Blast: ಬೆಂಗಳೂರಿನ ನಿರ್ಮಾಣ ಹಂತದ ಕಟ್ಟಡದಲ್ಲಿ ಭಾರೀ ಸ್ಫೋಟ, ಇಬ್ಬರಿಗೆ ಗಾಯ: ಪ್ರಿಯಾಂಕ್ ಖರ್ಗೆ ರಿಯಾಕ್ಟ್
ಬೆಂಗಳೂರು: ರಾಜಧಾನಿ ಬೆಂಗಳೂರಿನ ಪುಲಕೇಶಿನಗರದ ಜರ್ಮಿಯಾ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ನಾಲ್ಕನೇ ಮಹಡಿಯಲ್ಲಿ ತೀವ್ರ ಸ್ವರೂಪದ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಸಂಬಂಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರತಿಕ್ರಿಯಿಸಿದ್ದಾರೆ.
ಬುಧವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಗಾಯಗೊಂಡ ಕಾರ್ಮಿಕರನ್ನು ತಕ್ಷಣವೇ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ವಿಚಾರವಾಗಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, "ನಾವು ಈ ಘಟನೆ ಹೇಗಾಯಿತು, ಕಾರಣಗಳನ್ನು ಪರಿಶೀಲಿಸುತ್ತಿದ್ದೇವೆ. ಸ್ಥಳದಲ್ಲಿ ದೊರೆತ ಎಲ್ಲಾ ವಸ್ತುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ (ಫೊರೆನ್ಸಿಕ್ ಆಡಿಟ್) ಕಳುಹಿಸಿದ್ದೇವೆ. ಅಲ್ಲಿಂದ ಪರೀಕ್ಷಾ ವರದಿ ಬಂದ ಬಳಿಕ ಸತ್ಯ ಗೊತ್ತಾಗಲಿದೆ. ಆಗ ನಿಮಗೆ ಮಾಹಿತಿ ನೀಡುತ್ತೇವೆ' ಎಂದು ಹೇಳಿದ್ದಾರೆ.

ತನಿಖೆ ಆರಂಭಿಸಿದ ಪೊಲೀಸರು
ಇನ್ನೂ ಸ್ಫೋಟ ಸಂಭವಿಸಿದ ಪುಲಕೇಶಿ ನಗರದ ಜರ್ಮಿಯಾ ರಸ್ತೆಯಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಭದ್ರತಾ ದೃಷ್ಟಿಯಿಂದ ಭಯೋತ್ಪಾದನಾ ನಿಗ್ರಹ ದಳ (ATS), ಆಂತರಿಕ ಭದ್ರತಾ ವಿಭಾಗ (ISD) ಮತ್ತು ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಮೂಲೆ ಮೂಲೆಗಳನ್ನು ಜಾಲಾಡಿದ್ದಾರೆ. ಘಟನೆಯು ದುರುದ್ದೇಶಪೂರ್ವಕವಾಗಿ ನಡೆಸಿದ ಕೃತ್ಯವಾ? ಎಂಬ ಆಯಾಮದಲ್ಲಿ ಪುಲಕೇಶಿನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಕಟ್ಟದ ಮಾಲೀಕರ ಅಬ್ದುಲ್ ರೆಹಮಾನ್ ಎನ್ನಲಾಗಿದೆ. ಆತ ಹೇಳಿರುವ ಪ್ರಕಾರ, ನಿರ್ಮಾಣ ಕಟ್ಟಡಕ್ಕೆ ಸಂಬಂಧಿಸಿದಂತೆ ಬ್ಯಾಗ್ ಒಂದರಲ್ಲಿದ್ದ ಬ್ಯಾಟರಿಯಂತಹ ವಸ್ತು ಇತ್ತು. ಅದು ಸ್ಫೋಟಗೊಂಡಿರಬಹುದು ಎಂದಿದ್ದಾರೆ. ಸ್ಫೋಟಗೊಂಡ ವಸ್ತು ಯಾವುದು ಅಥವಾ ಸ್ಫೋಟಕ್ಕೆ ನಿಖರ ಕಾರಣವೇನು? ಎಂದು ಇನ್ನಷ್ಟೇ ತಿಳಿಯಬೇಕಿದೆ.
ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣ
ಎಂದಿನಂತೆ ಬೆಳಗ್ಗೆ ಕಟ್ಟಡ ಕೆಲಸ ಆರಂಭಗೊಂಡಿತ್ತು. ದಿಢೀರನೇ ಸ್ಫೋಟದ ಸದ್ದು ಕೇಳಿ ಸ್ಥಳೀಯರು ಕಟ್ಟಡದತ್ತ ಧಾವಿಸಿದರು. ಇಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು ಗಮನಿಸಿ, ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಸ್ಥಳದಲ್ಲಿ ಲಭಿಸಿದ ವಸ್ತುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಅಲ್ಲಿಂದ ವರದಿ ಬರಲು ಒಂದೆರಡು ವಾರಗಳು ಬೇಕಾಗಬಹುದು. ಬಳಿಕವೇ ಅಸಲಿ ಸತ್ಯ ಗೊತ್ತಾಗಲಿದೆ. ಅಷ್ಟರೊಳಗೆ ಪೊಲೀಸರಿಗೂ ಒಂದಷ್ಟು ಮಾಹಿತಿ ಸಿಗುವ ವಿಶ್ವಾಸವಿದೆ.
#WATCH | Bengaluru: On a blast in Bengaluru's Pulakeshinagar PS limits, Karnataka Minister Priyank Kharge says, "We are evaluating that. All the materials have gone for a forensic audit. Once that is done, we will get back to you." https://t.co/DpCGDMoZFw
— ANI (@ANI) October 21, 2026
ಫೊರೆನ್ಸಿಕ್ ಅಧಿಕಾರಿಗಳ ನೆರವು?
ಇನ್ನೂ ಈ ಘಟನೆ ಹೇಗೆ ನಡೆಯಿತು, ಕಾರಣವೇನೆಂದು ಪತ್ತೆ ಪತ್ತೆ ಮಾಡುವ ಕಾರ್ಯದಲ್ಲಿ ವಿಧಿವಿಜ್ಞಾನ (ಫೊರೆನ್ಸಿಕ್) ವರದಿಯು ತನಿಖಾಧಿಕಾರಿಗಳಿಗೆ ನೇರವಾಗುವ ಸಾಧ್ಯತೆ ಇದೆ. ಘಟನಾ ಸ್ಥಳವನ್ನು ಪೊಲೀಸರು ಇಂಚಿಂಚೂ ತಡಕಾಡಿದ್ದಾರೆ.
ಈ ಸ್ಫೋಟವು ಆಕಸ್ಮಿಕವಾಗಿ ಸಂಭವಿಸಿದೆಯೇ ಅಥವಾ ಉದ್ದೇಶಪೂರ್ವಕ ಕೃತ್ಯವೇ ಎಂಬುದರ ಕುರಿತು ಸಚಿವರಾಗಲಿ, ಪೊಲೀಸ್ ಅಧಿಕಾರಿಗಳಾಗಲಿ ತಿಳಿಸಿಲ್ಲ. ಒಂದು ವೇಳೆ ಬ್ಯಾಟರಿಯಂತ ವಸ್ತು ಬಳಸಿದ್ದೇ ಆದಲ್ಲಿ ಅದು ಕಟ್ಟಡ ನಿರ್ಮಾಣಕ್ಕೆ ಅಗತ್ಯವಿತ್ತಾ ಎಂದೆಲ್ಲ ಮಾಹಿತಿ ಕಲೆ ಹಾಕಲಾಗುತ್ತಿದೆ.


Click it and Unblock the Notifications
