ಬೆಂಗಳೂರು ಜಲಮಂಡಳಿ ವ್ಯಾಪ್ತಿಯ ಸಿಬ್ಬಂದಿಗೆ ಸಿಹಿ ಸುದ್ದಿ
ಬೆಂಗಳೂರು, ಮೇ 01: ಬೆಂಗಳೂರು ನಗರಕ್ಕೆ ನಿರಂತರವಾಗಿ ನೀರು ಸರಬರಾಜು ಮಾಡಲು ಹಾಗೂ ನಗರದ ಸ್ವಾಸ್ಥ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಜಲಮಂಡಳಿಯ ತನ್ನ ವ್ಯಾಪ್ತಿಯ ಸಿಬ್ಬಂದಿ-ನೌಕರರಿಗೆ ಸಿಹಿ ಸುದ್ದಿ ನೀಡಿದೆ.
ಬುಧವಾರ ಎಚ್‌ಬಿಆರ್ ಜಲಮಂಡಳಿ ಕಚೇರಿಯಲ್ಲಿ ಕಾರ್ಮಿಕ ದಿನಾಚರಣೆಯ ಅಂಗವಾಗಿ ಆಲ್ಟಿಯಸ್ ಮತ್ತು ಲಕ್ಷ್ಮಿ ಗ್ರೂಪ್ ಆಸ್ಪತ್ರೆ ಅವರ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಜಲಮಂಡಳಿ ಅಧ್ಯಕ್ಷರಾದ ಡಾ. ವಿ ರಾಮ್ ಪ್ರಸಾತ್ ಮನೋಹರ್ ಅವರು ಮಾಹಿತಿ ನೀಡಿದರು.

ಜಲಮಂಡಳಿ ವ್ಯಾಪ್ತಿಯ ವಾಟರ್‌ಮ್ಯಾನ್, ಸ್ಯಾನಿಟರಿ ವರ್ಕರ್, ಜೆಟ್ಟಿ ಡ್ರೈವರ್ ಸೇರಿದಂತೆ ಎಲ್ಲಾ ಸಿಬ್ಬಂದಿಗಳಿಗೂ ಮಂಡಳಿ ವತಿಯಿಂದ ಮೇ ತಿಂಗಳಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದು ಅವರು ಹೇಳಿದರು.
ಉತ್ತಮ ಆರೋಗ್ಯ ಕರೆ
ಬೆಂಗಳೂರು ನಗರದ ಸ್ವಚ್ಚತೆಯನ್ನು ಕಾಪಾಡುವಲ್ಲಿ ಜಲಮಂಡಳಿಯ ವಾಟರ್‌ಮ್ಯಾನ್, ಸ್ಯಾನಿಟರಿ ವರ್ಕರ್, ಜೆಟ್ಟಿ ಡ್ರೈವರ್‌ಗಳ ಪಾತ್ರ ಬಹಳ ಮುಖ್ಯ. ಅವರುಗಳು ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾರ್ಮಿಕರು ಹಾಗೂ ಸಿಬ್ಬಂದಿಗಳೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ಹೊಂದಬೇಕು. ದುಶ್ಚಟಗಳಿಂದ ದೂರವಿದ್ದು ಉತ್ತಮ ಆರೋಗ್ಯದ ಕಡೆಗೆ ಗಮನ ನೀಡಬೇಕು ಎಂದು ಕರೆ ನೀಡಿದರು.
ಮೇ ತಿಂಗಳಲ್ಲಿ ಆರೋಗ್ಯ ತಪಾಸಣೆ
ಕಾರ್ಮಿಕರು ಹಾಗೂ ಸಿಬ್ಬಂದಿಗಳ ಆರೋಗ್ಯದ ಬಗ್ಗೆ ಮಂಡಳಿ ವಿಶೇಷ ಕಾಳಜಿಯನ್ನು ಹೊಂದಿದೆ. ಮಂಡಳಿಯ ಕಾರ್ಮಿಕರ ಆರೋಗ್ಯವನ್ನು ಸುಸ್ಥಿಯಲ್ಲಿಡುವ ದೃಷ್ಟಿಯಿಂದ ಪ್ರತಿವರ್ಷ ಮೇ ತಿಂಗಳಲ್ಲಿ ಉಚಿತ ಆರೋಗ್ಯ ತಪಾಸಣೆಯನ್ನು ನಡೆಸಲಾಗುವುದು ಎಂದರು.
ಆರೋಗ್ಯ ಶಿಬಿರದಲ್ಲಿ 300 ಕ್ಕೂ ಹೆಚ್ಚು ಸಿಬ್ಬಂದಿಗಳು ಹಾಗೂ ಅವರ ಕುಟುಂಬದ ಸದಸ್ಯರು ಆರೋಗ್ಯ ತಪಾಸಣೆ ಲಾಭ ಪಡೆದುಕೊಂಡರು.

