ಬೆಂಗಳೂರು ಹೈಸ್ಪೀಡ್ ರೈಲ್ ಕಾರಿಡಾರ್‌ನಿಂದ ಕರ್ನಾಟಕಕ್ಕೆ ಪ್ರಯೋಜನವಿಲ್ಲ: ಸಾಮಾಜಿಕ ಮಾಧ್ಯಮಗಳಲ್ಲಿ ಕಾವೇರಿದೆ ಚರ್ಚೆ
Bengaluru High-Speed Train: ಕೇಂದ್ರ ಸರ್ಕಾರದ 2026ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿರುವ ಹೈಸ್ಪೀಡ್ ರೈಲ್ ಕಾರಿಡಾರ್ ಯೋಜನೆಯ ಬಗ್ಗೆ ಕನ್ನಡಿಗರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಯೋಜನೆಯಿಂದ ಯಾವುದೇ ಲಾಭವಿಲ್ಲ. ಬೆಂಗಳೂರು ಹೈಸ್ಪೀಡ್ ರೈಲ್ ಕಾರಿಡಾರ್‌ನಿಂದ ಕರ್ನಾಟಕಕ್ಕೆ ಯಾವುದೇ ಪ್ರಯೋಜನವಿಲ್ಲ. ಇದರಿಂದ ಬೆಂಗಳೂರಿಗೆ ಬರುವ ವಲಸಿಗರ ಸಂಖ್ಯೆ ಹೆಚ್ಚಳವಾಗಲಿದೆ. ಬೆಂಗಳೂರು ಹಾಗೂ ವಿವಿಧ ರಾಜ್ಯಗಳ ನಡುವೆ ರೈಲು ಸಂಪರ್ಕ ಅಭಿವೃದ್ಧಿಪಡಿಸುವುದಕ್ಕಿಂತಲೂ ಬೆಂಗಳೂರು ಹಾಗೂ ಕರ್ನಾಟಕದ ವಿವಿಧ ಪ್ರದೇಶಗಳಿಗೆ ರೈಲ್ವೆ ಸಂಪರ್ಕ ಸುಧಾರಿಸಬೇಕು ಎಂದು ಕನ್ನಡಿಗರು ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಯೋಜನೆಗಳನ್ನು ಕೊಟ್ಟಿಲ್ಲ ಎನ್ನುವ ವಿಚಾರವು ಹೆಚ್ಚು ಚರ್ಚೆ ಆಗುತ್ತಿರುವಾಗಲೇ ಹೈಸ್ಪೀಡ್ ರೈಲು ಕಾರಿಡಾರ್‌ಗೆ ಆಕ್ಷೇಪ ವ್ಯಕ್ತವಾಗುತ್ತಿದೆ. ಸಿದ್ದೇಗೌಡ ಶ್ಯಾಮ್ ಪ್ರಸಾದ್ ಅವರು, ಕರ್ನಾಟಕಕ್ಕೆ ಬಿಟ್ಟಿರುವ ರೈಲುಗಳು ಕರ್ನಾಟಕದಲ್ಲಿ ಓಡಲ್ಲ. ಬೆಂಗಳೂರು, ಮೈಸೂರಿಗೆ ಭವ್ಯ ಭಾರತದ ವಲಸಿಗರನ್ನು ತಂದು ತುಂಬಿಸುತ್ತವೆ ಅಷ್ಟೇ ಎಂದು ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿರುವ ಈ ಪೋಸ್ಟ್‌ಗೆ ಹಲವರು ಸಹಮತ ವ್ಯಕ್ತಪಡಿಸಿದ್ದಾರೆ.

