Bengaluru-Chennai Highway: ಬೆಂಗಳೂರು-ಚೆನ್ನೈ ಹೆದ್ದಾರಿಯಲ್ಲಿ ಪ್ರಯಾಣಿಸುವವರಿಗೆ ಬಿಗ್ ಶಾಕ್
ಬೆಂಗಳೂರು-ಚೆನ್ನೈ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೊಸೂರು ಎಲಿವೇಟೆಡ್ ಹೆದ್ದಾರಿಯಲ್ಲಿ ಪ್ರಯಾಣಿಸುವವರಿಗೆ ಬಿಗ್ ಶಾಕ್ ಎದುರಾಗಿದೆ. ಈ ಮಾರ್ಗದಲ್ಲಿ ಸಮಸ್ಯೆ ಕಂಡುಬಂದಿರುವ ಕಾರಣ ಬೆಂಗಳೂರಿಗೆ ಹೋಗುವ ಎಲ್ಲ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಸಂಚಾರ ಪೊಲೀಸರು ಶನಿವಾರ ತಿಳಿಸಿದ್ದಾರೆ. ಈ ಮಾರ್ಗದಲ್ಲಿ ಸಮಸ್ಯೆ ಪತ್ತೆಯಾದ ನಂತರ ಅಧಿಕಾರಿಗಳು ಇಲ್ಲಿ ವಾಹನಗಳ ಸಂಚಾರ ಅಪಾಯಕಾರಿ ಎಂದು ಘೋಷಿಸಿದ್ದು, ಸುರಕ್ಷತಾ ಕಾರಣಗಳಿಗಾಗಿ ಅಧಿಕಾರಿಗಳು ಈ ಮಾರ್ಗವನ್ನು ಮುಚ್ಚಿದ್ದಾರೆ. ಹಾಗಾಗಿ ವಾಹನಗಳು ಈ ಫ್ಲೈಓವರ್ ಬಳಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ತಜ್ಞರ ತಂಡವು ಭಾನುವಾರ ಈ ಸ್ಥಳಕ್ಕೆ ಭೇಟಿ ನೀಡಲಿದ್ದು, ಬೆಂಗಳೂರಿಗೆ ಬರುವ ಎಲ್ಲ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಅಧಿಕಾರಿಗಳ ಪ್ರಕಾರ ಹೊಸೂರು ಬಸ್ ನಿಲ್ದಾಣದ ಬಳಿಯ ಫ್ಲೈಓವರ್ ಮಧ್ಯಭಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದರ ಬೆನ್ನಲ್ಲೇ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಕೂಡ ತಕ್ಷಣ ಎಚ್ಚೆತ್ತುಕೊಂಡಿದೆ. ಪ್ರಾಧಿಕಾರದ ಅಧಿಕಾರಿಗಳು ಹಾಗೂ ರಸ್ತೆ ಸುರಕ್ಷತಾ ತಂಡಗಳು ಪರಿಶೀಲನೆ ನಡೆಸಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಈ ಫ್ಲೈಓವರ್ ಅನ್ನು ಸಂಪೂರ್ಣವಾಗಿ ಮುಚ್ಚಲು ನಿರ್ಧರಿಸಿದರು. ಹಾಗಾಗಿ ಎಲ್ಲ ವಾಹನಗಳನ್ನು ಪಕ್ಕದ ಸರ್ವಿಸ್ ರಸ್ತೆಯಲ್ಲಿ ಸಂಚರಿಸುವಂತೆ ಸೂಚನೆ ನೀಡಲಾಗಿದೆ.

