ಮಳೆಗಾಲದಲ್ಲೂ ಬೆಂಗಳೂರನ್ನ ಸುಡುತ್ತಿದೆ ಬಿಸಿಲು; ಯಾಕೆ ಗೊತ್ತಾ?
ಸಿಲಿಕಾನ್ ಸಿಟಿ ಬೆಂಗಳೂರು ಸದಾ ಚಿಲ್ ಆಗಿರುವ ಸಿಟಿ ಎಂದು ಎಲ್ಲೆಡೆಯಿಂದಲೂ ಕರೆಸಿಕೊಂಡಿದೆ. ಸದ್ಯ ಮಳೆಗಾಲ ಮುಂದುವರಿದಿರುವುದಿಂದ ತಂಪಾದ ವಾತಾವರಣ ಇರುವುದು ಕಾಮನ್. ಆದರೆ, ಬೆಂಗಳೂರಿನಲ್ಲಿ ಇತ್ತೀಚೆಗೆ ಬಿಸಿಲು ಕೂಡ ಜಾಸ್ತಿ ಆಗಿದೆ ಅಂದರೆ ನೀವು ನಂಬಲೇಬೇಕು. ರಾಜಧಾನಿ ಬೆಂಗಳೂರಿನಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಳವಾಗಿದ್ದು, ಮಳೆಗಾಲದಲ್ಲಿಯೂ 32 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ದಾಖಲಾಗಿದೆ ಎಂದು ವರದಿಯಾಗಿದೆ.
ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದು, ಮಳೆಗಾಲದಲ್ಲೂ ಬೇಸಿಗೆಯ ಅನುಭವ ಆಗುತ್ತಿದೆ. ಇದರ ನಡುವೆ ಆಗಾಗ ತಂಪನೆಯ ವಾತಾವರಣ ಕೂಡ ಬರುತ್ತಿದ್ದು, ಈ ಹವಾಮಾನ ವೈಪರೀತ್ಯಕ್ಕೆ ಉದ್ಯಾನನಗರಿಯ ಜನ ಫಿದಾ ಆಗಿದ್ದಾರೆ. ಹವಾಮಾನ ತಜ್ಞರ ಪ್ರಕಾರ ಇನ್ನೂ ಒಂದು ವಾರದಮಟ್ಟಿಗೆ ಇದೇ ರೀತಿಯ ವಾತಾವರಣ ಇರಲಿದೆಯಂತೆ.

ಈಗಾಗಲೇ ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 32 ಡಿಗ್ರಿಯವರೆಗೂ ತಲುಪಿದೆ. ಇದಲ್ಲದೆ ಬಿಸಿಗಾಳಿಯ ಅನುಭವವೂ ಆಗುತ್ತಿದ್ದು, ಇದರಿಂದ ಆರೋಗ್ಯದ ಮೇಲೆಯೂ ಎಫೆಕ್ಟ್ ಬೀಳಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಬೆಳಿಗ್ಗೆ ಹಾಗೂ ಸಂಜೆ ವೇಳೆ ತುಸು ಚಳಿಯ ವಾತಾವರಣವಿದ್ದರೆ, ಮಧ್ಯಾಹ್ನವೆಲ್ಲ ಬೇಸಿಗೆಯಂತೆ ಬಿಸಿ ಸುಡಲಾರಂಭಿಸಿದೆ ಎನ್ನಲಾಗಿದೆ.
ಸದ್ಯ ರಾಜಧಾನಿಯಲ್ಲಿ ಬಿಸಿಲಿನ ವಾತಾವರಣದಿಂದ ಜನರಂತೂ ಇದೇನು ಮಳೆಗಾಲವೋ? ಬೇಸಿಗೆಯೋ? ಎನ್ನುವ ಗೊಂದಲದಲ್ಲಂತೂ ಇದ್ದಾರೆ.
ಇನ್ನು ರಾಜ್ಯದಲ್ಲಿ ಮುಂದಿನ 5 ದಿನಗಳವರೆಗೆ ಮಳೆಯಾಗುವ ಸಾಧ್ಯತೆ ಕೂಡ ಇದೆ. ರಾಜ್ಯದ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಚದುರಿದಂತೆ ಹಾಗೂ ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಸೆಪ್ಟೆಂಬರ್ 24ರವರೆಗೆ ಗುಡುಗು ಮಿಂಚು ಸಹಿತ ಮಳೆಯಾಗಲಿದೆ.

ಉತ್ತರ ಕರ್ನಾಟಕದಾದ್ಯಂತ ಮಳೆ ಅಬ್ಬರಿಸಲಿದ್ದು, ಉತ್ತರ ಒಳನಾಡಿನ ಹಲವಾರು ಜಿಲ್ಲೆಗಳಲ್ಲಿ ವರುಣ ಕೃಪೆ ತೋರಿದ್ದು ಮುಂದಿನ 48 ಗಂಟೆಗಳ ಕಾಲ ಗುಡುಗು ಮಿಂಚು ಸಹಿತ ಭಾರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಜ್ಞರಾದ ಸಿ.ಎಸ್. ಪಾಟೀಲ್ ಮಾಹಿತಿ ನೀಡಿದ್ದಾರೆ.
ಸಮುದ್ರದ ಮೇಲ್ಮೈನಲ್ಲಿ ಸಣ್ಣ ಸ್ಟ್ರಪ್ ಇದೆ. ಅಲ್ಲದೆ ರಾಜ್ಯದಲ್ಲಿ ಮುಂಗಾರು ಮಳೆ ಚುರುಕಾಗಿರುವ ಕಾರಣ, ಉತ್ತರ ಕರ್ನಾಟಕದ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ ಜಿಲ್ಲೆಗಳಲ್ಲಿ ಭಾರಿ ಮಳೆ ಅಥವಾ ಗುಡುಗು ಸಹಿತ ಮಳೆ ಸುರಿಯುವ ಸಾಧ್ಯತೆಯಿದೆ ಎಂದಿದ್ದಾರೆ.
ಉತ್ತರ ಒಳನಾಡಿನಲ್ಲಿ ಬಹುತೇಕ ಮುಂದಿನ ಒಂದು ವಾರ ಮಳೆ ಮುಂದುವರಿಯಲಿದೆ ಎಂದು ಹೇಳಲಾಗಿದೆ. ಅದೇ ರೀತಿ ದಕ್ಷಿಣ ಒಳನಾಡಿನಲ್ಲಿ ಬಳ್ಳಾರಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಪೈಕಿ ಬೇರೆ ಬೇರೆ ದಿನಗಳಲ್ಲಿ ಭಾರೀ ಮಳೆಯಾಗಲಿದೆ ಆಗಿದೆ. ಹೀಗಾಗಿ ಈ ಜಿಲ್ಲೆಗಳಿಗೆ ಒಂದು ದಿನದ ಮಟ್ಟಿಗೆ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ.
ಇತ್ತ ಕರಾವಳಿ ಜಿಲ್ಲೆಗಳಿಗೆ ಮಳೆ ಕಡಿಮೆಯಾಗಲಿದ್ದು, ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ. ಆಗಾಗ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.












Click it and Unblock the Notifications