ಕ್ರೈಂ ರೌಂಡಪ್: ಮುಸ್ಲಿಂ ಯುವಕನಿಗೆ ಮೂತ್ರ ಕುಡಿಸಿದ ಪಿಎಸ್ಐ ಹರೀಶ್ ವಿರುದ್ಧ ವರದಿ ಸಲ್ಲಿಕೆ
ಬೆಂಗಳೂರು, ಡಿ. 06: ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ 12 ನೇ ಮಹಡಿಯಿಂದ ಬಿದ್ದು ಸಾವು. ಶಾಸಕ ಎಸ್.ಆರ್. ವಿಶ್ವನಾಥ್ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಕುಳ್ಳ ದೇವರಾಜ್ ವಿಚಾರಣೆ ಸಾಧ್ಯತೆ. ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣದಲ್ಲಿ ಪಿಎಸ್ಐ ವಿರುದ್ಧ ವಿಚಾರಣಾ ವರದಿ ಡಿಸಿಪಿಗೆ ಸಲ್ಲಿಕೆ. ಬೆಂಗಳೂರು ಅಪರಾಧ ಸುದ್ದಿಯ ವಿವರ.
ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವು: 12ನೇ ಮಹಡಿಯಿಂದ ಕೆಳಗೆ ಬಿದ್ದು 9 ನೇ ತರಗತಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹದಿಮೂರು ವರ್ಷದ ವೈಷ್ಣನಿ ಮೃತಪಟ್ಟ ದುರ್ದೈವಿ. ಖಾಸಗಿ ಶಾಲೆಯಲ್ಲಿ 9 ನೇ ತರಗತಿ ಓದುತ್ತಿದ್ದಳು. ಉತ್ತರಪ್ರದೇಶ ಮೂಲದ ವೀರೇಂದ್ರಕುಮಾರ್ ಹಾಗೂ ಸುಮನ್ ದಂಪತಿಯ ಪುತ್ರಿ. ವೇಣುಗೋಪಾಲನಗರದ ನಿತೀಶ್ ಪಾರ್ಕ್ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದಳು.
ಹನ್ನೆರಡನೇ ಮಹಡಿಯ ಬಾಲ್ಕನಿಯಿಂದ ಕೆಳಗೆ ಬಿದ್ದಿದ್ದಾಳೆ. ಆತ್ಮಹತ್ಯೆ ಮಾಡಿಕೊಂಡಿದ್ದಾಳೋ ಅಥವಾ ಆಯತಪ್ಪಿ ಕುಸಿದು ಬಿದ್ದಳೋ ಗೊತ್ತಿಲ್ಲ. ಕೆಳಗೆ ಬಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದು, ಮೃತಪಟ್ಟಿರುವುದನ್ನು ವೈದ್ಯರು ಖಚಿತ ಪಡಿಸಿದ್ದಾರೆ. ರಾತ್ರಿ ಕುಟುಂಬದ ಜತೆ ಊಟ ಮಾಡಿದ್ದಳು. ಆ ಬಳಿಕ ಬಾಲ್ಕನಿಗೆ ಹೋಗಿದ್ದ ವೈಷ್ಣವಿ ಬಂದು ನೋಡುವಷ್ಟರಲ್ಲಿ ಕಾಣಲಿಲ್ಲ. ಕೆಳಗೆ ನೋಡಿದಾಗ ರಕ್ತಸ್ರಾವದಲ್ಲಿ ಬಿದ್ದಿರುವುದು ಗೊತ್ತಾಗಿದೆ.