3 ಕಿ.ಮೀ.ವರೆಗೆ ಟ್ರಾಫಿಕ್ ಜಾಮ್
ಇನ್ನು ಹಠಾತ್ ಸಂಚಾರ ಸ್ಥಗಿತದಿಂದಾಗಿ ಈ ಮಾರ್ಗದಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿದೆ. ಸೇಲಂ ಮತ್ತು ಚೆನ್ನೈನಿಂದ ಕೃಷ್ಣಗಿರಿ ಮೂಲಕ ಬೆಂಗಳೂರಿಗೆ ಬರುವ ವಾಹನಗಳು ಎಲಿವೇಟೆಡ್ ಕಾರಿಡಾರ್ ಬದಲಿಗೆ ಕಿರಿದಾದ ಸರ್ವಿಸ್ ರಸ್ತೆಯಲ್ಲೇ ಸಂಚರಿಸಬೇಕಾಗಿದೆ. ಇದರಿಂದಾಗಿ ಬರೋಬ್ಬರಿ 3 ಕಿ.ಮೀ.ವರೆಗೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಮತ್ತು ಪ್ರಯಾಣಿಕರಿಗೆ ವಿಳಂಬ ಉಂಟುಮಾಡಿದೆ. ಬೆಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ಹಲವಾರು ಪ್ರಯಾಣಿಕರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಈ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದಾರೆ. ಹೊಸೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ.
ಹೆದ್ದಾರಿ ಪ್ರಾಧಿಕಾರದಿಂದ ತನಿಖೆ
ಅದೃಷ್ಟವಶಾತ್ ಈ ಹೆದ್ದಾರಿಯಲ್ಲಿ ಯಾವುದೇ ಗಾಯಗಳು ಅಥವಾ ಅಪಘಾತಗಳು ವರದಿಯಾಗಿಲ್ಲ. ಆದರೆ ಪ್ರತಿದಿನ ಭಾರೀ ವಾಣಿಜ್ಯ ಮತ್ತು ಪ್ರಯಾಣಿಕರ ದಟ್ಟಣೆಯನ್ನು ಹೊಂದಿರುವ ಪ್ರಮುಖ ಹೆದ್ದಾರಿಯಲ್ಲಿ ಈ ಸಮಸ್ಯೆ ದಿಢೀರನೆ ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ. ಈ ಹಾನಿಗೆ ಕಾರಣವನ್ನು ಪತ್ತೆ ಮಾಡಲು ಮತ್ತು ಫ್ಲೈಓವರ್‌ನ ವಿನ್ಯಾಸ ಅಥವಾ ನಿರ್ವಹಣೆಯಲ್ಲಿ ಯಾವುದೇ ಮೂಲಭೂತ ಸಮಸ್ಯೆಗಳಿವೆಯೇ ಎಂದು ನಿರ್ಣಯಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ವಿವರವಾದ ತನಿಖೆ ಕೂಡ ಪ್ರಾರಂಭಿಸಿದೆ. ಈ ಫ್ಲೈಓವರ್ ಮತ್ತೆ ಯಾವಾಗ ತೆರೆಯುತ್ತೆ ಎಂದು ಅಧಿಕಾರಿಗಳು ಇನ್ನೂ ಮಾಹಿತಿ ನೀಡಿಲ್ಲ. ಈ ಮಾರ್ಗವು ಸಾರ್ವಜನಿಕರ ಬಳಕೆಗೆ ಸುರಕ್ಷಿತವೆಂದು ಪರಿಗಣಿಸುವವರೆಗೆ ಈ ಸಮಸ್ಯೆ ಮುಂದುವರಿಯಲಿದೆ. ಅಲ್ಲಿವರೆಗೆ ವಾಹನಗಳು ಈ ಸರ್ವೀಸ್ ರಸ್ತೆಯಲ್ಲೇ ಸಂಚರಿಸಬೇಕಾಗಿದೆ. ಈ ಮಾರ್ಗದ ಬದಲು ಪರ್ಯಾಯ ರಸ್ತೆಗಳನ್ನು ಬಳಸುವಂತೆ ವಾಹನ ಸವಾರರಿಗೆ ಸೂಚಿಸಲಾಗಿದೆ.












Click it and Unblock the Notifications