Bengaluru: ಬ್ರಿಟೀಷರ ಕಾಲದ ಕಾನೂನಿಂತೆ ಪರಿಹಾರ ಬೇಡ: ಪಿಆರ್‌ಆರ್ ಯೋಜನೆ ಕೈಬಿಡಲು ರೈತರ ಮನವಿ
ಪೆರಿಫೆರಲ್ ರಿಂಗ್ ರೋಡ್ (ಪಿಆರ್‌ಆರ್) ಯೋಜನೆಗೆ ಭೂಮಿಯನ್ನು ನೀಡುವ ರೈತರಿಗೆ ಬ್ರಿಟೀಷರ ಕಾಲದ ಕಾನೂನಿನ ಆಧಾರದ ಮೇಲೆ ಬಿಡಿಎ ಪರಿಹಾರ ನೀಡುವುದನ್ನು ವಿರೋಧಿಸಲಾಗಿದೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರೈತರು ತಮ್ಮ ಸಮಸ್ಯೆಗಳನ್ನು ಹಂಚಿಕೊಂಡರು. 2014ರ ಭೂಸ್ವಾಧೀನ ಕಾಯ್ದೆಯಡಿ ಸರ್ಕಾರದಿಂದ ಪರಿಹಾರ ನೀಡಲು ಸಾಧ್ಯವಾಗದಿದ್ದರೆ ಪಿಆರ್‌ಆರ್ ಯೋಜನೆಯನ್ನು ಕೈಬಿಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಈ ಯೋಜನೆಯಿಂದ 12 ಸಾವಿರ ರೈತ ಕುಟುಂಬಗಳಿಗೆ ತೊಂದರೆಯಾಗಲಿದೆ, ಅವರು ಜಮೀನು ಕಳೆದುಕೊಳ್ಳತ್ತಾರೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು. ಈ ಯೋಜನೆಗೆ ಭೂಮಿ ಕೊಡುವ ರೈತರಿಗೆ ಸರ್ಕಾರ ಪರ್ಯಾಯ ಭೂಮಿ ಒದಗಿಸಬೇಕು ಎಂದು ಸರ್ಕಾರಕ್ಕೆ ಸೂಚನೆ ನೀಡಿದರು.
100 ಮೀಟರ್ ಅಗಲ, 73 ಕಿ.ಮೀ ಉದ್ದ
ಬೆಂಗಳೂರು ಮಹಾನಗರದ ಸುತ್ತ 73 ಕಿಮೀ ಉದ್ದದ 100 ಮೀಟರ್ ಅಗಲದ ಫೆರಿಫೆರಲ್ ರಿಂಗ್ ರಸ್ತೆಯನ್ನು ನಿರ್ಮಿಸುವ ಮಹತ್ವದ ಯೋಜನೆ ಇದ್ದು, ಇದಕ್ಕೆ 2,696 ಎಕರೆ ಭೂಸ್ವಾಧೀನ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ.
ಬಿಡಿಎ ಕಾಯಿದೆಯಡಿ ಪರಿಹಾರ ನೀಡಿದರೆ ಬೆಂಗಳೂರಿನಿಂದ 300 ಕಿಮೀ ದೂರದಲ್ಲಿಯೂ ಭೂಮಿ ಖರೀದಿಸಲು ಸಾಧ್ಯವಾಗುವುದಿಲ್ಲ ಎಂದು ರೈತರೊಬ್ಬರು ಹೇಳಿದ್ದಾರೆ. ರಸ್ತೆ ನಿರ್ಮಾಣದ ಬಳಿಕ ಟೋಲ್ ಸಂಗ್ರಹ ಮಾಡುತ್ತದೆ, ಇದರಿಂದ ಸರ್ಕಾರ ಆದಾಯ ಗಳಿಸುತ್ತದೆ, ಸರ್ಕಾರ ಇದನ್ನೆಲ್ಲಾ ಪರಿಗಣಿಸಿ ನ್ಯಾಯಯುತ ಪರಿಹಾರ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ನ್ಯಾಯಾಲಯದ ನಿರ್ದೇಶನ
ಪ್ರಾಸ್ತಾವಿಕವಾಗಿ ಮಾತನಾಡಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕಮಿಷನರ್ ಜಿ ಕುಮಾರ್ ನಾಯ್ಕ್, ಪ್ರಾಧಿಕಾರವು 77 ಗ್ರಾಮಗಳಿಂದ ಒಟ್ಟು 2,696 ಎಕರೆ ಭೂಮಿಯನ್ನು ಪಿಆರ್‌ಆರ್ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಳ್ಳಲು ಸೂಚಿಸಿದೆ.
