ದಿವ್ಯಾಂಗರ ಪ್ರಯಾಣ ಸುಲಭಗೊಳಿಸಿದ ಬೆಂಗಳೂರು ದಂಪತಿ: ಕಾರು ಹತ್ತಲು ನೆರವಾಗುವ ಸ್ವಿವೆಲ್ ಸೀಟ್ ಹಿಂದಿದೆ ರೋಚಕ ಕಥೆ
ಬೆಂಗಳೂರು: ವಿಕಲಚೇತನರು ಹಾಗೂ ವಯೋವೃದ್ಧರಿಗೆ ವಾಹನಗಳಲ್ಲಿ ಪ್ರಯಾಣಿಸುವುದು ಒಂದು ದೊಡ್ಡ ಸವಾಲು. ಕಾರು ಬಸ್‌ನಂತಹ ವಾಹನಗಳನ್ನಾ ಹತ್ತುವಾಗ ಮತ್ತು ಇಳಿಯುವಾಗ ಅವರು ಹಾಗೂ ಅವರ ಆರೈಕೆದಾರರು ಪಡುವ ಕಷ್ಟ ಅಷ್ಟಿಷ್ಟಲ್ಲ. ಈ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡುವ ನಿಟ್ಟಿನಲ್ಲಿ ಬೆಂಗಳೂರಿನ ಎಂಜಿನಿಯರ್ ದಂಪತಿಯಾದ ನೈನಾ ಪಡಕಿ ಮತ್ತು ಆನಂದ್ ಕುತ್ರೆ ಅವರು ಸ್ವಿವೆಲ್ ಕಾರ್ ಸೀಟ್ ಸೇರಿದಂತೆ ಹಲವು ವಿಶಿಷ್ಟ ಉಪಕರಣಗಳನ್ನು ಕಂಡುಹಿಡಿದಿದ್ದಾರೆ.
ಇವರ ಈ ಆವಿಷ್ಕಾರದಿಂದಾಗಿ ಈಗಾಗಲೇ 1000ಕ್ಕೂ ಹೆಚ್ಚು ದಿವ್ಯಾಂಗರಿಗೆ ನೆಮ್ಮದಿಯಿಂದ ಪ್ರಯಾಣ ಬೆಳೆಸುವಂತಾಗಿದೆ.

ಟ್ರೂ ಅಸಿಸ್ಟಿವ್ ಟೆಕ್ನಾಲಜಿ ಮೂಲಕ ಹೊಸ ಕ್ರಾಂತಿ
ಸಾಫ್ಟ್‌ವೇರ್ ಕ್ಷೇತ್ರದಲ್ಲಿ ನೈನಾ ಹಾಗೂ ಆಟೋಮೊಬೈಲ್ ವಲಯದಲ್ಲಿ ಆನಂದ್ ಎರಡು ದಶಕಗಳಿಗೂ ಹೆಚ್ಚು ಕಾಲ ಅಮೆರಿಕದಲ್ಲಿ ಕೆಲಸ ಮಾಡಿದ್ದರು. ಅಮೆರಿಕದಲ್ಲಿ ದಿವ್ಯಾಂಗರು ಯಾವುದೇ ಅಡೆತಡೆಯಿಲ್ಲದೆ ಸ್ವತಂತ್ರವಾಗಿ ಜೀವನ ನಡೆಸುವುದನ್ನ ಕಂಡಿದ್ದ ಈ ದಂಪತಿ, ಭಾರತದಲ್ಲೂ ಅಂತಹದ್ದೇ ವ್ಯವಸ್ಥೆ ತರಲು ಬಯಸಿದ್ದರು.
