ಸ್ವಂತ ಖರ್ಚಿನಲ್ಲಿ ಫುಟ್‌ಪಾತ್ ಸರಿಪಡಿಸಿದ ಬೆಂಗಳೂರು CEO: ಕೇವಲ 2,700 ರೂ. ವೆಚ್ಚದಲ್ಲಿ ಹಾಳಾಗಿದ್ದ ಫುಟ್‌ಪಾತ್ ರಿಪೇರಿ!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳು ಮತ್ತು ಹಾಳಾದ ಪಾದಚಾರಿ ಮಾರ್ಗಗಳು ಸಾರ್ವಜನಿಕರ ನಿತ್ಯದ ಗೋಳಾಗಿ ಪರಿಣಮಿಸಿವೆ. ಈ ಕುರಿತು ಪಾಲಿಕೆಗೆ ದೂರು ನೀಡಿದರೂ ಯಾವುದೇ ಸ್ಪಂದನೆ ಸಿಗದೆ ನಾಗರಿಕರು ಸುಸ್ತಾಗುವುದು ಸಾಮಾನ್ಯ. ಆದರೆ ಇಲ್ಲೊಬ್ಬರು ಸ್ಟಾರ್ಟಪ್ ಸಿಇಒ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾದು ಕುಳಿತುಕೊಳ್ಳದೆ ತಾವೇ ಖುದ್ದಾಗಿ ರಸ್ತೆಗಿಳಿದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕೋರಮಂಗಲದಲ್ಲಿ ವರ್ಷಗಳಿಂದ ಕಿತ್ತುಹೋಗಿದ್ದ ಫುಟ್‌ಪಾತ್ ಅನ್ನ ಸ್ವಂತ ಖರ್ಚಿನಲ್ಲಿ ಕೇವಲ 2,700 ರೂಪಾಯಿ ವೆಚ್ಚದಲ್ಲಿ ದುರಸ್ತಿ ಮಾಡಿಸುವ ಮೂಲಕ ಬಿಬಿಎಂಪಿಯ ಆಡಳಿತ ವೈಖರಿಗೆ ಕನ್ನಡಿ ಹಿಡಿದಿದ್ದಾರೆ.

ಬಿಬಿಎಂಪಿ ನಿರ್ಲಕ್ಷ್ಯ ಮತ್ತು ಸಿದ್ಧಾರ್ಥ್ ಡಯಲಾನಿ ದೂರುಗಳು
ಭಾರತ್‌ಅಗ್ರಿ ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ಸಿದ್ಧಾರ್ಥ್ ಡಯಲಾನಿ ಅವರು ಕೋರಮಂಗಲದಲ್ಲಿರುವ ತಮ್ಮ ಅಪಾರ್ಟ್‌ಮೆಂಟ್ ಸೊಸೈಟಿ ಬಳಿಯ ಫುಟ್‌ಪಾತ್ ದುರಸ್ತಿಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು. ಈ ಮಾರ್ಗವು ತೀವ್ರವಾಗಿ ಹಾಳಾಗಿದ್ದು, ಪಾದಚಾರಿಗಳು ನಡೆದಾಡಲು ಪರದಾಡುವಂತಾಗಿತ್ತು.
ಈ ಬಗ್ಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಹಲವು ಬಾರಿ ದೂರು ನೀಡಲಾಗಿತ್ತು. ಗ್ರೇಟರ್ ಬೆಂಗಳೂರು ಅಥಾರಿಟಿಗೆ ಇಮೇಲ್ ಮಾಡಿದ್ದಲ್ಲದೆ, ಅಧಿಕೃತ ಸಹಾಯವಾಣಿ, ಆನ್‌ಲೈನ್ ಟಿಕೆಟ್ ಹಾಗೂ ವಾಟ್ಸಾಪ್ ಸಹಾಯವಾಣಿ ಮೂಲಕವೂ ಸತತ ಮನವಿ ಮಾಡಲಾಗಿತ್ತು. ಆದರೆ, ಅಧಿಕಾರಿಗಳ ಕಡೆಯಿಂದ ಯಾವುದೇ ಸ್ಪಂದನೆ ಅಥವಾ ಕ್ರಮಗಳು ಕಂಡುಬರಲಿಲ್ಲ.
ಸ್ವಂತ ಖರ್ಚಿನಲ್ಲಿ ಕೋರಮಂಗಲ ಫುಟ್‌ಪಾತ್ ದುರಸ್ತಿ
ಅಧಿಕಾರಿಗಳ ಅಸಡ್ಡೆಯಿಂದ ಬೇಸತ್ತ ಸಿದ್ಧಾರ್ಥ್ ಡಯಲಾನಿ, ಸಮಸ್ಯೆ ಹಾಗೆಯೇ ಮುಂದುವರಿಯುವುದನ್ನ ನೋಡಿ ತಾವೇ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದರು. ಸ್ಥಳೀಯವಾಗಿ ಕಾರ್ಮಿಕರನ್ನು ಕರೆಸಿ, ಸಿಮೆಂಟ್ ಮತ್ತು ಕಾಂಕ್ರೀಟ್ ಬಳಸಿ ಹಾಳಾಗಿದ್ದ ಜಾಗದಲ್ಲಿ ಸುಂದರವಾದ ರ್ಯಾಂಪ್ ನಿರ್ಮಿಸಿದರು.
