Bengaluru Rain: ನಗರಕ್ಕೆ ಇಂದು ಭಾನುವಾರ ಜೋರು ಮಳೆ: ಸೆ. 8ವರೆಗಿನ ಹವಾಮಾನ ವರದಿ
ಬೆಂಗಳೂರು, ಸೆಪ್ಟಂಬರ್ 03: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗುರುವಾರ ರಾತ್ರಿ ಸುರಿದಂತೆ ಭಾರೀ ಮಳೆಯು ಇಂದು ಭಾನುವಾರ ಸುರಿಯಲಿದೆ. ಈಗಾಗಲೇ ಬೆಳಗ್ಗೆಯಿಂದಲೇ ಕೆಲವೆಡೆ ಮಬ್ಬು ವಾತಾವರಣ ಕವಿದಿದೆ ಇದು ಧಾರಾಕಾರ ಮಳೆ ಮುನ್ಸೂಚನೆಯಾಗಿದ್ದು, ಸೆಪ್ಟಂಬರ್ 8ರವರೆಗೆ ಮಳೆ ಮುಂದುವರಿಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ (KSNDMC) ಮಾಹಿತಿ ನೀಡಿದೆ.
ನಗರದಲ್ಲಿ ಮೂರು ದಿನಗಳ ಹಿಂದೆ ರಾತ್ರಿ ಭರ್ಜರಿ ಮಳೆ ಸುರಿದಿತ್ತು. ತಡರಾತ್ರಿವರೆಗೆ ಮುಂದುವರಿದ ಮಳೆ ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಬರೋಬ್ಬರಿ 136 ಮಿಲಿ ಮೀಟರ್ ದಾಖಲಾಗಿತ್ತು. ಅಂತದ್ದೇ ಮಳೆ ಇಂದು ಭಾನುವಾರ ಸಂಜೆ ನಂತರ ಇಲ್ಲವೇ ರಾತ್ರಿ ಸುರಿಯುವ ಸಾಧ್ಯತೆಗಳು ಇವೆ.

ವಾರಗಳ ಕಾಲ ಬೆಂಗಳೂರಿನಲ್ಲಿ ಆಗಸ್ಟ್ ತಿಂಗಳ ತಾಪಮಾನ ಗರಿಷ್ಠ ಮಿತಿ ಮೀರಿತ್ತು. ಇದರಿಂದ ಮಳೆಗಾಲದಲ್ಲಿಯೂ ಶುಷ್ಕ ವಾತಾವರಣ ಸೃಷ್ಟಿಯಾಗಿ ಬಿಸಿಲ ಝಳ ಹೆಚ್ಚಾಗಿತ್ತು. ಕಳೆದ ನಾಲ್ಕೈದು ದಿನಗಳಿಂದ ಬೆಂಗಳೂರಿನಲ್ಲಿ ತಕ್ಕ ಮಟ್ಟಿಗೆ ಒಣ ಹವೆ ಕಡಿಮೆ ಆಗಿದೆ. ಆಗಾಗ ತಂಪು ವಾತಾವರಣ, ತೇವಾಂಶ ಭರಿತ ಗಾಳಿ ಬೀಸುತ್ತಿದೆ.
ಭಾನುವಾರ ನಗರದ ವಿವಿಧೆಡೆ ಹಗುರದಿಂದ ಸಾಧಾರಣ ಮಳೆ ಆಗಲಿದೆ. ಹಲವೆಡೆ ಧಾರಾಕಾರವಾಗಿ ಮಳೆ ಸುರಿಯುವ ಮುನ್ಸೂಚನೆ ಇದೆ. ಈ ಮಳೆ ಸೆಪ್ಟಂಬರ್ 8ರವರೆಗೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನಾ ವರದಿ ತಿಳಿಸಿದೆ.
ಮುಂಗಾರು ಮಳೆ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಸಕ್ರಿಯವಾಗಿದೆ. ಎಲ್ಲ ಜಿಲ್ಲೆಗಳಲ್ಲಿ ಉತ್ತಮ ಮಳೆ ಆಗುತ್ತಿದೆ. ಹೀಗಿದ್ದರೂ ಸಹಿತ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಇನ್ನೂವರೆಗೆ ನಿರೀಕ್ಷೆಯಷ್ಟು ಮಳೆ ಆಗಿಲ್ಲ. ಹೀಗಾಗಿ ರೈತರು ಬೆಳೆದ ಬೆಳೆಗಳು ಒಣಗುತ್ತಿವೆ. ಇದರಿಂದ ರೈತರ ಕಂಗಾಲಾಗಿದ್ದು, ಸರ್ಕಾರ ನೀಡುವ ಪರಿಹಾರದತ್ತ ಮುಖ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಸೆಪ್ಟಂಬರ್ 8ರವರೆಗಿನ ಮಳೆ-ತಾಪಮಾನ ಹೇಗಿರಲಿದೆ?
ಇಂದು ಧಾರಾಕಾರವಾಗಿ ಮಳೆ ಬಂದರೆ, ಸೋಮವಾರದಿಂದ ಮೂರು ದಿನ ಮೋಡ ಕವಿದ ವಾತಾವರಣ ಕಡಿಮೆ ಕಂಡು ಬರಲಿದೆ. ಕೆಲವೆಡೆ ಹಗುರದಿಂದ ಸಾಧಾರಣವಾಗಿ ಮಳೆ ಆಗಲಿದೆ. ನಂತರದ ಎರಡು ದಿನ ತುಂತುರು ಮಳೆ ಲಕ್ಷಣಗಳು ಇವೆ ಎನ್ನಲಾಗಿದೆ.
ಇನ್ನೂ ತಾಪಮಾನವು ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆ ಇದೆ. ಅದೇ ರೀತಿ ಕರ್ನಾಟಕದಲ್ಲಿ ಇಂದು ಕರಾವಳಿ ಮೂರು ಜಿಲ್ಲೆಗಳು, ಮಳೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಹಾಗೂ ಚಾಮರಾಜನಗರ, ಹಾಸನ, ಸಕಲೇಶಪುರ ಸೇರಿದಂತೆ ವಿವಿಧೆಡೆ ಮಳೆ ಆಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.












Click it and Unblock the Notifications