Bengaluru: ಮನೆಯಿಂದ ಗೌಪ್ಯ ಮತದಾನಕ್ಕಾಗಿ ನೋಂದಣಿ ಆಗಿದ್ದ 33 ಮಂದಿ ಮತದಾನ ಮೊದಲೇ ಸಾವು
ಬೆಂಗಳೂರು, ಮೇ 01: ಕರ್ನಾಟಕದಲ್ಲಿ ಭಾರತೀಯ ಚುನಾವಣೆ ಆಯೋಗ ಮೊದಲ ಭಾರಿಗೆ ಜಾರಿಗೆ ತಂದ 'ಮನೆಯಿಂದ ಮತದಾನ ಮಾಡು' ವ್ಯವಸ್ಥೆಗೆ ನೋಂದಣಿಯಾಗಿದ್ದ 33 ಮಂದಿ ಮತದಾನಕ್ಕೂ ಮೊದಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಚುನಾವಣೆ ಆಯೋಗ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರಿಗೆ, ಹಾಸಿಗೆಯಿಂದ ಮೇಲೆ ಏಳಲಾಗದ ಗಂಭೀರ ಆರೋಗ್ಯ ಕಾಯಿಲೆ ತುತ್ತಾದವರು, ವಿಶೇಷ ಚೇತನರಿಗೆ ಮನೆಯಿಂದಲೇ ಗೌಪ್ಯ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇವರು ನೋಂದಣಿ ಮಾಡಿಕೊಂಡು ಮತ ಚಲಾಯಿಸಬಹುದಾಗಿದೆ.

ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 28 ವಿಧಾನಸಭಾ ಕ್ಷೇತ್ರಗಳಿದ್ದು, ಇಲ್ಲಿ ಹಿರಿಯ ನಾಗರಿಕರು ಗೌಪ್ಯ ಮತದಾನ ನಡೆಸಲು ನೋಂದಣಿ ಮಾಡಿಕೊಂಡಿದ್ದರು. ಹೀಗೆ ನೋಂದಣಿ ಮಾಡಿಕೊಂಡ ನಾಗರಿಕರ ಪೈಕಿ ಒಟ್ಟು 33 ಮಂದಿ ಮತದಾನಕ್ಕು ಮೊದಲೇ ಸಾವನ್ನಪ್ಪಿದ್ದಾರೆ.
ಅಂದರೆ ಏಪ್ರಿಲ್ 29 ರಿಂದ ಮೇ 6ರವರೆಗೆ ಮನೆಯಿಂದ ಮತದಾನ ಮಾಡುವವರಿಗೆ ಸಮಯ ನೀಡಲಾಗಿದೆ. ಇದು ಆರಂಭವಾಗಿ ಇಂದಿಗೆ ಮೂರು ದಿನವಾಗಿದೆ. ಮೃತ 33ಮಂದಿ ನೋಂದಣಿ ಮಾಡಿಕೊಂಡಿದ್ದರು. ಆದರೆ ಮತ ಚಲಾಯಿಸಿರಲಿಲ್ಲ. ಅಷ್ಟರಲ್ಲಾಗಲೇ ಕಾಲವಾಗಿದ್ದಾರೆ.
ನೋಂದಣಿ ನೋಂದಣಿ: ಮೃತರ ವಿವರ
ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಒಟ್ಟು 9,152 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು 119 ಮಂದಿ ವಿಶೇಷ ಚೇತನರು ಮನೆಯಿಂದ ಮತದಾನಕ್ಕೆ ನೋಂದಾಯಿಸಿಕೊಂಡಿದ್ದರು. ಅದರಲ್ಲಿ ಈ ಪೈಕಿ 33 ಮಂದಿ ಮತದಾನಕ್ಕೂ ಮುನ್ನವೇ ಮೃತಪಟ್ಟಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಬೆಂಗಳೂರು ಕೇಂದ್ರ ವ್ಯಾಪ್ತಿಯಲ್ಲಿ 12 ಮಂದಿ, ಬೆಂಗಳೂರು ದಕ್ಷಿಣ 5, ಬೆಂಗಳೂರು ಉತ್ತರ 15, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ಏಪ್ರಿಲ್ ತಿಂಗಳ ಕೊನೆ ದಿನ ಭಾನುವಾರ ಒಟ್ಟು 2,282 ಮಂದಿ ಗೌಪ್ಯ ಮತದಾನ ಮಾಡಿದ್ದಾರೆ. ಅದರಲ್ಲಿ 18 ಅಂಗವಿಕರು ಹಾಗೂ 2,264 ಮಂದಿ 80 ವರ್ಷ ಮೇಲ್ಪಟ್ಟವರಾಗಿದ್ದಾರೆ. ಇನ್ನೂ ಕಾರ್ಯಕ್ರಮ ಆರಂಭವಾದ ಮೊದಲ ದಿನ ಏಪ್ರಿಲ್ 29 ರಂದು ಶನಿವಾರ 80 ವರ್ಷ ಮೇಲ್ಪಟ್ಟವರು ಹಾಗೂ 46 ಮಂದಿ ಅಂಗವಿಕಲರು ಒಳಗೊಂಡಂತೆ 3,727 ಮಂದಿ ಮತದಾನ ಮಾಡಿದ್ದರು ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ವಿಭಾಗವಾರು ಮತದಾನದ ಮಾಹಿತಿ ನೋಡುವುದಾದರೆ ಬೆಂಗಳೂರು ಕೇಂದ್ರದ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,363 ಮಂದಿ ನೋಂದಾಯಿತು, ಬೆಂಗಳೂರು ಉತ್ತರದಲ್ಲಿ 1,414, ಬೆಂಗಳೂರು ದಕ್ಷಿಣದಲ್ಲಿ 2030 ಮತ್ತು ಬೆಂಗಳೂರು ನಗರ ವ್ಯಾಪ್ತಿಯಲ್ಲಿ 1,248 ಮಂದಿ ಮತದಾನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications