Bengaluru Rains: ನಾಳೆಯಿಂದ 4 ದಿನ ವ್ಯಾಪಕ ಮಳೆ ಸಂಭವ, ನಗರದ ಜನರಲ್ಲಿ ಆತಂಕ
ಬೆಂಗಳೂರು, ಮೇ 27: ಸಿಲಿಕಾನ್ ಸಿಟಿ ಬೆಂಗಳೂರಿನಾದ್ಯಂತ ಹುಗರ, ಸಾಧಾರದಿಂದ ವ್ಯಾಪಕ ಮಳೆ ಮುಂದುವರಿಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ. ನಾಳೆ ಬುಧವಾರ ಮೇ 28ರಿಂದ ನಾಲ್ಕು ದಿನ ಅಂದರೆ ಮೇ 31ರವರೆಗೆ ಧಾರಾಕಾರ ಮಳೆ ಸುರಿಯುವ ಸಾಧ್ಯತೆ ಇದೆ. ಕಳೆದ ವಾರದ ಸುರಿದ ಮಳೆಗೆ ತಗ್ಗು ಪ್ರದೇಶಗಳು, ಜಲಾವೃತಗೊಂಡಿದ್ದ ಲೇಔಟ್ ನಿವಾಸಿಗಳ ಜೀವನ ಸಹಜ ಸ್ಥಿತಿಗೆ ಬಂದಿತ್ತು. ಅದರ ಬೆನ್ನಲ್ಲೆ ಬರೋಬ್ಬರಿ ನಾಲ್ಕು ದಿನ ನಿರಂತರ ಮಳೆ ಮುನ್ಸೂಚನೆ ದೊರೆತಿದ್ದು, ಜನರಲ್ಲಿ ಆತಂಕ ಮೂಡಲು ಕಾರಣವಾಗಿದೆ.
ಬೆಂಗಳೂರಲ್ಲಿ ಸೋಮವಾರ ಸುರಿದ ಮಳೆ ಇಂದು ಮಂಗಳವಾರ ಕೊಂಚ ವಿರಾಮ ನೀಡಿದೆ. ಇಂದು ಬೆಳಗ್ಗೆ 8.30ರವರೆಗೆ ನಗರದಲ್ಲಿ 5.2 ಮಿಲಿ ಮೀಟರ್, ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ (ಕೆಐಎಎಲ್) 1.8 ಮಿಲಿ ಮೀಟರ್, ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 4.3 ಮಿ.ಮೀ. ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂದಿನ ನಾಲ್ಕು ದಿನಗಳು ಸಧಾರಣವಾಗಿ ಮಳೆ ಆಗುವ ಸಾಧ್ಯತೆ ಇದೆ. ವಾಯುಭಾರ ತೀವ್ರಗೊಂಡಲ್ಲಿ ಸಾಧಾರಣದಿಂದ ಭಾರೀ ಮಳೆ ಆದರೂ ಅಚ್ಚರಿ ಇಲ್ಲ. ಪ್ರತಿ ಬಾರಿಯು ಮಳೆ ಬಂದ ಮೇಲೆಯೇ ಎಚ್ಚೆತ್ತುಕೊಳ್ಳುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (BBMP) ಸದರಿ ಮುನ್ಸೂಚನೆ ಮೇರೆಗೆ ಅಗತ್ಯ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು.
ನಗರದಲ್ಲಿ ಪೂರ್ವ ಮುಂಗಾರು ಬಳಿಕ ಮುಂಗಾರು ಸಕ್ರಿಯವಾಗಿದೆ. ಜನರ ಆರೋಗ್ಯದಲ್ಲಿ ಏರು ಪೇರಾಗುವ ಸಾಧ್ಯತೆ ಇರುತ್ತದೆ. ನಿರಂತರ ಮಳೆ, ಚಳಿ ಮತ್ತು ಈ ವಾತಾವರಣವು ಆರೋಗ್ಯ ಮೇಲೆ ಪರಿಣಾಮ ಭೀರುವ ಸಾಧ್ಯತೆ ಇರುತ್ತದೆ. ಮತ್ತೊಂದೆಡೆ ಕೊರೋನಾ ಸಹ ಹೆಚ್ಚಾಗುತ್ತಿದೆ. ಇದೆಲ್ಲವನ್ನು ಸರ್ಕಾರ ಸಮರ್ಥವಾಗಿ ನಿರ್ವಹಿಸಬೇಕಿದೆ. ಮಳೆ ವೇಳೆ ತಗ್ಗು ಪ್ರದೇಶದ ಜನರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕಿದೆ.
ಗರಿಷ್ಠ ತಾಪಮಾನ ಇಳಿಕೆ..
ಗರಿಷ್ಠ ತಾಪಮಾನ ಭಾರೀ ಬದಲಾವಣೆ ಆಗಲಿದೆ. ಸದ್ಯ ಬೆಂಗಳೂರಿನಲ್ಲಿ 26-27 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾದರೆ, ಕನಿಷ್ಠ ತಾಪಮಾನ 18-20 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಂದಿನ ನಾಲ್ಕು ದಿನ ಗರಿಷ್ಠ ತಾಪಮಾನ ಕ್ರಮವಾಗಿ 25, 25, 26, 26 ಡಿ.ಸೆ. ದಾಖಲಾಗುವ ನಿರೀಕ್ಷೆ ಇದೆ ಎಂದು ಕರ್ನಾಟಕ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜನರು ಆರೋಗ್ಯದ ಕಾಳಜಿ ವಹಿಸಬೇಕಿದೆ.
ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ
ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿ ಸೇರಿದಂತೆ ಸಮುದ್ರ ಭಾಗದಲ್ಲಿ ಉಂಟಾಗಿರುವ ವೈರಪರೀತ್ಯ, ವಾಯುಭಾರ ಕುಸಿತದ ಪ್ರಭಾವದಿಂದಾಗಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ರಾಜ್ಯದ ವಿವಿಧೆಡೆ ವ್ಯಾಪಕ ಮಳೆ ಆಗುತ್ತಿದೆ. ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ. ಒಳನಾಡಿನ ಕೆಲವು ಜಿಲ್ಲೆಗಳಿಗೆ ಆರೆಂಜ್ ಅಲಟ್ ಘೋಷಿಸಲಾಗಿದೆ ಎಂದು ಐಎಂಡಿ ತಿಳಿಸಿದೆ. ಮಳೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.












Click it and Unblock the Notifications