2013ರಲ್ಲಿ ಟೊಯೋಟಾ ಕಂಪನಿಯ ಕರೋಲಾ ಆಲ್ಟಿಸ್ ಕಾರಿಗೆ ಸ್ವಿವೆಲ್ ಸೀಟ್ ವಿನ್ಯಾಸಗೊಳಿಸುವ ಪ್ರಾಜೆಕ್ಟ್ ಮೂಲಕ ಇವರ ಪಯಣ ಆರಂಭವಾಯಿತು ನೋಡಿ. ಬಳಿಕ ಭಾರತೀಯ ಮಾರುಕಟ್ಟೆಗೆ ಮತ್ತು ಇಲ್ಲಿನ ಕಾರುಗಳಿಗೆ ಸರಿಹೊಂದುವಂತೆ ವಿನ್ಯಾಸಗಳನ್ನ ರೂಪಿಸಿ, 2022ರಲ್ಲಿ ಅಧಿಕೃತವಾಗಿ ಟ್ರೂ ಅಸಿಸ್ಟಿವ್ ಟೆಕ್ನಾಲಜಿ' (TRUE Assistive Technology) ಎಂಬ ಸಂಸ್ಥೆಯನ್ನ ಹುಟ್ಟುಹಾಕಿದರು. ಯಾವುದೇ ಫಂಡಿಂಗ್ ಇಲ್ಲದೆ, ತಮ್ಮದೇ ಉಳಿತಾಯದ ಹಣದಲ್ಲಿ ಈ ಸಂಸ್ಥೆಯನ್ನ ಕಟ್ಟಿ ಬೆಳೆಸಿದ್ದಾರೆ.
ಕಾರಿನ ವಿನ್ಯಾಸ ಬದಲಿಸದೆ ಅಳವಡಿಕೆ
ಈ ದಂಪತಿಯ ಪ್ರಮುಖ ಆವಿಷ್ಕಾರವೇ ಟರ್ನ್‌ಪ್ಲಸ್ (TurnPlus). ಇದೊಂದು ಪೇಟೆಂಟ್ ಪಡೆದ 'ಟರ್ನ್‌ಪ್ಲಸ್ ಸ್ವಿವೆಲ್ ಸೀಟ್ ಮೆಕ್ಯಾನಿಸಂ' ಆಗಿದ್ದು, ಕಾರಿನ ಸೀಟನ್ನ ಬರೋಬ್ಬರಿ 90 ಡಿಗ್ರಿಯಷ್ಟು ಹೊರಗೆ ತಿರುಗುವಂತೆ ಮಾಡುತ್ತದೆ. ಇದರಿಂದ ದಿವ್ಯಾಂಗರು ಹೊರಗಡೆಯಿಂದಲೇ ಕಾರಿನೊಳಗೆ ಹತ್ತಿ ಕೂರುವುದು ಅತ್ಯಂತ ಸುಲಭವಾಗುತ್ತದೆ. ವಿಶೇಷವೆಂದರೆ, ಇದಕ್ಕಾಗಿ ಕಾರಿನ ಮೂಲ ವಿನ್ಯಾಸವನ್ನ ಬದಲಾಯಿಸುವ ಅಗತ್ಯವಿಲ್ಲ. ಕಾರಿನ ಒರಿಜಿನಲ್ ಸೀಟಿನ ಕೆಳಗೆ ಈ ಯಂತ್ರಾಂಶವನ್ನ ಅಳವಡಿಸಲಾಗುತ್ತದೆ.
ಹೀಗಾಗಿ ಕಾರಿನ ವಾರಂಟಿ, ಇನ್ಶೂರೆನ್ಸ್ ಅಥವಾ ಮರುಮಾರಾಟ ಮೌಲ್ಯಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಸ್ನಾಯು ಕ್ಷೀಣತೆಯಿಂದ ಬಳಲುತ್ತಿರುವ 16 ವರ್ಷದ ದೀಕ್ಷಾ ಎಂಬ ಬಾಲಕಿಯ ತಾಯಿ ರಶ್ಮಿ ಸಂಪತ್, ಈ ಟರ್ನ್‌ಪ್ಲಸ್ ಸೀಟ್ ಅಳವಡಿಸಿದ ಬಳಿಕ ತಮ್ಮ ಮಗಳೊಂದಿಗೆ ಬೆಂಗಳೂರಿನಿಂದ ಕನ್ಯಾಕುಮಾರಿಯವರೆಗೆ ಆರಾಮದಾಯಕವಾಗಿ 1000 ಕಿ.ಮೀ ಪ್ರಯಾಣಿಸಿದ್ದಾರೆ.