ಬಿಡಿಎ ಕಾಯಿದೆ ಪ್ರಕಾರ ಪರಿಹಾರ ಪಾವತಿಸುವ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ ಎಂದು ಸಭೆಯಲ್ಲಿ ಭಾಗವಹಸಿದ ರೈತರಿಗೆ ತಿಳಿಸಿದರು. 2006-07ರಲ್ಲಿ 1,800 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಹೊರಡಿಸಿದ ಪ್ರಾಥಮಿಕ ಮತ್ತು ಅಂತಿಮ ಅಧಿಸೂಚನೆಗಳನ್ನೂ ಅವರು ಉಲ್ಲೇಖಿಸಿದ್ದಾರೆ.
ಆದರೆ ಬಿಡಿಎ ಕಾಯ್ದೆಯ ಆಧಾರದ ಮೇಲೆ ಪರಿಹಾರ ನೀಡುವುದನ್ನು ರೈತರು ಬಲವಾಗಿ ವಿರೋಧಿಸಿದ್ದಾರೆ. ರೈತರ ಹಿತಾಸಕ್ತಿಗೆ ವಿರುದ್ಧವಾದ ನಿಲುವನ್ನು ಸರ್ಕಾರ ತೆಗೆದುಕೊಂಡರೆ ನಾವು ನರ್ಮದಾ ಬಚಾವೋ ಆಂದೋಲನದಂತೆಯೇ ಪ್ರತಿಭಟನೆ ನಡೆಸುತ್ತೇವೆ ಎಂದು ರೈತ ಹೋರಾಟಗಾರ ರಘು ಹೇಳಿದ್ದಾರೆ.
ಯೋಜನೆ ಕೈಬಿಡಲು ಮನವಿ
ರೈತ ಸಂಘಟನೆಗಳು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಈ ಯೋಜನೆಯನ್ನು ಕೈಬಿಡುವಂತೆ ಕೇಳಿದ್ದಾರೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ರಸ್ತೆಯನ್ನು ನಿರ್ಮಿಸುವುದ ಅನಗತ್ಯ ಎಂದು ಹೇಳಲಾಗಿದೆ. ಈಗಾಗಲೇ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ (STTR) ನಿರ್ಮಾಣವಾಗುತ್ತಿದ್ದು ಡಿಸೆಂಬರ್ ಅಂತ್ಯದಲ್ಲಿ ಸಿದ್ಧವಾಗಲಿದೆ ಮತ್ತು ಬೈಪಾಸ್ ಆಗಿ ಕಾರ್ಯನಿರ್ವಹಿಸುತ್ತದೆ. ಟ್ರಕ್‌ಗಳು ನಗರವನ್ನು ಪ್ರವೇಶಿಸದೆ ಚಲಿಸಬಹುದು" ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಡಿ.ಕೆ. ಶಿವಕುಮಾರ್ ಈ ಯೋಜನೆ ಕೈಬಿಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ರೈತರ ಹಿತ ಕಾಪಾಡುವ ಮೂಲಕ ಪಿಆರ್‌ಆರ್ ನಿರ್ಮಿಸಲು ಸರ್ಕಾರ ಬದ್ಧವಾಗಿದೆ. ಭೂಮಿಯನ್ನು ಡಿನೋಟಿಫೈ ಮಾಡುವ ಅಧಿಕಾರ ನನಗಿಲ್ಲ, ನನ್ನ ಆಸ್ತಿ ಕೂಡ ಸ್ವಾಧೀನವಾಗಲಿದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications