Bengaluru Rains : ಬೆಂಗಳೂರು ಮಳೆ: ಕಡಿಮೆ ಮಳೆಗೆ ನಗರದ ರಸ್ತೆಗಳು ಜಲಾವೃತ
ಬೆಂಗಳೂರು, ಅಕ್ಟೋಬರ್ 14: ಬೆಂಗಳೂರಿನಲ್ಲಿ ಎರಡು ಮೂರು ದಿನ ಗುಡುಗು, ಮಿಂಚು ಸಹಿತ ಸಾಧಾರಣದಿಂದ ಭಾರೀ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿಗಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ. ಕಡಿಮೆ ಮಳೆಗೂ ನಗರದ ಅನೇಕ ಕಡೆಗಳಲ್ಲಿ ಮತ್ತೆ ವಾಟರ್‌ಲಾಗಿಂಗ್ ಕಂಡು ಬಂದಿದ್ದು, ರಸ್ತೆಗಳು ಜಲಾವೃತಗೊಂಡಿವೆ. ಈ ಬಗ್ಗೆ ನೆಟ್ಟಿಗರು ಟ್ವಿಟ್ಟರ್‌ನಲ್ಲಿ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಕೆಲವೆಡೆ ಆಗಾಗ ಧಾರಾಕಾರ ಮಳೆಯಾಗುತ್ತಿದೆ. ಮುನ್ಸೂಚನೆ ಪ್ರಕಾರ ಮುಂದಿನ ಒಂದು ವಾರದವರೆಗೂ ಸಾಮಾನ್ಯವಾಗಿ ಮಳೆ ಮುಂದುವರಿಯಲಿದೆ. ಬಿಬಿಎಂಪಿ ವ್ಯಾಪ್ತಿಯ ಪ್ರದೇಶಗಳಲ್ಲೂ ವ್ಯಾಪಕ ಮಳೆ ಸಾಧ್ಯತೆ ಇದೆ. ಅದರಲ್ಲೂ ಮಹದೇವಪುರ ಮತ್ತು ಆರ್.ಆರ್.ನಗರ ವಲಯಗಳಲ್ಲಿ ಅಧಿಕ ಮಳೆ ಆಗಬಹುದು ಎಂದು ನಿಗಾ ಕೇಂದ್ರ ಅಂದಾಜಿಸಿದೆ.
ಈ ಮಧ್ಯೆ ಗುರುವಾರ ಸುರಿದ ಮಳೆಗೆ ನಗರದಲ್ಲಿ ಅನೇಕ ರಸ್ತೆಗಳಲ್ಲಿ ನೀರು ತುಂಬಿಕೊಂಡಿದೆ. ಒಳಚರಂಡಿ ಮೂಲಕ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡುವಲ್ಲಿ ಸ್ಥಳೀಯ ಸಂಸ್ಥೆಗಳು ವಿಫಲವಾಗಿವೆ. ಮತ್ತೆ ಬೆಂಗಳೂರು ಮಳೆ ನಿವಾಸಿಗಳಿಗೆ ಕಠೋರ ಪರಿಸ್ಥಿತಿ ಒಡ್ಡಲಿದೆ ಎಂದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ಭಾರಿ ಮಳೆಗೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಈಗೀಗ ಒಂದು ಗಂಟೆ, ಒಂದು ರಾತ್ರಿಯ ಮಳೆಗೂ ರಸ್ತೆಗಳಲ್ಲಿ ನೀರು ಉಕ್ಕಿ ಹರಿಯುತ್ತಿರುವುದು ಶೋಚನೀಯ. ಉತ್ತರ ಬೆಂಗಳೂರಿನಲ್ಲಿ ಹೆಚ್ಚು ಮಳೆ ಆಗುತ್ತಿದೆ. ಈ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ನೀರು ಹರಿಯುವಿಕೆಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದರು. ಹೀಗಿದ್ದರು ಮಳೆ ಬಂದಾಗ ಈಶ್ವರ ಲೇಔಟ್, ಇಂದಿರಾನಗರ ಹಾಗೂ ಇನ್ನಿತರ ಕಡೆಗಳಲ್ಲಿ ಸಮಸ್ಯೆ ಉಂಟಾಗುತ್ತಿದೆ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.
ಸೆಪ್ಟಂಬರ್‌ನಲ್ಲಿ ಜೋರು ಮಳೆ ಬಂದು ಪ್ರವಾಹ ಉಂಟಾದಾಗ ಸುಮಾರು ಮನೆಗಳು, ರಸ್ತೆಗಳು ಜಲಾವೃತಗೊಂಡಿದ್ದವು. ದಿನಗಳುಗಟ್ಟಲೇ ನೀರು ರಸ್ತೆ ಮೇಲೆ ನಿಂತಿತ್ತು. ಮುಖ್ಯಮಂತ್ರಿಗಳ ಸೂಚನೆ ಬೆನ್ನಲ್ಲೆ ರಾಜಕಾಲುವೆ ಒತ್ತುವರಿ ತೆರವುಗೊಳಿಸುತ್ತಿರುವ ಬಿಬಿಎಂಪಿ ಅಧಿಕಾರಿಗಳು ವಾಟರ್‌ಲಾಗಿಂಗ್ ಕಡೆಗೂ ಗಮನ ಹರಿಸಬೇಕು. ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಸಮಸ್ಯೆ ಉಂಟಾಗದಂತೆ ನೋಡಿಕೊಂಡು ಜನರ ಆತಂಕ ದೂರಗೊಳಿಸಬೇಕು ಎಂದು ನಿವಾಸಿಗಳ ಆಗ್ರಹವಾಗಿದೆ.












Click it and Unblock the Notifications