Bengaluru Heavy Rain: ಧಾರಾಕಾರ ಮಳೆ; ಹೆಣ್ಣೂರು, ಗೆದ್ದಲಹಳ್ಳಿ ಅಂಡರ್‌ಪಾಸ್ ಜಲಾವೃತ, ವಾಹನ ಸವಾರರ ಪರದಾಟ
ಬೆಂಗಳೂರು; ನಗರದಲ್ಲಿ ಸೋಮವಾರ ಮಧ್ಯಾಹ್ನದ ಹೊತ್ತಿಗೆ ಜೋರು ಮಳೆ ಸುರಿಯಿತು. ಗುಡುಗ ಸಹಿತ ಬಂದ ಭಾರೀ ಮಳೆಗೆ ಹೆಣ್ಣೂರು ಮುಖ್ಯ ರಸ್ತೆ ಮತ್ತು ಗೆದ್ದಲಹಳ್ಳಿಯ ರೈಲ್ವೆ ಅಂಡರ್‌ಪಾಸ್ ನಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದರು. ರಸ್ತೆಗಳು ಅಡಿಗಳಷ್ಟು ನೀರಿನಿಂದ ಜಲಾವೃತವಾಗಿದ್ದು, ಮಳೆ ನೀರು ಹೊಳೆಯಂತೆ ಹರಿಯಿತು. ಅದರಲ್ಲೇ ಶಾಲಾ ಮಕ್ಕಳಿದ್ದ ವಾಹನ, ಬೈಕ್ ಮತ್ತು ಕಾರುಗಳ ಚಲಿಸಿದ್ದು ಕಂಡು ಬಂತು.
ಇಂದು ಬೆಳಗ್ಗೆಯಿಂದ ಚುರುಕಿನ ಬಿಸಿಲು ವಾತಾವರಣವೇ ಇತ್ತಾದರೂ ಮಧ್ಯಾಹ್ನ ಹೊತ್ತಿಗೆ ನಗರದ ವಿವಿಧ ಭಾಗಗಳಲ್ಲಿ ದಿಢೀರ್ ಮಬ್ಬು ಕವಿಯಿತು. ನೋಡ ನೋಡುತ್ತಿದ್ದಂತೆ ಜೋರು ಮಳೆಯ ಆಗಮನವಾಯಿತು. ಕೆ.ಆರ್.ಪುರಂ, ಹೆಣ್ಣೂರು, ಜಕ್ಕೂರು, ಗೆದ್ದಲಹಳ್ಳಿ, ಕಬ್ಬನ್ ರಸ್ತೆ, ಹಲಸೂರು, ಹೆಬ್ಬಾಳ, ಟಿಸಿ ಪಾಳ್ಯ, ಬೈಯಪ್ಪನಹಳ್ಳಿ, ಶಿವಾಜಿನಗರ, ಗಾಂಧಿನಗರ, ವಿಧಾನಸೌಧ ಮತ್ತು ಸುತ್ತಮುತ್ತ ಭಾರಿ ಮಳೆ ದಾಖಲಾಯಿತು.

ಮಳೆಗೆ ಸಂಚಾರ, ಸವಾರರಿಗೆ ತೀವ್ರ ತೊಂದರೆ
ಕೆ.ಆರ್ ಮಾರುಕಟ್ಟೆ, ರಾಜಾಜಿನಗರ, ಕೆ.ಆರ್.ಪುರಂ ಮುಖ್ಯರಸ್ತೆಗಳಲಿ ಮಳೆ ನೀರು ನಿಂತ ಪರಿಣಾಮ ಸಂಚಾರ ನಿಧಾನವಾಗಿತ್ತು. ಸಿಗ್ನಲ್ ಜಂಕ್ಷನ್‌ಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮಳೆ ನೀರು ಒಳಚರಂಡಿಯೊಂದಿಗೆ ಕೂಡಿ ರಸ್ತೆ ಮೇಲೆಲ್ಲ ಉಕ್ಕಿ ಹರಿಯಿತು. ಮಳೆ ಬರುತ್ತಿದ್ದಂತೆ ಅವಾಂತರಗಳು, ಮೂಲಸೌಕರ್ಯ ಸಮಸ್ಯೆ ಕುರಿತು ನೆಟ್ಟಿಗರು ವಿಡಿಯೋ ಹಂಚಿಕೊಂಡಿದ್ದಾರೆ.
