'32 ಸಾವಿರದ ಮನೆಗೆ ಏಕಾಏಕಿ 40 ಸಾವಿರ ಬಾಡಿಗೆ!': ಬೆಂಗಳೂರಿನಲ್ಲಿ ಮನೆ ಹುಡುಕಿ ಸುಸ್ತಾದ ಯುವಕ
ಬೆಂಗಳೂರಿನಂತಹ ಐಟಿ ಸಿಟಿಯಲ್ಲಿ ಸ್ವಂತ ಮನೆ ಹೊಂದುವುದು ಎಷ್ಟು ಕಷ್ಟವೋ, ಹಾಗೆಯೇ ಬಾಡಿಗೆಗೆ ಒಂದು ಯೋಗ್ಯವಾದ ಮನೆ ಹುಡುಕುವುದು ಕೂಡ ಅಷ್ಟೇ ಕಷ್ಟದ ಕೆಲಸ. ಅದರಲ್ಲೂ ಐಟಿ ಕಂಪನಿಗಳು ಹೆಚ್ಚಿರುವ ಪ್ರಮುಖ ಪ್ರದೇಶಗಳಲ್ಲಿ ಮನೆ ಹುಡುಕುವುದು ಎಂದರೆ ಒಂದು ರೀತಿ ದೊಡ್ಡ ಸಾಹಸವೇ ಸರಿ.
ಇದೀಗ ಬೆಂಗಳೂರಿನ ಯುವಕನೊಬ್ಬ ತನಗೆ ಮನೆ ಹುಡುಕುವಾಗ ಆದ ಕಹಿ ಅನುಭವವನ್ನ ಸಾಮಾಜಿಕ ಜಾಲತಾಣ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದು, ಸದ್ಯ ಈ ಪೋಸ್ಟ್ ಭಾರೀ ವೈರಲ್ ಆಗುತ್ತಿದೆ.

ಬೆಂಗಳೂರಿನಲ್ಲಿ ಮನೆ ಬಾಡಿಗೆ ಎಂಬುದು ದಿನೇ ದಿನೇ ಗಗನಕ್ಕೇರುತ್ತಿದೆ. ಇದರ ಜೊತೆಗೆ ಆನ್‌ಲೈನ್ ಆ್ಯಪ್‌ಗಳಲ್ಲಿ ಕಾಣುವ ಸುಳ್ಳು ಜಾಹೀರಾತುಗಳು, ಬ್ರೋಕರ್‌ಗಳ ಹಾವಳಿ ಹಾಗೂ ದಿಢೀರ್ ಬಾಡಿಗೆ ಹೆಚ್ಚಳದಿಂದ ಬೇಸತ್ತ ಈ ಯುವಕ, ಮನೆ ಹುಡುಕುವುದು ಈಗ ಒಂದು ಫುಲ್-ಟೈಮ್ ಜಾಬ್ ಎಂದು ತನ್ನ ಅಳಲು ತೋಡಿಕೊಂಡಿದ್ದಾನೆ.
ಮನೆ ಹುಡುಕಾಟದ ಅನುಭವ: 2BHK ಮನೆಗಾಗಿ ಮುಗಿಯದ ಪರದಾಟ
ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಿರುವ ಈ ಯುವಕ, ತಾನು ಹಾಗೂ ತನ್ನ ಸಂಗಾತಿ ಇಬ್ಬರೂ ಸೇರಿ ಒಂದು 2BHK ಸೆಮಿ-ಫರ್ನಿಶ್ಡ್ ಮನೆಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾನೆ. ಬಿಟಿಎಂ 2ನೇ ಹಂತ, ಬಿಟಿಎಂ 4ನೇ ಹಂತ ಅಥವಾ ಹೆಚ್‌ಎಸ್‌ಆರ್ ಲೇಔಟ್ ಸುತ್ತಮುತ್ತ ಮನೆಗಾಗಿ ಹುಡುಕುತ್ತಿದ್ದು, ಇವರ ಬಜೆಟ್ ತಿಂಗಳಿಗೆ 30 ರಿಂದ 35 ಸಾವಿರ ರೂಪಾಯಿಗಳಾಗಿದೆ. ಸೆಪ್ಟೆಂಬರ್ ಅಂತ್ಯದೊಳಗೆ ಹೊಸ ಮನೆಗೆ ಶಿಫ್ಟ್ ಆಗುವ ಯೋಜನೆಯಲ್ಲಿದ್ದ ಈ ಜೋಡಿಗೆ, ಆನ್‌ಲೈನ್ ಪೋರ್ಟಲ್‌ಗಳಲ್ಲಿ ಮನೆ ಹುಡುಕುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಬೆಂಗಳೂರು ಬ್ರೋಕರ್ಸ್ ಮತ್ತು ಮೋಸದ ಆನ್‌ಲೈನ್ ಜಾಹೀರಾತುಗಳು
ಮನೆ ಹುಡುಕುವ ಆ್ಯಪ್‌ಗಳಲ್ಲಿ ತಾನು ಪ್ರತಿದಿನ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿರುವ ಯುವಕ, "ಎಲ್ಲಾ ರಿಯಲ್ ಎಸ್ಟೇಟ್ ಆ್ಯಪ್‌ಗಳಲ್ಲೂ ಒಂದೇ ರೀತಿಯ ಸಮಸ್ಯೆಗಳಿವೆ. 'ಅವೈಲಬಲ್' ಎಂದು ತೋರಿಸುವ ಮನೆಗಳು ವಾಸ್ತವದಲ್ಲಿ ವಾರಗಳ ಹಿಂದೆಯೇ ಬೇರೆಯವರಿಗೆ ಬಾಡಿಗೆಗೆ ಹೋಗಿರುತ್ತವೆ.
ಇನ್ನು ಮನೆಯ ಓನರ್ ಹಾಕಿರುವ ಜಾಹೀರಾತು ಎಂದು ನಂಬಿ ಕರೆ ಮಾಡಿದರೆ, ಅವರು ಬ್ರೋಕರ್‌ಗಳಾಗಿರುತ್ತಾರೆ. ಮನೆಯ ನಿಖರವಾದ ಸ್ಥಳ ಮತ್ತು ವಿವರಗಳನ್ನ ಕೇಳಿದ ತಕ್ಷಣ ಕೆಲವರು ಕರೆ ಸ್ವೀಕರಿಸುವುದನ್ನೇ ನಿಲ್ಲಿಸುತ್ತಾರೆ.
ಇನ್ನು ಕೆಲವರು ಆನ್‌ಲೈನ್‌ನಲ್ಲಿ ಒಂದು ಮನೆಯ ಫೋಟೋ ತೋರಿಸಿ, ನಾವು ಅಲ್ಲಿಗೆ ಹೋದ ನಂತರ ಸಂಪೂರ್ಣವಾಗಿ ಬೇರೆಯದ್ದೇ ಮನೆಯನ್ನು ತೋರಿಸುತ್ತಾರೆ" ಎಂದು ಅಸಮಾಧಾನ ಹೊರಹಾಕಿದ್ದಾನೆ.
ಹೆಚ್‌ಎಸ್‌ಆರ್ ಲೇಔಟ್ 2BHK ಬಾಡಿಗೆ ದಿಢೀರ್ ಹೆಚ್ಚಳ!
ಈ ಯುವಕ ಎದುರಿಸಿದ ಅತಿದೊಡ್ಡ ಸಮಸ್ಯೆ ಎಂದರೆ ಬೆಲೆ ಏರಿಕೆ. "ಆ್ಯಪ್‌ನಲ್ಲಿ 32,000 ರೂಪಾಯಿ ಬಾಡಿಗೆ ಎಂದು ಹಾಕಿರುತ್ತಾರೆ. ಆದರೆ ನಾವು ಕರೆ ಮಾಡಿ ವಿಚಾರಿಸಿದಾಗ ಏಕಾಏಕಿ ಬಾಡಿಗೆಯನ್ನು 38,000 ದಿಂದ 40,000 ರೂಪಾಯಿಗಳಿಗೆ ಏರಿಸುತ್ತಾರೆ. ಜೊತೆಗೆ ಮೈಂಟೆನೆನ್ಸ್ ಚಾರ್ಜ್ ಪ್ರತ್ಯೇಕವಾಗಿ ಕಟ್ಟಬೇಕು ಎನ್ನುತ್ತಾರೆ.