ಈ ಇಡೀ ಕಾಮಗಾರಿಗೆ ಕಾರ್ಮಿಕರ ಕೂಲಿ ಹಾಗೂ ಸಾಮಗ್ರಿಗಳ ವೆಚ್ಚ ಸೇರಿ ತಗುಲಿದ್ದು ಕೇವಲ 2,700 ರೂಪಾಯಿ ಮಾತ್ರ. ವರ್ಷಗಳಿಂದ ಅಧಿಕಾರಿಗಳು ಮಾಡದಿದ್ದ ಕೆಲಸವನ್ನು ಸಿದ್ಧಾರ್ಥ್ ಕೆಲವೇ ಗಂಟೆಗಳಲ್ಲಿ ಮುಗಿಸಿಕೊಟ್ಟಿದ್ದಾರೆ.
ವೃದ್ಧರು ಮತ್ತು ವಿಶೇಷ ಚೇತನರಿಗೆ ಅನುಕೂಲಕರ ರ್ಯಾಂಪ್ ನಿರ್ಮಾಣ
ದುರಸ್ತಿ ಕಾರ್ಯ ಪೂರ್ಣಗೊಂಡ ಬಳಿಕ 'ಎಕ್ಸ್' ಖಾತೆಯಲ್ಲಿ ಫುಟ್‌ಪಾತ್‌ನ 'ಮೊದಲು ಮತ್ತು ನಂತರ'ದ ಛಾಯಾಚಿತ್ರಗಳನ್ನ ಸಿದ್ಧಾರ್ಥ್ ಹಂಚಿಕೊಂಡಿದ್ದಾರೆ. "ಕೊನೆಗೂ ನಾನೇ ಇದನ್ನು ಸರಿಪಡಿಸಲು ತೀರ್ಮಾನಿಸಿದೆ. ಈಗ ಮಗುವಿನ ಸ್ಟ್ರೋಲರ್ ಹಿಡಿದು ಬರುವ ಪೋಷಕರು ಹಾಗೂ ವೀಲ್‌ಚೇರ್ ಚಲಿಸುವ ಹಿರಿಯ ನಾಗರಿಕರು ಯಾವುದೇ ಅಡೆತಡೆಯಿಲ್ಲದೆ ಸುಲಭವಾಗಿ ಈ ಪಾದಚಾರಿ ಮಾರ್ಗವನ್ನ ಬಳಸಬಹುದು" ಎಂದು ಅವರು ಬರೆದುಕೊಂಡಿದ್ದಾರೆ. ಅವರ ಈ ಕಾಳಜಿಯುತ ಕೆಲಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ
ಸಿದ್ಧಾರ್ಥ್ ಅವರ ಈ ಪೋಸ್ಟ್ ಕೇವಲ ಕೆಲವೇ ಗಂಟೆಗಳಲ್ಲಿ 3.9 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನ ಪಡೆದು ಭಾರೀ ವೈರಲ್ ಆಗಿದೆ. ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್-ಶಾ ಮತ್ತು ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಸೇರಿದಂತೆ ಹಲವು ಪ್ರಮುಖ ಗಣ್ಯರನ್ನ ಟ್ಯಾಗ್ ಮಾಡಿರುವ ಸಿದ್ಧಾರ್ಥ್, ನಗರದ ಅಭಿವೃದ್ಧಿಗೆ ನಾಗರಿಕರ ಒಗ್ಗಟ್ಟಿನ ಶ್ರಮದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
"ಬೆಂಗಳೂರಿನ ಇನ್ನುಳಿದ ಪ್ರದೇಶಗಳಲ್ಲೂ ಇಂತಹ ಸಮಸ್ಯೆಗಳನ್ನು ಬಗೆಹರಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು" ಎಂದು ಅವರು ಕರೆ ನೀಡಿದ್ದಾರೆ. ಸಾರ್ವಜನಿಕರು ಮತ್ತು ನೆಟ್ಟಿಗರು ಸಿಇಒ ಅವರ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು, ಕೋಟ್ಯಂತರ ರೂಪಾಯಿ ಅನುದಾನ ಹೊಂದಿರುವ ಸ್ಥಳೀಯ ಆಡಳಿತವು ಮಾಡಲಾಗದ ಸಣ್ಣ ಕೆಲಸವನ್ನು ಒಬ್ಬ ಸಾಮಾನ್ಯ ಪ್ರಜೆ ಮಾಡಿ ತೋರಿಸಿರುವುದು ವ್ಯವಸ್ಥೆಗೆ ಎಚ್ಚರಿಕೆಯ ಗಂಟೆಯಾಗಿದೆ.


Click it and Unblock the Notifications