ಪೋರ್ಟಬಲ್ ವೀಲ್‌ಚೇರ್ ರ್‍ಯಾಂಪ್ಸ್ ಹಾಗೂ ಇತರ ಸಾಧನಗಳು ಪರಿಚಯ
ಕಾರು ಹತ್ತುವುದು ಮಾತ್ರವಲ್ಲದೆ, ವೀಲ್‌ಚೇರ್ ಮೂಲಕ ಮನೆ, ಆಸ್ಪತ್ರೆ ಅಥವಾ ಸಾರ್ವಜನಿಕ ಸ್ಥಳಗಳನ್ನು ಪ್ರವೇಶಿಸಲು ಅನುಕೂಲವಾಗುವಂತೆ 'ರ್‍ಯಾಮ್‌ಪ್ಲಸ್' ಎಂಬ ಹಗುರವಾದ 'ಪೋರ್ಟಬಲ್ ವೀಲ್‌ಚೇರ್ ರ್‍ಯಾಂಪ್ಸ್' ಅನ್ನು ಕೂಡ ಇವರು ಪರಿಚಯಿಸಿದ್ದಾರೆ. ಇದನ್ನು ಮಡಚಿ ಕಾರಿನಲ್ಲೇ ಸುಲಭವಾಗಿ ಕೊಂಡೊಯ್ಯಬಹುದು.
ಇದರ ಜೊತೆಗೆ ಹಾಸಿಗೆಯಿಂದ ವೀಲ್‌ಚೇರ್‌ಗೆ ರೋಗಿಗಳನ್ನು ವರ್ಗಾಯಿಸಲು 'ಟ್ರಾನ್ಸ್‌ಪ್ಲಸ್' ಮತ್ತು 'ಹಾಯ್ಸ್ಟ್‌ಪ್ಲಸ್' ಎಂಬ ಸಾಧನಗಳನ್ನೂ ಅಭಿವೃದ್ಧಿಪಡಿಸಿದ್ದಾರೆ. ಈ ಎಲ್ಲಾ ಉತ್ಪನ್ನಗಳು ಮೈನಸ್ 20 ಡಿಗ್ರಿಯಿಂದ ಪ್ಲಸ್ 60 ಡಿಗ್ರಿ ತಾಪಮಾನದವರೆಗೆ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದ್ದು, ಕಠಿಣ ಕ್ರ್ಯಾಶ್ ಟೆಸ್ಟ್‌ಗಳಲ್ಲೂ ಪಾಸ್ ಆಗಿವೆ.
2011ರ ಜನಗಣತಿ ಪ್ರಕಾರ ಭಾರತದಲ್ಲಿ 2.68 ಕೋಟಿಗೂ ಹೆಚ್ಚು ದಿವ್ಯಾಂಗರಿದ್ದಾರೆ ಹಾಗೂ ವಯೋವೃದ್ಧರ ಸಂಖ್ಯೆಯೂ ವೇಗವಾಗಿ ಬೆಳೆಯುತ್ತಿದೆ. ಇವರಿಗಾಗಿ ಸುಲಭ ಸಂಚಾರ ವ್ಯವಸ್ಥೆ ಕಲ್ಪಿಸುವುದು ತುಂಬ ಮುಖ್ಯ. ಅಮೃತಸರದ ಜತಿನ್ ಗಂಡೋತ್ರಾ ಅವರ ಸಂಬಂಧಿಯೊಬ್ಬರು ಲಕ್ವ ಹೊಡೆದು ಹಾಸಿಗೆ ಹಿಡಿದಾಗ, ಇದೇ ತಂತ್ರಜ್ಞಾನವನ್ನ ಬಳಸಿ ಅವರನ್ನ ಸುಲಭವಾಗಿ ಕಾರಿನಲ್ಲಿ ಕರೆದೊಯ್ಯಲು ಸಾಧ್ಯವಾಯಿತು.
ಲಕ್ವ, ಪಾರ್ಕಿನ್ಸನ್ ಕಾಯಿಲೆ, ಪೋಲಿಯೋ ಮತ್ತು ಬೆನ್ನುಹುರಿ ಗಾಯದಿಂದ ಬಳಲುತ್ತಿರುವವರಿಗೆ ಈ ತಂತ್ರಜ್ಞಾನ ವರದಾನವಾಗಿದೆ. ದಂಪತಿಯ ಈ ಆವಿಷ್ಕಾರದಿಂದಾಗಿ ಅನೇಕ ವಿಕಲಚೇತನರು ಇದೀಗ ಯಾವುದೇ ಭಯವಿಲ್ಲದೆ, ಯಾರ ಹಂಗೂ ಇಲ್ಲದೆ ಸ್ವತಂತ್ರವಾಗಿ ಓಡಾಡುತ್ತಿದ್ದಾರೆ ಎಂದು ದಿ ಬೆಟರ್ ಇಂಡಿಯಾ ವರದಿ ಮಾಡಿದೆ.


Click it and Unblock the Notifications