ಒಂದು ವೇಳೆ ನಮಗೆ ಯಾವುದಾದರೂ ಮನೆ ಇಷ್ಟವಾಗಿ ಅದನ್ನ ಅಂತಿಮಗೊಳಿಸುವಷ್ಟರಲ್ಲಿ, ಆ ಮನೆ ಬೇರೆಯವರ ಪಾಲಾಗಿರುತ್ತದೆ" ಎಂದು ಆತ ತನ್ನ ಹತಾಶೆ ವ್ಯಕ್ತಪಡಿಸಿದ್ದಾನೆ.
ನೆಟ್ಟಿಗರ ಪ್ರತಿಕ್ರಿಯೆ: ಮನೆ ಹುಡುಕುವುದು ಈಗ ಫುಲ್-ಟೈಮ್ ಜಾಬ್
ಬೆಂಗಳೂರಿನ ಐಟಿ ಕಾರಿಡಾರ್‌ಗಳ ಸಮೀಪವಿರುವ ಪ್ರದೇಶಗಳಲ್ಲಿ ಬೇಡಿಕೆ ಹೆಚ್ಚಿರುವುದರಿಂದ ಮನೆ ಮಾಲೀಕರು ಮತ್ತು ಬ್ರೋಕರ್‌ಗಳು ಇದರ ಲಾಭ ಪಡೆಯುತ್ತಿದ್ದಾರೆ. ವಾಹನ ದಟ್ಟಣೆ ತಪ್ಪಿಸಲು ಕಚೇರಿ ಸಮೀಪವೇ ಮನೆ ಮಾಡಲು ಹೊರಡುವ ಟೆಕ್ಕಿಗಳಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಈ ಪೋಸ್ಟ್ ನೋಡಿದ ಅನೇಕ ನೆಟ್ಟಿಗರು ಯುವಕನ ಮಾತಿಗೆ ದನಿಗೂಡಿಸಿದ್ದಾರೆ. "ಬೆಂಗಳೂರಿನಲ್ಲಿ ಮನೆ ಹುಡುಕುವುದು ನಿಜಕ್ಕೂ ಈಗ ಒಂದು ಫುಲ್-ಟೈಮ್ ಜಾಬ್ ಆಗಿದೆ", "ಒಳ್ಳೆಯ ಮನೆ ಸಿಗುವುದು ಇತ್ತೀಚೆಗೆ ಅಸಾಧ್ಯ ಎಂಬಂತಾಗಿದೆ", "32 ಸಾವಿರದಿಂದ 40 ಸಾವಿರಕ್ಕೆ ಏರಿಕೆ ಮಾಡುವುದು ನಿಜಕ್ಕೂ ಆಘಾತಕಾರಿ", "ಒಳ್ಳೆಯ ಮನೆಗಳು ಕೇವಲ ಕೆಲವೇ ಗಂಟೆಗಳಲ್ಲಿ ಬುಕ್ ಆಗಿಬಿಡುತ್ತವೆ" ಎಂದು ಹಲವರು ಕಮೆಂಟ್ ಮಾಡುವ ಮೂಲಕ ತಮ್ಮ ಸ್ವಂತ ಅನುಭವಗಳನ್ನ ಹಂಚಿಕೊಂಡಿದ್ದಾರೆ. ಯಾವುದೇ ಬ್ರೋಕರ್ ಇಲ್ಲದೆ ನೇರವಾಗಿ ಮಾಲೀಕರಿಂದಲೇ ಒಂದು ಸ್ವಚ್ಛವಾದ 2BHK ಮನೆ ಸಿಕ್ಕರೆ ಸಾಕು ಎನ್ನುವ ಹಂತಕ್ಕೆ ಈ ಯುವಕ ತಲುಪಿದ್ದಾನೆ.


Click it and Unblock the Notifications
