Bengaluru Hotels & Restaurants: 24 ಗಂಟೆ ತೆರೆಯಲು ಡಿಕೆಶಿ ಒಪ್ಪಿಗೆ, ಆದೇಶ ಶೀಘ್ರ
ಬೆಂಗಳೂರು, ಜುಲೈ 10: ವ್ಯಾಪಾರ ವಹೀವಾಟು ಗ್ರಾಹಕರಿಗಾಗಿ ವಾರದ ಏಳು ದಿನವು 24x7 ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯಬೇಕು ಎಂಬ ಬೃಹತ್ ಬೆಂಗಳೂರು ಹೋಟೆಲುಗಳ ಸಂಘದ ಬೇಡಿಕೆ ಈಡೇರುವ ಕಾಲ ಹತ್ತಿರ ಬಂದಿದೆ. ಈ ಕುರಿತು ಖುದ್ದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಸಂಘದ ಮುಖ್ಯಸ್ಥರಿಗೆ ಭರವಸೆ ನೀಡಿದ್ದಾರೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬೃಹತ್ ಬೆಂಗಳೂರು ಹೋಟೆಲುಗಳ ಸಂಘ (BBHA) ಸಂಘದ ಸದಸ್ಯರ ಜೊತೆಗೆ ಇತ್ತೀಚೆಗೆ ಸಭೆ ನಡೆಸಿದರು. ಈ ವೇಳೆ ಸಂಘದ ದಿನಪೂರ್ತಿ ಹೋಟೆಲ್ -ರೆಸ್ಟೋರೆಂಟ್ ತೆರೆದಿಡುವ ಪ್ರಸ್ತಾವಕ್ಕೆ ಅವರು ಒಪ್ಪಿಗೆ ನೀಡಿದ್ದಾರೆ. ಆದಷ್ಟು ಶೀಘ್ರವೇ ಇದು ಜಾರಿಗೆ ಬರಲಿದ್ದು, ಹೋಟೆಲ್‌ಗಳು ರಾತ್ರಿಯಿಡೀ ಕಾರ್ಯ ನಿರ್ವಹಿಸಲಿವೆ.

ಸರ್ಕಾರದ ಮಹತ್ವಾಕಾಂಕ್ಷೆಯ 'ಬ್ರಾಂಡ್ ಬೆಂಗಳೂರು' ಉಪಕ್ರಮದಡಿ ಐಟಿ ಹಬ್ ಆಗಿರುವ ಬೆಂಗಳೂರಿನ ಇಮೆಜ್ ಹೆಚ್ಚಿಸಲು ಗುರಿ ಇಟ್ಟುಕೊಳ್ಳಲಾಗಿದೆ. ಅದರ ಭಾಗವಾಗಿ ಹೋಟೆಲ್‌ಗಳು ಮತ್ತು ರೆಸ್ಟೊರೆಂಟ್‌ಗಳನ್ನು ದಿನದ 24 ಗಂಟೆ ತೆರೆಯಲು ಅವಕಾಶ ನೀಡಬೇಕೆಂದು ಬೃಹತ್ ಬೆಂಗಳೂರು ಹೊಟೇಲ್ ಸಂಘವು ಮನವಿ ಮಾಡಿದೆ. ಬಹು ದಿನಗಳಿಂದೂ ಸಂಘದಿಂದ ಈ ಬಗ್ಗೆ ಒತ್ತಾಯ ಕೇಳಿ ಬರುತ್ತಿತ್ತು.
ಕೆಲವು ಬಾರಿ ಮನವಿ ಸಲ್ಲಿಕೆ
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೂ ಎರಡು ಮೂರು ಬಾರಿ ಸರ್ಕಾರಕ್ಕೆ ಮತ್ತು ಪೊಲೀಸ್ ಇಲಾಖೆಗೂ ಪ್ರತ್ಯಕವಾಗಿ ಸಂಘ ಮನವಿ ಮಾಡಿತ್ತು. ಸರ್ಕಾರ ಮನವಿ ಪ್ರಸ್ತಾವನೆಗೆ ಸಹಮತಿ ಇದ್ದರೂ ಸಹ ಭದ್ರತೆ ಮತ್ತು ಜನರ ರಕ್ಷಣಾ ದೃಷ್ಟಿಯಿಂದ ಪೊಲೀಸ್ ಇಲಾಖೆ ನಿರಾಕರಿಸಿತ್ತು. ಹೀಗಾಗಿ ಬೇಡಿಕೆ ಬೇಡಿಕೆಯಾಗಿಯೆ ಉಳಿದಿತ್ತು.
ಇದೀಗ ಸಂಘದ ಮುಖ್ಯಸ್ಥರು ಸರ್ಕಾರವನ್ನು ಮತ್ತೆ ಭೇಟಿಯಾಗಿದ್ದಾರೆ. ತಮ್ಮ ಮನವಿ ಕುರಿತು ತಿಳಿಸಿದ್ದಾರೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಒಂದು 10-15 ದಿನಗಳಲ್ಲಿ ಅಧಿಕೃತ ಆದೇಶ ಹೊರ ಬೀಳಬಹುದು. ನಂತರವೇ ಹೋಟೆಲ್‌ಗಳು ಮತ್ತು ರೆಸ್ಟೊರೆಂಟ್‌ಗಳು ದಿನದ 24 ಗಂಟೆ ಗ್ರಾಹಕರಿಗೆ ಸೇವೆ ನೀಡಲಿವೆ ಎಂದು ಸಂಘದ ಅಧ್ಯಕ್ಷ ಪಿ.ಸಿ ರಾವ್ ಮಾಹಿತಿ ನೀಡಿದರು.

