ಹೆಣ್ಣುಮಕ್ಕಳಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದವ ಅಂದರ್
ಬೆಂಗಳೂರು, ಜೂನ್ 28: ಸಾಮಾಜಿಕ ಜಾಲತಾಣದ ಮೂಲಕ ಹೆಣ್ಣುಮಕ್ಕಳಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದವನನ್ನು ಬೆಂಗಳೂರು ನಗರದ ಸಿಸಿಬಿ ಘಟಕದ ಸೈಬರ್ ಕ್ರೈಂ ಪೊಲೀಸರು, ತಮಿಳುನಾಡು ರಾಜ್ಯದ ಹೊಸೂರಿನ ಬಸ್ ನಿಲ್ದಾಣದ ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.
ಬಂಧಿತ, ನಕಲಿಯಾಗಿ ಫೇಸ್‍ಬುಕ್ ಖಾತೆಗಳನ್ನು ತೆರೆದು ಹೆಂಗಸರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ ನಂತರ, ರಿಕ್ವೆಸ್ಟ್ ಸ್ವೀಕರಿಸಿದ ಮಹಿಳೆಯರೊಂದಿಗೆ, ಚಾಟಿಂಗ್ ಮಾಡುತ್ತಾ ಅಶ್ಲೀಲ ಸಂಭಾಷಣೆ ಹಾಗೂ ಅಶ್ಲೀಲ ಭಾವಚಿತ್ರಗಳನ್ನು ಕಳುಹಿಸುತ್ತಿದ್ದ.
ಅಲ್ಲದೇ ವಿಡಿಯೋ ಕಾಲ್, ಆಡಿಯೋ ಕಾಲ್ ಗಳನ್ನು ನಿರಂತರವಾಗಿ ಮಾಡುತ್ತಾ ಅನುಚಿತ ರೀತಿಯಲ್ಲಿ ವರ್ತಿಸುತ್ತಿದ್ದ ಆರೋಪದ ಮೇರೆಗೆ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ಪ್ರಾಥಮಿಕ ವಿಚಾರಣೆಗೆ ಒಳಪಡಿಸಿದಾಗ ಕೃತ್ಯದಲ್ಲಿ ಭಾಗಿಯಾಗಿರುವ, ತಮಿಳುನಾಡು ಮೂಲದ ವ್ಯಕ್ತಿಯನ್ನು ದಸ್ತಗಿರಿ ಮಾಡಿ, ಆತನಿಂದ 3 ಮೊಬೈಲ್ ಪೋನ್‍ಗಳು, 4 ಸಿಮ್ ಕಾರ್ಡ್‍ಗಳನ್ನು, ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸೈಯ್ಯದ್ ನಯಾಜ್ @ ನಯಾಜ್ @ ರಮೇಶ್‍ಕುಮಾರ್ @ ರಾಮ್‍ಕುಮಾರ್ @ ರಾಜೇಶ್‍ಕುಮಾರ್ @ ಸೈಯ್ಯದ್ ಅಸ್ಲಮ್ ಬಿನ್ ಚೋಟು ಸಾಬ್, 36 ವರ್ಷ, ಬಾಡಿಗೆ ಮನೆ, ನಂ-15, 6ನೇ ಕ್ರಾಸ್, ಇಂದಿರಾ ಗಾಂಧಿ ನಗರ, ಅವಲಪಳ್ಳಿ ರಸ್ತೆ, ಹೊಸೂರು, ಕೃಷ್ಣಗಿರಿ ಜಿಲ್ಲೆ, ತಮಿಳುನಾಡು. ಬಂಧಿತ ವ್ಯಕ್ತಿ.
ಆರೋಪಿ ಸೈಯ್ಯದ್ ನಯಾಜ್, ನಯಾಜ್, ರಮೇಶ್‍ಕುಮಾರ್, ರಾಮ್‍ಕುಮಾರ್, ರಾಜೇಶ್‍ಕುಮಾರ್, ಸೈಯ್ಯದ್ ಅಸ್ಲಮ್, ವಿಜಯ್ ಶಾಂತಿ ಎಂಬ ಹೆಸರುಗಳನ್ನು ಬಳಸಿ ಅನ್ಯ ವ್ಯಕ್ತಿಗಳ ಭಾವಚಿತ್ರಗಳನ್ನು ಬಳಸಿಕೊಂಡು ನಕಲಿಯಾಗಿ ಫೇಸ್‍ಬುಕ್ ಖಾತೆಗಳನ್ನು ತೆರೆದು ಕೃತ್ಯಕ್ಕೆ ಬಳಕೆ ಮಾಡಿರುವುದಾಗಿ ನುಡಿದಿದ್ದು ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಮೊಬೈಲ್ ರಿಪೇರಿ ಕೆಲಸ ಕೂಡ ಮಾಡುತ್ತಿದ್ದು ರಿಪೇರಿಗೆ ಬಂದ ಮೊಬೈಲ್ ನಲ್ಲಿ, ಕೆಲವು ಸಂಗ್ರಹಿತ ಸಂಪರ್ಕ ಸಂಖ್ಯೆಗಳನ್ನು ತೆಗೆದುಕೊಂಡು ತದನಂತರ, ಟ್ರೂಕಾಲರ್ ನಲ್ಲಿ ಪರಿಶೀಲಿಸಿ ಹೆಣ್ಣುಮಕ್ಕಳ ಹೆಸರು ಕಂಡುಬಂದ ನಂತರ ತನ್ನ ಕೃತ್ಯವನ್ನು ಪ್ರಾರಂಭಿಸುತ್ತಿದ್ದುದಾಗಿ ವಿಚಾರಣೆಯ ವೇಳೆ ನುಡಿದಿದ್ದಾನೆ.












Click it and Unblock the Notifications