ಇನ್ನೂ ನಾಗರಬಾವಿ, ಆರ್‌ಆರ್ ನಗರ, ಹಂಪಿನಗರ, ನಾಯಂಡಹಳ್ಳಿ, ಯಲಹಂಕ, ಮೆಜೆಸ್ಟಿಕ್ ಸುತ್ತಮುತ್ತ ಜಿಟಿ ಜಿಟಿ ಮಳೆ ಮುಂದುವರಿಯಿತು. ಉಳಿದಂತೆ ಇತರ ಬಡಾವಣೆಗಳಲ್ಲಿ ಮಬ್ಬು ಕವಿದಿದ್ದು, ಈಗಲೇ ಆಗಲೋ ಮಳೆ ಬರುವ ಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ಹೊತ್ತಿಗೆ ಇನ್ನಷ್ಟು ಬಡಾವಣೆಗಳಲ್ಲಿ ಜೋರು ಮಳೆ ಆಗುವ ನಿರೀಕ್ಷೆಗಳು ದಟ್ಟವಾಗಿವೆ.
ಬೆಂಗಳೂರು ಹವಾಮಾನ ಮುನ್ಸೂಚನೆ?
ಬೆಂಗಳೂರಿನಲ್ಲಿ ಇವತ್ತಿನಂತೆ ನಾಳೆ ಮಂಗಳವಾರವು ಅನೇಕ ಕಡೆಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ ಆಗುವ ಎಲ್ಲ ಸಾಧ್ಯತೆಗಳು ಇವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಳಗ್ಗೆಯಿಂದ ಬಿಸಿಲಿನ ವಾತಾವರಣ, ತೀವ್ರ ಸೆಖೆ ಅನ್ನಿಸಿದರೂ ಸಹಿತ ಮಧ್ಯಾಹ್ನ ಇಲ್ಲವೇ ಸಂಜೆ ವೇಳೆಗೆ ವ್ಯಾಪಕ ಮಳೆ ಸುರಿಯಲಿದೆ. ಈ ವೇಳೆ ನಗರದ ತಾಪಮಾನ ಗರಿಷ್ಠ 31 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಕಂಡು ಬರಬಹುದು.
ನಂತರ ಅಕ್ಟೋಬರ್ 7, 8 ರಂದು ಸಹ ಬೆಂಗಳೂರಿನ ಕೆಲವು ಕಡೆಗಳಲ್ಲಿ ಅಲ್ಲಲ್ಲಿ ಹಗುರದಿಂದ ಸಾಮಾನ್ಯ ಮಳೆ ಬೀಳುವ ನಿರೀಕ್ಷೆ ಇದೆ.
ಮಂಗಳವಾರ ರಾಜ್ಯದ ವಿವಿಧೆಡೆ ಧಾರಾಕಾರ ಮಳೆ
ಇನ್ನೂ ಕರ್ನಾಟಕಕ್ಕೆ ಸಂಬಂಧಿಸಿದಂತೆ ನಾಳೆ ಅಕ್ಟೋಬರ್ 6ರಂದು ಕರಾವಳಿಯ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ, ಮಲೆನಾಡಿನ ಶಿವಮೊಗ್ಗ, ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಭಾರೀ ಮಳೆ ಆಗಲಿದೆ. ನಿರಂತರವಾಗಿ ಧಾರಾಕಾರ ಮಳೆ ನಿರೀಕ್ಷೆ ಇದೆ. ಉಳಿದಂತೆ ಹಾವೇರಿ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಮೈಸೂರು ಇನ್ನಿತರ ಜಿಲ್ಲೆಗಳಲ್ಲಿ ಹಗುರ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.


Click it and Unblock the Notifications
