Bengaluru Dry Month: ಮಾರ್ಚ್‌ನಲ್ಲಿ 'ಶೂನ್ಯ'ಮಳೆ: ಇಡೀ ತಿಂಗಳು ಒಣಹವೆ ವಾತಾವರಣ
ಬೆಂಗಳೂರು, ಏಪ್ರಿಲ್ 01: ಕರ್ನಾಟಕ ರಾಜ್ಯಾದ್ಯಂತ ಬೇಸಿಗೆ ಇದ್ದು, ಕೆಲವೆಡೆ ಮಳೆ ಆಗಿದ್ದು, ಒಣ ಹವೆಯ ವಾತಾವರಣವು ಮುಂದುವರಿದಿದೆ. ಮಳೆ ವಿಚಾರಕ್ಕೆ ಬಂದರೆ, ರಾಜ್ಯ ರಾಜಧಾನಿ ಬೆಂಗಳೂರು ತುಸು ಭಿನ್ನ. ಏಕೆಂದರೆ ಕಳೆದ ಮಾರ್ಚ್ ತಿಂಗಳು ಬೆಂಗಳೂರು ಪರಿಪೂರ್ಣ ಒಣಹವೆಗೆ ಸಾಕ್ಷಿಯಾಗಿದೆ. ಒಮ್ಮೆಯು ಮಳೆ ಬಂದಿಲ್ಲ ಎಂದು ಐಎಂಡಿ ಮಾಹಿತಿ ನೀಡಿದೆ.
ನಗರದಲ್ಲಿ ಭಾರತ ಹವಾಮಾನ ಇಲಾಖೆಯ (ಐಎಂಡಿ) ನಾಲ್ಕು ವೀಕ್ಷಣಾಲಯಗಳ ಪ್ರಕಾರ, ನೆನ್ನೆಗೆ ಕೊನೆಗೊಂಡಂತೆ ಮಾರ್ಚ್ ತಿಂಗಳಲ್ಲಿ ಮಳೆ ಆಗಿಲ್ಲ. ಇದು ಈವರೆಗಿನ ಅತ್ಯಂತ ಶುಷ್ಕ ವಾತಾವರಣದ ತಿಂಗಳಾಗಿದೆ. ಇದು ಸಹ ನೀರಿನ ಬಿಕ್ಕಟ್ಟನ್ನು ಸಾರಿ ಹೇಳುತ್ತದೆ ಎಂದು 'ಡಿಎಚ್' ವರದಿ ಮಾಡಿದೆ.

ಹವಾಮಾನ ಇಲಾಖೆಯು ಈ ಮಾರ್ಚ್ ತಿಂಗಳಲ್ಲಿ 14.7 ಮಿಮೀ ಮಳೆಯನ್ನು ನಿರೀಕ್ಷೆ ಮಾಡಿತ್ತು. ಕೇವಲ ಎಚ್‌ಎಎಲ್ ವ್ಯಾಪ್ತಿಯಲ್ಲಿಯೇ ಒಟ್ಟು 11.2 ಮಿ.ಮೀ.ಮಳೆ ಆಗಬೇಕಿತ್ತು. ಆದರೆ ನಗರ ವ್ಯಾಪ್ತಿಯಲ್ಲಿ ಎಲ್ಲಿಯೂ ಒಂದು ಹನಿ ಮಳೆ ಬಿದ್ದಿಲ್ಲ.
ದಶಕಗಳ ಹಿಂದೆ ಮಾರ್ಚ್‌ನಲ್ಲಿ ಹೆಚ್ಚು ಮಳೆ
ನಗರದಲ್ಲಿ ದಶಕಗಳ ಹಿಂದೆ (1981) 101.2 ಮಿಮೀ ಮಳೆಯು ಮಾರ್ಚ್‌ನಲ್ಲಿ ದಾಖಲಾಗಿತ್ತು. ಆ ತಿಂಗಳನ್ನು ತೇವಭರಿತ ಮಾರ್ಚ್ ತಿಂಗಳಿಗೆ ನಗರ ಸಾಕ್ಷಿಯಾಗಿದೆ ಎಂದು ವರ್ಣಿಸಲಾಗಿತ್ತು. ಈ ಮಧ್ಯೆ ಎಚ್‌ಎಎಲ್ ವಿಮಾನ ನಿಲ್ದಾಣದ ಅತ್ಯಂತ ತೇವದ ಮಾರ್ಚ್ 2008 ರಲ್ಲಿ ಎನ್ನಬಹುದು. ಏಕೆಂದರೆ ಆಗ 219.9 ಮಿ.ಮೀ ಮಳೆ ಆಗಿತ್ತು.
ಮಾರ್ಚ್‌ನಲ್ಲಿ ಮಳೆ ದಾಖಲಾಗಿಲ್ಲ
ಇದೀಗ 2024ರ ಮಾರ್ಚ್ ತಿಂಗಳಲ್ಲಿ ಅಸಾಧಾರಣವಾಗಿ ಶುಷ್ಕ ವಾತಾವರಣ ನಿರ್ಮಾಣವಾಗಿದೆ. ಇದರೊಂದಿಗೆ ದಕ್ಷಿಣ ಒಳನಾಡಿನ ವ್ಯಾಪ್ತಿಗೆ ಬರುವ ಜಿಲ್ಲೆಗಳಲ್ಲಿ ಎಲ್ಲಿಯೂ ಮಳೆ ದಾಖಲಾಗಿಲ್ಲ ಎಂದು ಐಎಂಡಿ ವೀಕ್ಷಣಾಲಯಗಳು ತಿಳಿಸಿವೆ.
ಹವಾಮಾನಶಾಸ್ತ್ರದಲ್ಲಿ ಮಳೆ ಬರುವಿಕೆ, ಇಲ್ಲವೇ ಬಂದ ಕನಿಷ್ಠ ಮಳೆಯ ಕುರುಹುಗ ಅಳೆಯಬಹುದಾಗಿದೆ. ಮಾರ್ಚ್‌ನಲ್ಲಿ ದಕ್ಷಿಣ ಒಳನಾಡಿನ ಯಾವ ಜಿಲ್ಲೆಗಳಲ್ಲಿಯೂ ಈ ಕುರುಹು ಪತ್ತೆ ಆಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

5 ವರ್ಷಗಳಲ್ಲಿ ಭಾನುವಾರ ಗರಿಷ್ಠ ಉಷ್ಣಾಂಶ
ಮಾರ್ಚ್ ತಿಂಗಳ ಕೊನೆ ದಿನ ಮಾರ್ಚ್ 31ರಂದು ಭಾನುವಾರ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಈ ಭಾನುವಾರ ಮಾರ್ಚ್ 2019 ರಿಂದ ಈವರೆಗೆ ಬೆಂಗಳೂರಿನ ಮಟ್ಟಿಗೆ ಅತ್ಯಂತ ಶಾಖದ ದಿನವಾಗಿ ಗುರುತಿಸಿಕೊಂಡಿದೆ.
ವಾಡಿಕೆಗಿಂತ ಹೆಚ್ಚು ತಾಪಮಾನ ದಾಖಲು, ನಿರಂತರ
ಬೆಂಗಳೂರು ಗರಿಷ್ಠ ತಾಪಮಾನವು ವಾಡಿಕೆಗಿಂತ 2.4 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚು ದಾಖಲಾಗುತ್ತಿದೆ. ಅದೇ ರೀತಿ HAL ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿ 35.8 ಡಿಗ್ರಿ ಸೆಲ್ಸಿಯಸ್, KIALನಲ್ಲಿ ಗರಿಷ್ಠ 36.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಯಲಹಂಕದ ಜಿಕೆವಿಕೆ ಯಲ್ಲಿ ವಾಡಿಕೆಗಿಂತ 1.2 ಡಿ.ಸೆ ಅಧಿಕ ಉಷ್ಣಾಂಶ ಕಂಡು ಬಂದಿದೆ.
ಬೆಂಗಳೂರಿನಲ್ಲಿ ಮುಂದಿನ ಎರಡು ವಾರಗಳಲ್ಲಿ ಗರಿಷ್ಠ ತಾಪಮಾನವು 35ರಿಂದ 36 ಡಿಗ್ರಿ ಸೆಲ್ಸಿಯಸ್ ಕಂಡು ಬರುವ ನಿರೀಕ್ಷೆಗಳು ಇವೆ. ನಿತ್ಯ ಎಂದಿನಂತೆ ಶುಷ್ಕ ವಾತಾವರಣವೇ ಕಂಡು ಬರಲಿದೆ. ಇದರೊಂದಿಗೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಒಂದೆರಡು ಕಡೆಗಳಲ್ಲಿ ಸಾಮಾನ್ಯ ಮಳೆ ನಿರೀಕ್ಷೆ ಇದೆ ಎಂದು ಐಎಂಡಿ ಬೆಂಗಳೂರು ವಿಜ್ಞಾನಿ ಡಾ.ಎ ಪ್ರಸಾದ್ ಮುನ್ಸೂಚನೆ ನೀಡಿದರು.












Click it and Unblock the Notifications