ಕುಳ್ಳ ದೇವರಾಜ್ ವಿಚಾರಣೆ: ಶಾಸಕ ಎಸ್. ಆರ್. ವಿಶ್ವನಾಥ್ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದ ಆರೋಪಿ ಕುಳ್ಳ ದೇವರಾಜ್ ನನ್ನು ವಿಚಾರಣೆಗೆ ಬರುವಂತೆ ರಾಜಾನುಕುಂಟೆ ಪೊಲೀಸರು ಮತ್ತೆ ನೋಟಿಸ್ ನೀಡಿದ್ದಾರೆ. ವಿಶ್ವನಾಥ್ ಪ್ರಕರಣದಲ್ಲಿ ಜಾಮೀನು ಪಡೆದಿರುವ ಪ್ರಮುಖ ಆರೋಪಿ ಗೋಪಾಲಕೃಷ್ಣನನ್ನು ಶನಿವಾರ ಪೊಲೀಸರು ವಿಚಾರಣೆ ನಡೆಸಿದ್ದರು. ಕುಳ್ಳ ದೇವರಾಜ್ ಸಂಚು ರೂಪಿಸಿ ನನ್ನನ್ನು ಟ್ರ್ಯಾಪ್ ಮಾಡಲಾಗಿದೆ. ನಾನು ಯಾವುದೇ ರೀತಿಯ ಸಂಚು ರೂಪಿಸಿಲ್ಲ. ನನ್ನ ರಾಜಕೀಯ ಭವಿಷ್ಯ ಮುಗಿಸಲು ಈ ಷಡ್ಯಂತ್ರ ನಡೆಸಿದ್ದಾರೆ ಎಂದು ಹೇಳಿಕೆ ದಾಖಲಿಸಿದ್ದರು. ಗೋಪಾಲಕೃಷ್ಣ ಹೇಳಿಕೆ ಬಳಿಕ ಕುಳ್ಳ ದೇವರಾಜ್‌ನನ್ನು ವಿಚಾರಣೆ ನಡೆಸಲು ರಾಜಾನುಕುಂಟೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಈ ಪ್ರಕರಣದ ಬೆಳವಣಿಗೆ ನೋಡಿದರೆ ಕುಳ್ಳ ದೇವರಾಜ್‌ಗೆ ಮುಳುವಾಗಿ ಪರಿಣಮಿಸುವ ಸಾಧ್ಯತೆಯಿದೆ.
ಯುವಕನಿಗೆ ಮೂತ್ರ ಕುಡಿಸಿದ ಪಿಎಸ್ಐ ವಿರುದ್ಧ ವರದಿ ಸಲ್ಲಿಕೆ : ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡ ಪ್ರಕರಣ ಸಂಬಂಧ ವಶಕ್ಕೆ ಪಡೆದು ಮುಸ್ಲಿಂ ಯುವಕನಿಗೆ ಮೂತ್ರ ಕುಡಿಸಿ ಗಡ್ಡ ಬೋಳಿಸಿದ ಅರೋಪಕ್ಕೆ ಗುರಿಯಾಗಿರುವ ಬ್ಯಾಟರಾಯನಪುರ ಪೊಲೀಸ್ ಠಾಣೆ ಪಿಎಸ್ಐ ಹರೀಶ್ ವಿರುದ್ಧ ಡಿಸಿಪಿಗೆ ವರದಿ ಸಲ್ಲಿಸಲಾಗಿದೆ. ಎಸಿಪಿ ಕೋದಂಡರಾಮ್ ಅವರು ವಿಚಾರಣೆ ನಡೆಸಿ ವರದಿ ನೀಡಿದ್ದು, ಪ್ರಾಥಮಿಕ ವಿಚಾರಣೆಯಲ್ಲಿ ಮೂತ್ರ ಕುಡಿಸಿ ಗಡ್ಡ ಬೋಳಿಸಿರುವುದು ಸಾಬೀತಾಗಿದೆ. ಅಲ್ಲದೇ ಹಲ್ಲೆ ಮಾಡಿರುವುದಕ್ಕೂ ಪುರಾವೆಗಳು ಸಿಕ್ಕಿದ್ದು, ಎಸಿಪಿ ವರದಿ ಆಧರಿಸಿ ಪಿಎಸ್ಐ ಹರೀಶ್ ಅವರನ್ನು ಸೇವೆಯಿಂದ ಅಮಾನತು ಮಾಡಿ ಶಿಸ್ತು ಕ್ರಮಕ್ಕೆ ಒಳಪಡಿಸುವ ಸಾಧ್ಯತೆಯಿದೆ.

Recommended Video
ನೆರೆ ಮನೆಯವರ ಜತೆ ಗಲಾಟೆ ಮಾಡಿದ ಆರೋಪ ಸಂಬಂಧ ತೌಸಿಫ್ ಎಂಬ ಯುವಕನ್ನು ಠಾಣೆಗೆ ಕರೆಸಿ ಪಿಎಸ್ಐ ಹರೀಶ್ ಮೂತ್ರ ಕುಡಿಸಿದ್ದರು. ನೀರು ಕೇಳಿದಾಗ ಮೂತ್ರ ಕುಡಿಸಿದ್ದಲ್ಲದೇ ಗಡ್ಡ ಬೋಳಿಸಿ ಅಮಾನವೀಯತೆಯಿಂದ ನಡೆದುಕೊಂಡಿದ್ದರು. ಈ ಪ್ರಕರಣ ದೊಡ್ಡ ವಿವಾದ ಸೃಷ್ಟಿಸಿತ್ತು. ತೌಸಿಫ್ ನೀಡಿದ ದೂರಿನ ಆಧಾರದ ಮೇಲೆ ರಾಜ್ಯ ಮಾನವ ಹಕ್ಕು ಆಯೋಗ ಡಿಸಿಪಿ ಸಂಜೀವ ಪಾಟೀಲ್ ಅವರಿಗೆ ಕ್ರಮಕ್ಕೆ ಶಿಫಾರಸು ಮಾಡಿತ್ತು.












Click it and Unblock the Notifications