24,000 ಕ್ಕೂ ಅಧಿಕಸಣ್ಣ, ದೊಡ್ಡ ಹೋಟೆಲ್
ರಾಜಧಾನಿಯಲ್ಲಿ ಒಟ್ಟು ಸುಮಾರು 24,000 ಕ್ಕೂ ಹೆಚ್ಚು ಸಣ್ಣ, ದೊಡ್ಡ ಹೋಟೆಲ್ ಇವೆ. ಅವುಗಳಲ್ಲಿ ಶೇಕಡಾ 10 ರಷ್ಟು ಹೋಟೆಲ್ ದಿನದ 24 ಗಂಟೆ ಕಾರ್ಯನಿರ್ವಹಿಸಲು ಸಜ್ಜಾಗಿವೆ. ಇನ್ನೂ ಕೆಲವರು ರಾತ್ರಿ ಸಮಯದಲ್ಲಿ ಮಾತ್ರವೇ ಹೋಟೆಲ್ ತೆರೆಯಲು ಆಸಕ್ತಿ ತೋರಿದ್ದಾರೆ.
ಹಿಂದಿನಿಂದ ರಾತ್ರಿ 10 ಗಂಟೆ ಆದರೆ ಸಾಕು ಪೊಲೀಸ್ ಹೊಯ್ಸಳ ವಾಹನವು ಧ್ವನಿವರ್ಧಕ ಮೂಲಕ ಅಂಗಡಿ, ಹೋಟೆಲ್ ಬಾಗಿಲು ಮುಚ್ಚುವಂತೆ ಸೂಚಿಸುತ್ತಿದ್ದವು. ಹೀಗಾಗಿ ಹೋಟೆಲ್, ರೆಸ್ಟೊರೆಂಟ್ ಬಾಗಿಲು ಮುಚ್ಚಬೇಕಿತ್ತು. ಇದರಿಂದ ರಾತ್ರಿ ಪಾಳಿಯಲ್ಲಿ ಕೆಸಲ ಮಾಡುವ ನೌಕರರಿಗೆ, ಆಟೋ ಮತ್ತು ಕ್ಯಾಬ್ ಚಾಲಕರು ಮತ್ತು ಇತರರಿಗೆ ಊಟ, ಆಹಾರ ಪದಾರ್ಥಗಳು ಸಿಗುತ್ತಿರಲಿಲ್ಲ.
ಈ ಎಲ್ಲ ಕಾರಣದಿಂದ ರಾತ್ರಿಪೂರ್ತಿ ಹೋಟೆಲ್-ರೆಸ್ಟೋರೆಂಟ್ ತೆರೆಯಲು ಅವಕಾಶ ಮಾಡಿಕೊಡಬೇಕು ಎಂದು ಕೇಳಿದ ಮನವಿಗೆ ಡಿಕೆ ಶಿವಕುಮಾರ್ ಸ್ಪಂದಿಸಿದ್ದಾರೆ. ಇದರು ಬ್ರಾಂಡ್ ಬೆಂಗಳೂರಿಗೂ ಪೂರಕವಾಗಿರಲಿದೆ. ಇನ್ನೂ ಹೋಟೆಲ್ ವಲಯಕ್ಕೆ ಸ್ಥಾನಮಾನ ದೊರಕಿಸಿಕೊಡಲು ಕ್ರಮ ಕೈಗೊಳ್ಳಬೇಕು. ಜೊತೆಗೆ ವ್ಯಾಪಾರ ಮತ್ತು ಭಾರತೀಯ ಆಹಾರ ಮತ್ತು ಸುರಕ್ಷತಾ ಮಾನದಂಡಗಳ ಪ್ರಾಧಿಕಾರದಂತಹ ಬಹು ಪರವಾನಗಿಗಳ ಬದಲಿಗೆ, ಹೋಟೆಲ್‌ಗಳನ್ನು ಒಂದೇ ಪರವಾನಗಿಯಲ್ಲಿ ನಡೆಸಲು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಹೋಟೆಲ್ ಸಂಘ ಮನವಿ ಮಾಡಿದೆ.
AICC ನೇತೃತ್ವದಲ್ಲಿ ಬೆಂಗಳೂರಿನಲ್ಲಿ 'ಮೌನ' ಪ್ರತಿಭಟನೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ. ರಾಹುಲ್ ಗಾಂಧಿ ಅವರನ್ನು ಸರ್ಕಾರ ಅನರ್ಹಗೊಳಿಸಿತ್ತು. ಇದರ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ನೇತೃತ್ವದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಯಲಿದೆ.
ಜುಲೈ 12ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 05 ಮೌನ ಪ್ರತಿಭಟನೆ ಮಾಡಲಿದೆ. ಈ ಕುರಿತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕಚೇರಿಯಿಂದ ಅಧಿಕೃತ ಮಾಹಿತಿ ಪ್ರಕಟಿಸಲಾಗಿದೆ. ಇನ್ನೂ ಇತ್ತೀಚೆಗೆ ಸೂರತ್ ನ್ಯಾಯಾಲಯ ರಾಹುಲ್ ಗಾಂಧಿಯವರ ಅರ್ಜಿ ವಜಾಗೊಳಿಸಿತ್ತು. ಇದರಿಂದ ರಾಹುಲ್ ಗಾಂಧಿಯವರಿಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.












Click it and Unblock the Notifications