ಏರಿಯೇಟರ್ ಅವಳಡಿಕೆ ಗಡುವು ವಿಸ್ತರಣೆ
ಬೆಂಗಳೂರಿನ ಸಾರ್ವಜನಿಕ ಸ್ಥಳಗಳಲ್ಲಿ ಏರಿಯೇಟರ್/ಫ್ಲೋ ರಿಸ್ಟ್ರಿಕ್ಟರ್ ಅವಳಡಿಕೆ ಅಂತಿಮ ದಿನವನ್ನು ಮೇ 7ರವರೆಗೆ ವಿಸ್ತರಣೆ ಮಾಡಲಾಗಿದೆ. ನೀರು ಉಳಿತಾಯ ಹಾಗೂ ನೀರಿನ ಸದ್ಬಳಕೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮಾಲ್‌ಗಳಲ್ಲಿ, ವಾಣಿಜ್ಯ ಸಂಕೀರ್ಣಗಳಲ್ಲಿ, ಅಪಾರ್ಟ್‌ಮೆಂಟ್‌ಗಳಲ್ಲಿ, ಸರ್ಕಾರಿ ಕಟ್ಟಡಗಳಲ್ಲಿ, ಐಷಾರಾಮಿ ಹೋಟೇಲ್‌ಗಳಲ್ಲಿ, ರೆಸ್ಟೋರೆಂಟ್‌ಗಳಲ್ಲಿ ಹಾಗೂ ಧಾರ್ಮಿಕ ಸ್ಥಳಗಳನ್ನೊಳಗೊಂಡ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಚತೆಗಾಗಿ ಬಳಸುವ ನಲ್ಲಿಗಳಲ್ಲಿ ಅಳವಡಿಕೆ ಮಾಡುವಂತೆ ಜಲಮಂಡಳಿ ಸೂಚಿಸಿದೆ.
ಸದ್ಯ ಈಗಾಗಲೇ ಸುಮಾರು 6 ಲಕ್ಷಕ್ಕೂ ಹೆಚ್ಚು ಏರಿಯೇಟರ್‌ಗಳನ್ನು ಅಳವಡಿಸಿಕೊಳ್ಳಲಾಗಿದೆ. ಉಳಿದ ಏರಿಯೇಟರ್ ಅಳವಡಿಕೆಗೆ ಅವಧಿ ವಿಸ್ತರಣೆ ಮಾಡಲಾಗಿದೆ. ಮೇ 8ರ ನಂತರ ಜಲಮಂಡಳಿ ಅಧಿಕಾರಿಗಳು ಪರಿಶೀಲನೆ ನಡೆಸಿ ಎರಿಯೇಟರ್ ಅಳವಡಿಸಿಕೊಳ್ಳದೇ ಇರುವಂತವರ ಮೇಲೆ ದಂಡ ವಿಧಿಸಲು ನಿರ್ಧರಿಸಲಾಗಿದೆ.












Click it and Unblock the Notifications