ಹೌದು ನೀವು ಹೇಳುತ್ತಿರುವುದು 100% ಸರಿ ಇದೆ. ಬೇರೆ ರಾಜ್ಯಗಳ ರೈಲು ಚಲಿಸುವ ಮಾರ್ಗಗಳನ್ನು ಗಮನಿಸಿ ಹಾಗೂ ಬೆಂಗಳೂರು - ಮೈಸೂರಿನಿಂದ ಹೊರಡುವ ಬೇರೆ ರಾಜ್ಯಗಳ ಮಾರ್ಗವನ್ನು ಗಮನಿಸಿ ಪ್ರತಿಯೊಬ್ಬರಿಗೂ ಅರ್ಥವಾಗುತ್ತದೆ. ನಮ್ಮ ರಾಜ್ಯದಿಂದ ಅಂದರೆ ಬೆಂಗಳೂರಿಂದ ಚಲಿಸುತ್ತಿರುವ ವಂದೇ ಭಾರತ ರೈಲುಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸಿದರೆ ಹೆಸರಿಗೆ ಮಾತ್ರ ಬೆಂಗಳೂರು - ಮೈಸೂರು ನಿಲ್ದಾಣಗಳಿಂದ ಹೊರಡುತ್ತವೆ. ಅದು ಚಲಿಸುವ ಮಾರ್ಗ ಬೇರೆ ರಾಜ್ಯಗಳಲ್ಲಿ ಇರುತ್ತದೆ ಉಪಯೋಗ ಸಹ ಬೇರೆ ರಾಜ್ಯದ ಜನರಿಗೆ ಇದರ ಬಗ್ಗೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇದರ ಬಗ್ಗೆ ಗಮನಹರಿಸುತ್ತಿಲ್ಲ ಎನ್ನುವುದು ಬೇಸರದ ಸಂಗತಿ ಎಂದು ನೆಟ್ಟಿಗರು ಹೇಳಿದ್ದಾರೆ.
ನಾಗರಾಜ ಎನ್ನುವವರು, ಏಕೆಂದರೆ ಉದ್ಯಮಿಗಳಿಗೆ ಕಡಿಮೆ ಸಂಬಳ ಪಡೆಯುವವರ ಅವಶ್ಯಕತೆ ಇದೆ. ಸುಶಿಕ್ಷಿತ ಮತ್ತು ಪರಿಣಿತ ವಿದ್ಯಾವಂತರು ಅಲ್ಲ ಎಂದು ಹೇಳಿದ್ದಾರೆ. ಮಂಜುನಾಥ ಶೆಟ್ಟಿ ಎನ್ನುವವರು, ಆ ರಾಜ್ಯಕ್ಕೆ ಒಳ್ಳೆಯದು. ಈ ರಾಜ್ಯಕ್ಕೆ ಒಳ್ಳೆಯದು ಎಂದು ಹೇಳುವಾಗ ದೇಶಕ್ಕೆ ಒಳ್ಳೆದು ಅಂತಾ ಹೇಳುವುದಲ್ವಾ ಇಲ್ಲಿ ಯಾರು ರಾಜ್ಯದಿಂದ ರಾಜ್ಯಕ್ಕೆ ಓಡಾಡುದಿಲ್ವ, ಮೂರು ದಿನ ವೀಕೆಂಡ್ ರಜೆ ಸಿಕ್ಕರೆ ಪ್ರವಾಸ ಎಂದು ಸ್ವಂತ ಮನೆಯಲ್ಲಿಯೇ ಜನ ನಿಲ್ಲುತ್ತಿಲ್ಲ. ಹೀಗಿರುವಾಗ ಯಾಕೆ ಈ ರಾಜ್ಯದ ಹೆಸರಲ್ಲಿ ಭೇದಭಾವ ಎಂದಿದ್ದಾರೆ.
ಎಲ್ಲ ರಾಷ್ಟ್ರೀಯ ಪಕ್ಷಗಳೂ ಕರ್ನಾಟಕಕ್ಕೆ ಚೊಂಬು ಕೊಟ್ಟುಕೊಂಡೆ ಬಂದಿದ್ದು, ಇಲ್ಲಿನ ಸಂಪತ್ತು ಲೂಟಿ ಮಾಡಿ ಜೊತೆಗೆ ಚುನಾವಣೆಗಾಗಿ ಕರ್ನಾಟಕ ರೋಲ್ ಕಾಲ್ ರಾಜ್ಯವನ್ನಾಗಿ ಮಾಡಿವೆ ಎಂದು ಗಿರೀಶ್ ಎನ್ನುವವರು ಕಾಮೆಂಟ್ ಮಾಡಿದ್ದಾರೆ.












Click it and Unblock the Notifications