ಬೆಂಗಳೂರು: "ಎಐ ಬಳಸಿ ದಂಡ ಹಾಕುವುದಲ್ಲ: ರಸ್ತೆಗುಂಡಿ ಮುಚ್ಚದ ಗುತ್ತಿಗೆದಾರ, ಭ್ರಷ್ಟ ಅಧಿಕಾರಿಗಳ ಮಾಹಿತಿ ಕೊಡಿ"!
ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ಸಮಸ್ಯೆಯು ಹೊಸ ಸ್ವರೂಪವನ್ನು ಪಡೆದುಕೊಂಡಿದೆ. ಬೆಂಗಳೂರಿ ನಾದ್ಯಂತ ರಸ್ತೆಗುಂಡಿಗಳ ಸಂಖ್ಯೆ ಹೆಚ್ಚಾಗಿದೆ ಜನ ವಾಹನ ಚಲಾಯಿಸಲು ಹಾಗೂ ನಡೆದಾಡಲು ಸಮಸ್ಯೆ ಆಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಈ ರೀತಿ ಇರುವಾಗಲೇ ವಾಹನ ಸವಾರರು ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ಪ್ರಕರಣಗಳನ್ನು ಎಐ ಬೋರ್ಡ್ ಮೂಲಕ ತೋರಿಸುವ ವಿನೂತನ ಪ್ರಯೋಗಕ್ಕೆ ಕನ್ನಡಿಗರು ವಿರೋಧ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಎಐ ಬಳಕೆ ಮಾಡಿಕೊಂಡು ವಾಹನ ಸಂಚಾರ ನಿಯಮ ಉಲ್ಲಂಘನೆಯ ಬೋರ್ಡ್ ತೋರಿಸುವ ಬದಲಿಗೆ ಕಿತ್ತೋಗಿರುವ ರೋಡ್‌ಗಳನ್ನು ಸರಿ ಮಾಡಿ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಎಐ ತಂತ್ರಜ್ಞಾನ ಬಳಸಿ ಬೆಂಗಳೂರಿನ ಟ್ರಿನಿಟಿ ವೃತ್ತದ ಬಳಿ ಹಾದು ಹೋಗುವ ವಾಹನಗಳ ಮೇಲೆ ಬಾಕಿ ಇರುವ ದಂಡಗಳನ್ನು ಸಾರ್ವಜನಿಕವಾಗಿ ತೋರಿಸುವ ಬದಲು ಇರುವ ರಸ್ತೆಗುಂಡಿಗಳನ್ನು ಮುಚ್ಚಿ, ಅದರ ಗುತ್ತಿಗೆದಾರರು ಯಾರು ಎಂದು ಬೋರ್ಡ್‌ನಲ್ಲಿ ತೋರಿಸಿ ಎಂದು ಜನ ಆಗ್ರಹಿಸಿದ್ದಾರೆ.

ಇದೇ ರೀತಿ ಎಐ ತಂತ್ರಜ್ಞಾನ ಬಳಸಿಕೊಂಡು ಗುಂಡಿಗಳಿರುವ ರಸ್ತೆ, ಹಾಳಾದ ಚರಂಡಿ ಕಾಮಗಾರಿಗಳನ್ನು ಗುರುತಿಸಿ. ಇದರೊಂದಿಗೆ
1. ಅದಕ್ಕೆ ಕಾರಣರಾದ ಗುತ್ತಿಗೆದಾರರು
2. ಕೆಲಸ ಮಂಜೂರು ಮಾಡಿದ ಭ್ರಷ್ಟ ಅಧಿಕಾರಿಗಳು.
3. ಬೆಂಬಲಿಸಿದ ರಾಜಕಾರಣಿಗಳ ವಿವರಗಳನ್ನೂ ಕೂಡ ಇದೇ ರೀತಿ ಸಾರ್ವಜನಿಕವಾಗಿ ಪ್ರದರ್ಶನ ಮಾಡಬೇಕು ಎಂದು ಸಲಹೆಗಳು ಜನರಿಂದ ಕೇಳಿ ಬರುತ್ತಿದೆ. ಈ ಮಾದರಿಯ ಪೋಸ್ಟ್ ಅನ್ನು ಕರ್ನಾಟಕ ವಿಶೇಷ ಎನ್ನುವ ಪುಟದಿಂದ ಹಂಚಿಕೊಳ್ಳಲಾಗಿದ್ದು. ಜನ ಫಿದಾ ಆಗಿದ್ದಾರೆ.
ಬೆಂಗಳೂರಿನಲ್ಲಿ ಕಸದ ಸಮಸ್ಯೆ, ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಳ ಹಾಗೂ ರಸ್ತೆಗುಂಡಿಗಳ ಸಮಸ್ಯೆ ಇರುವಾಗಲೇ ಈ ರೀತಿಯ ಬೋರ್ಡ್ ಪ್ರಯೋಗ ಜನರ ಕೆಂಗಣ್ಣಿಗೆ ಕಾರಣವಾಗಿದೆ. ಅಭಿ ಶರಣ್ ಎನ್ನುವವರು, ನಿಜಕ್ಕೂ ಇದು ಒಳ್ಳೆಯ ಬೆಳವಣಿಗೆ 👌 ರಾಜ್ಯ ಸರ್ಕಾರ ನಿಜಕ್ಕೂ ಜನರಪರ ಸರ್ಕಾರವೆಂದಾದಲ್ಲಿ ಕೂಡಲೇ ಈ ಯೋಜನೆ ಜಾರಿಗೆ ತರುವಲ್ಲಿ ಮುಂದಾಗಬೇಕು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರಮುಖ ಸಿಗ್ನಲ್ ಗಳಲ್ಲಿ ದೊಡ್ಡ ದೊಡ್ಡ ಪರದೆಗಳ ಮೇಲೆ ಕಾಣುವಂತಾಗಬೇಕು.
ಮತ್ತು ಭ್ರಷ್ಟ ಅಧಿಕಾರಿಗಳು ಭ್ರಷ್ಟ ರಾಜಕಾರಣಿಗಳು ಯಾರೇ ಆಗಿರಲಿ ಮುಲಾಜಿಲ್ಲದೆ ತಪ್ಪಿತಸ್ಥರ ಮೇಲೆ ಎಷ್ಟು ಕ್ರಮ ಕೈಗೊಳ್ಳಲಾಗಿದೆ ಇನ್ನೂ ಎಷ್ಟು ಬಾಕಿ ಕೇಸುಗಳ ಮೇಲೆ ಕ್ರಮ ಕೈಗೊಳ್ಳಬೇಕಿದೆ ಎಂಬುದು ಸಹ ಜನರಿಗೆ ಕಾಣುವಂತಾಗಲಿ ತಿಳಿಯುವಂತಾಗಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಾಹನ ಸವಾರರಿಗೆ ಸಾರಿಗೆ ನಿಯಮಗಳನ್ನು ಪಾಲಿಸದಿದ್ದರೆ, ದಂಡ ಹಾಕುವ ಸರ್ಕಾರ ರಸ್ತೆಗಳು ಹಾಳಾಗಿವೆ ಅದನ್ನು ಮಾಡಿದ ಭ್ರಷ್ಟ ಅಧಿಕಾರಿಗಳಿಗೆ ಏಕೆ ದಂಡವಿಲ್ಲಾ. ವಾಹನ ತೆರಿಗೆಯನ್ನು ರಸ್ತೆ ತೆರಿಗೆ ಯನ್ನಾ ಮೊದಲೇ ಹಾಕಿರುತ್ತಾರೆ. ಸುಗಮ ರಸ್ತೆಗಳನ್ನು ಮಾಡಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications