳೂರು ನಗರದಲ್ಲಿ ಎದುರಾಗಿದ್ದ ನೀರಿನ ಅಭಾವವನ್ನು ಸಮರ್ಪಕವಾಗಿ ಜಲಮಂಡಳಿ ನಿಭಾಯಿಸಿದೆ. ಇದರಲ್ಲಿ ಜಲಮಂಡಳಿ ಅಧ್ಯಕ್ಷರ ಪಾತ್ರವೂ ಹಿರಿದಾಗಿದೆ. ನೀರಿನ ಸದ್ಬಳಕೆ ಮತ್ತು ಉಳಿತಾಯ ಹಾಗೂ ಸಂಸ್ಕರಿಸಿದ ನೀರಿನ ಬಳಕೆಯನ್ನು ಪ್ರೋತ್ಸಾಹಿಸುವಂತಹ ಕ್ರಮಗಳನ್ನು ನಮ್ಮ ಕೈಗಾರಿಕಾ ಸಂಸ್ಥೆಯ ಸದಸ್ಯರುಗಳು ಅಳವಡಿಸಿಕೊಳ್ಳಲಿದ್ದಾರೆ.
ಅಗತ್ಯ ಸಹಕಾರ ನೀಡುವ ಭರವಸೆ
ಮಳೆ ನೀರಿನ ಕೋಯ್ಲು ಹಾಗೂ ಮಳೆ ನೀರಿನಿಂದ ಅಂತರ್ಜಲ ಮರುಪೂರಣದಂತಹ ಕಾರ್ಯಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಜಲಮಂಡಳಿಯ ಜೊತೆಯಲ್ಲಿ ಕೈಜೋಡಿಸಲಿದ್ದೇವೆ. ಬೆಂಗಳೂರು ಸುಸ್ಥಿರ ನಗರವನ್ನಾಗಿಸುವ ನಿಟ್ಟಿನಲ್ಲಿ ಎಲ್ಲಾ ಸಹಕಾರವನ್ನು ನೀಡುವ ಮೂಲಕ ವಾಟರ್ ಸರ್‌ಪ್ಲಸ್ ಬೆಂಗಳೂರನ್ನಾಗಿಸಲು ನಮ್ಮ ಸಹಕಾರ ನೀಡಲಾಗುವುದು ಎಂದರು.
ಕೈಗಾರಿಕೆಗಳಿಗೆ ಯಾವುದೇ ರೀತಿಯಲ್ಲೂ ನೀರಿನ ಅಭಾವ ಆಗದೇ ಇರುವ ರೀತಿಯಲ್ಲಿ ಜಲಮಂಡಳಿ ಪರಿಸ್ಥಿತಿಯನ್ನು ನಿಭಾಯಿಸಿದೆ. ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಮೂರು ಬಾರಿ ಭೇಟಿ ನೀಡಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ರಾಸಾಯನಿಕ ತ್ಯಾಜ್ಯ ನೀರು ನಿರ್ವಹಣೆಯಲ್ಲೂ ಜಪಾನೀಸ್ ತಂತ್ರಜ್ಞಾನವನ್ನು ಅಳವಡಿಸುವ ನಿಟ್ಟಿನಲ್ಲಿ ಮುಂದಾಗಿದ್ದು ಬಹಳ ಉತ್ತಮ ಕಾರ್ಯವಾಗಿದೆ ಎಂದು ಸದಸ್ಯರು ಶ್ಲಾಘಿಸಿದರು.
ನೀರಿನ ಅಭಾವವನ್ನು ಸಮರ್ಪಕವಾಗಿ ನಿಭಾಯಿಸಿದ್ದಕ್ಕಾಗಿ ಎಫ್‌ಕೆಸಿಸಿಐ ವತಿಯಿಂದ ಜಲಮಂಡಳಿ ಅಧ್ಯಕ್ಷರನ್ನು ಅಭಿನಂದಿಸಲಾಯಿತು. ಸಂವಾದದಲ್ಲಿ ಎಫ್‌ಕೆಸಿಸಿಐ ಪದಾಧಿಕಾರಿಗಳಾದ ಟಿ ಸಾಯಿರಾಂ ಪ್ರಸಾದ್, ಎಂ.ಜಿ ಬಾಲಕೃಷ್ಣ, ಉಪಾಧ್ಯಕರಾದ ಉಮಾ ರೆಡ್ಡಿ, ಗೋಪಾಲ್ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications