ಬೆಂಗಳೂರಿನಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿತ; ಬಚಾವ್ ಆದ ನಿವಾಸಿಗಳು!
ಬೆಂಗಳೂರು, ಸೆ. 07: ರಾಜಧಾನಿಯಲ್ಲಿ ಕಟ್ಟಡ ಕುಸಿತ ಪ್ರಕರಣಗಳು ಮುಂದುವರಿದಿವೆ. ಕಸ್ತೂರಿನಗರದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿತ. ಬಾಲಬ್ರೂಹಿ ಅತಿಥಿ ಗ್ರಹ ಕೆಡವಿ ಕ್ಲಬ್ ನಿರ್ಮಿಸುವ ವಿಚಾರದಲ್ಲಿ ಸರ್ಕಾರಕ್ಕೆ ಹಿನ್ನೆಡೆ. ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚುವ ವಿಚಾರ, ಗುಣಮಟ್ಟದ ಕಾಮಗಾರಿಗೆ ಹೈಕೋರ್ಟ್ ತಾಕೀತು. ಬಿಜೆಪಿ ಮುಖಂಡನೊಬ್ಬನ ಅಮಲು ಪದಗಳ ವಿಡಿಯೋ ವೈರಲ್!
ಕಸ್ತೂರಿನಗರದಲ್ಲಿ ಕಟ್ಟಡ ಕುಸಿತ ತಪ್ಪಿದ ಮಹಾ ಪ್ರಮಾದ:
ರಾಜಧಾನಿಯಲ್ಲಿ ಸುರಿಯುತ್ತಿರುವ ಮಳೆಗೆ ಕಟ್ಟಡ ಕುಸಿತ ದುರಂತ ಮುಂದುವರೆದಿದೆ. ವಿಲ್ಸನ್ ಗಾರ್ಡನ್ ಸಮೀಪ ಕಟ್ಟಡವೊಂದು ಕುಸಿದು ಬಿದ್ದು ಮೆಟ್ರೊ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ 40 ಕಾರ್ಮಿಕರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. ಈ ಘಟನೆ ಮಾಸುವ ಮುನ್ನ ಕಸ್ತೂರಿನಗರದಲ್ಲಿ ಮೂರು ಅಂತಸ್ತಿನ ಕಟ್ಟಡವೊಂದು ಸಂಪೂರ್ಣ ಕುಸಿದು ಬಿದ್ದಿದೆ. ಅದೃಷ್ಟ ವಷಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬೆಂಗಳೂರಿನಲ್ಲಿ ಕಸ್ತೂರಿನಗರದಲ್ಲಿರುವ ಡಾಕ್ಟರ್ಸ್ ಲೇಔಟ್ ನಲ್ಲಿ ಈ ದುರಂತ ಸಂಭವಿಸಿದೆ. ಕಟ್ಟಡ ಬೆಳಗ್ಗೆ ವಾಲುತ್ತಿದ್ದಂತೆ ಅದರಲ್ಲಿದ್ದ ಜನರು ಆಚೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮೂರು ಅಂತಸ್ತಿನಲ್ಲಿದ್ದವರೆಲ್ಲರೂ ಆಚೆ ಬಂದಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಆದರೆ ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಜಖಂ ಆಗಿವೆ. ಕುಸಿತಗೊಂಡಿರುವ ಕಟ್ಟಡವನ್ನು ನೆಲಸಮಗೊಳಿಸಲು ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸಿದರು.
ಅಕ್ರಮವಾಗಿ ಕಟ್ಟಡ. ನೆಲ ಮಹಡಿ ಜತೆಗೆ ಎರಡು ಕಟ್ಟಡ ನಿರ್ಮಾಣ ಮಾಡಲಿಕ್ಕೆ ಅನುಮತಿ ಪಡೆಯಲಾಗಿದೆ. ಆದರೆ, ಅಕ್ರಮವಾಗಿ ಹೆಚ್ಚುವರಿಯಾಗಿ ಎರಡು ಅಂತಸ್ತು ನಿರ್ಮಿಸಿರುವ ಕಾರಣದಿಂದ ಕಟ್ಟಡ ಕುಸಿತಗೊಂಡಿದೆ. ನಿಯಮ ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಾಣ ಮಾಡಿರುವ ಸಂಬಂಧ ದೂರು ದಾಖಲಿಸಿಕೊಂಡು ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಿಬಿಎಂಪಿ ಆಯುಕ್ತ ಗೌರವ ಗುಪ್ತಾ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಪದೇ ಪದೇ ಕಟ್ಟಡ ಕುಸಿತ ಪ್ರಕರಣ ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿಅಕ್ರಮ ಕಟ್ಟಡಗಳ ವಿರುದ್ಧ ಬಿಬಿಎಂಪಿ ಕಾರ್ಯಾಚರಣೆ ನಡೆಸಲು ಚಿಂತನೆ ನಡೆಸಿದೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕರ್ತವ್ಯಲೋಪ: ಅಮಾನತು: ಚನ್ನಸಂದ್ರದ ಕಸ್ತೂರಿನಗರದಲ್ಲಿ ಕಟ್ಟಡ ಕುಸಿತ ಪ್ರಕರಣ ಪಾಲಿಕೆ ಇಂಜಿನಿಯರ್ ಶಂಕರಪ್ಪ ಅವರನ್ನು ಅಮಾನತು ಮಾಡಿ ಬಿಬಿಎಂಪಿ ಆಯುಕ್ತ ಗೌರವ ಗುಪ್ತಾ ಆದೇಶ ಮಾಡಿದ್ದಾರೆ. ನಕ್ಷೆ ಮಂಜೂರಾತಿಗಿಂತಲೂ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿರುವುದಕ್ಕೆ ತಲೆದಂಡ ಮಾಡಲಾಗಿದೆ. ಇನ್ನು ಕಟ್ಟಡ ಕುಸಿತದಿಂದ ನೆರೆ ಮನೆಗಳಿಗೆ ಹಾನಿಯಾಗಿದ್ದು, ಈ ಸಂಬಂಧ ರಾಮಮೂರ್ತಿನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆಯೇಷಾ ಬೇಗಂ, ಮೊಹಮದ್ ಅಸೀಫ್, ಮೊಹಮದ್ ಇಯಾಸುದ್ದೀನ್ ಎಂಬುವರ ವಿರುದ್ಧ ದೂರು ದಾಖಲಾಗಿದೆ. ಕಳಪೆ ಕಾಮಗಾರಿಯಿಂದ ಕಟ್ಟಡ ನಿರ್ಮಾಣ ಮಾಡಿ ನೆರೆಹೊರೆಯವರಿಗೆ ನಷ್ಟವುಂಟು ಮಾಡಿದ ಆರೋಪ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ
ಬಾಲಬ್ರೂಹಿ ಅಥಿತಿ ಗೃಹದಲ್ಲಿ ಕ್ಲಬ್ ನಿರ್ಮಾಣ:
ಬಾಲಬ್ರೂಹಿ ಅತಿಥಿ ಗೃಹ ಕೆಡವಿ ಕ್ಲಬ್ ನಿರ್ಮಾಣ ಮಾಡುವ ಸರ್ಕಾರದ ತೀರ್ಮಾನಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ ಹಾಕಿದೆ. ಸದ್ಯಕ್ಕೆ ಬಾಲಬ್ರೂಹಿ ಅತಿಥಿ ಗೃಹವನ್ನು ಯಥಾಸ್ಥಿತಿ ಕಾಪಾಡುವಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಬಾಲಬ್ರೂಹಿ ಪಾರಂಪರಿಕ ಕಟ್ಟಡ ನಿರ್ಮಾಣ ಸಂಬಂಧ ಯಾವುದೇ ಮರಗಳನ್ನು ಕಡಿಯಬಾರದು. ಆವರಣದಲ್ಲಿರುವ ಎಲ್ಲಾ ಮರಗಳನ್ನು ಸಮೀಕ್ಷೆ ಮಾಡಬೇಕು. ಮರಗಳ ಗಣತಿ ನಡೆಸಿ ವರದಿ ಸಲ್ಲಿಸಬೇಕು. ಕೋರ್ಟ್ ಅನುಮತಿ ಇಲ್ಲದೇ ಯಾವುದೇ ಮರ ಕಡಿಯಬಾರದು ಎಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಬಾಲಬ್ರೂಹಿ ಅತಿಥಿ ಗೃಹ ಕೆಡವಿ ಕ್ಲಬ್ ನಿರ್ಮಾಣ ಮಾಡುವ ಸರ್ಕಾರದ ತೀರ್ಮಾನ ಪ್ರಶ್ನಿಸಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದ್ದು, ಅರ್ಜಿಯ ಮುಂದಿನ ವಿಚಾರಣೆಯನ್ನು ನ. 19 ಕ್ಕೆ ಮುಂದೂಡಲಾಗಿದೆ.
ಗುಂಡಿ ಬೀಳದಂತೆ ಕಾಮಗಾರಿ ನಡೆಸಿ:
ಇನ್ನು ಬೆಂಗಳೂರಿನ ಸಾವಿನ ಗುಂಡಿಗಳನ್ನು ಮುಚ್ಚುವ ಸಂಬಂಧ ಬಿಬಿಎಂಪಿಗೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಬಿಬಿಎಂಪಿ ಗುಂಡಿ ಮುಚ್ಚಿದ ಎರಡೇ ತಿಂಗಳಿಗೆ ಮತ್ತೆ ಗುಂಡಿ ಬೀಳುತ್ತವೆ. ಪದೇ ಪದೇ ಗುಂಡಿಯಾಗದಂತೆ ಕಾಮಗಾರಿ ನಡೆಸಬೇಕು. ಕೇವಲ ಸಚಿವರ ಮನೆಗಳ ಬಳಿ ರಸ್ತೆಗಳು ಚೆನ್ನಾಗಿದ್ದರೆ ಸಾಲದು. ಬಡವರ ಮನೆಯ ರಸ್ತೆಗಳು ಸರಿಯಾಗಬೇಕು. ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಎಂದು ಹೈಕೋರ್ಟ್ ಬಿಬಿಎಂಪಿಗೆ ತಾಕೀತು ಮಾಡಿದೆ.

ಬಿಜೆಪಿ ಮುಖಂಡನ ಎಣ್ಣೆ ಪಾರ್ಟಿ ಗಮ್ಮತ್ತು
ಬಿಜೆಪಿ ಮುಖಂಡನ ಮಂಗಾಟ:
ಬಿಜೆಪಿಯ ಮುಖಂಡನೊಬ್ಬ ಇಬ್ಬರು ಹೆಣ್ಣು ಮಕ್ಕಳ ಜತೆ ಎಣ್ಣೆ ಪಾರ್ಟಿ ಮಾಡಿ ಅಶ್ಲೀಲವಾಗಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಇಬ್ಬರು ಹೆಣ್ಣು ಮಕ್ಕಳ ಜತೆ ಎಣ್ಣೆ ಪಾರ್ಟಿ ಮಾಡಿರುವ ಬಿಜೆಪಿ ಮುಖಂಡ ತಂಗಿದ್ದ ಡಾಬಾದಲ್ಲಿ ಹೆಣ್ಣು ಮಕ್ಕಳ ಜತೆ ಅಶ್ಲೀಲವಾಗಿ ಮಾತನಾಡಿದ್ದಾನೆ. ಎಣ್ಣೆ ಕುಡಿಯೋದಕ್ಕೂ ಸ್ಪರ್ಧೆ ಏರ್ಪಡಿಸಿ ನ್ಯಾಯಧೀಶರ ಬಗ್ಗೆ ವಾಚಾಮಗೋಚರ ಮಾತನಾಡಿರುವುದು ವಿಡಿಯೋದಲ್ಲಿದೆ. ನೆಲಮಂಗಲದ ಡಾಬಾ ವೊಂದರಲ್ಲಿ ಈ ಘಟನೆ ನಡೆದಿದ್ದು, ದೊಡ್ಡಬಳ್ಳಾಪುರ ತಾಲೂಕಿನ ಬಿಜೆಪಿ ಅಧ್ಯಕ್ಷ ನಾಗರಾಜ್ ಈ ರೀತಿಯ ಅಸಭ್ಯ ಮಾತಿನಿಂದ ಸುದ್ದಿಯಾದವರು ಎಂದು ಹೇಳಲಾಗಿದೆ. ಸದ್ಯಕ್ಕೆ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.












Click it and Unblock the Notifications