Bengaluru Business Corridor: ಕೊನೆಗೂ ಬಿಸಿನೆಸ್ ಕಾರಿಡಾರ್ ನಿರ್ಮಾಣಕ್ಕೆ ಕೂಡಿಬಂತು ಮೂಹೂರ್ತ-ವೆಚ್ಚ, ಮಾರ್ಗಗಳ ಮಾಹಿತಿ
Bengaluru Business Corridor: ಬೆಂಗಳೂರು ಬಿಸಿನೆಸ್ ಕಾರಿಡಾರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಬಜೆಟ್ ಮಂಡನೆ ವೇಳೆ ಅನುಮೋದನೆ ನೀಡುವುದಾಗಿಯೂ ಹೇಳಿತ್ತು. ಹಾಗಾದರೆ ಇದರ ಉದ್ದೇಶ ಏನು ಹಾಗೂ ಇದೀಗ ಇದರ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಕಂಪನಿ ಹಾಗೂ ವೆಚ್ಚದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬೆಂಗಳೂರು ಬಿಸಿನೆಸ್ ಕಾರಿಡರ್ ರೂಪಿಸಲು ಬಜೆಟ್‌ನಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದು, 27 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 73 ಕಿಲೋ ಮೀಟರ್ ಉದ್ದದ ರಸ್ತೆಯನ್ನು ನಿರ್ಮಾಣ ಮಾಡಲಾಗುವುದು. ಇದನ್ನು ಪಿಪಿಪಿ ಮಾದರಿಯಲ್ಲಿ ಆರ್‌ಎಫ್‌ಪಿ ಎಂದು ಕರೆಯಲಾಗುವುದು ಎಂದು ಬಜೆಟ್ ಮಂಡನೆ ವೇಳೆ ಹೇಳಲಾಗಿತ್ತು.

ಬಿಡಿಎ ಉದ್ದೇಶಿತ ಬೆಂಗಳೂರು ಬಿಸಿನೆಸ್ ಕಾರಿಡಾರ್ ನಿರ್ಮಾಣಕ್ಕೆ ನೈಜೀರಿಯಾ ಮೂಲದ ಕಂಪೆನಿಯು ಒಲವು ತೋರಿದ್ದು, ಇದರಿಂದ ಹಲವು ವರ್ಷಗಳಿಂದ ಮೂಲೆಗೊಂಪಾಗಿದ್ದ ಯೋಜನೆಗೆ ಕೊನೆಗೂ ಮುಹೂರ್ತ ಕೂಡಿಬಂದಂತಾಗಿದೆ. ವರ್ತುಲ ರಸ್ತೆ ನಿರ್ಮಾಣಕ್ಕೆ ಆಹ್ವಾನಿಸಿದ್ದ ಜಾಗತಿಕ ಟೆಂಡರ್‌ನಲ್ಲಿ ನೈಜೀರಿಯಾ ಮೂಲದ ಅಸ್ಟ್ರಮ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಕಂಪೆನಿ ಬಿಡ್ ಸಲ್ಲಿಸಿದೆ.
ಇನ್ನು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಯಾಗಿದ್ದು ಇದೆ ಏಕೈಕ ಕಂಪೆನಿ. ಪ್ರಾಧಿಕಾರವು ಅಸ್ಟ್ರಮ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಕಂಪನಿಯ ದಾಖಲೆಗಳ ಪರಿಶೀಲನೆ ಮತ್ತು ತಾಂತ್ರಿಕ ಮೌಲ್ಯಮಾಪನ ನಡೆಸಲು ನಿರ್ಧರಿಸಿದ್ದು, ಇದೇ ಕಂಪೆನಿಗೆ ಗುತ್ತಿಗೆ ನೀಡಲು ಯೋಜನೆ ಹಾಕಿಕೊಳ್ಳಲಾಗಿದೆ.
ಈ ಕಾರಿಡಾರ್ ನಿರ್ಮಾಣಕ್ಕಾಗಿ, ರೈತರಿಂದ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ನೀಡುವುದು, ಯೋಜನಾ ವೆಚ್ಚ ಭರಿಸುವ ಷರತ್ತುಗಳಿಗೆ ಬದ್ಧವಾದರೆ, ಅದೇ ಕಂಪೆನಿಗೆ ಗುತ್ತಿಗೆ ನೀಡಲು ತೀರ್ಮಾನ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಇತ್ತೀಚೆಗಷ್ಟೇ ಬಿಡಿಎ ಅಧ್ಯಕ್ಷರು, ಆಯುಕ್ತರು, ಕಾರ್ಯದರ್ಶಿಗಳು ಸೇರಿದಂತೆ ಹಲವು ಉನ್ನತಾಧಿಕಾರಿಗಳು ಕೂಡ ಸಭೆ ನಡೆಸಿದ್ದಾರೆ. ಈ ವೇಲೆ ದಾಖಲೆಗಳ ಪರಿಶೀಲನೆ ಹಾಗೂ ತಾಂತ್ರಿಕ ಮೌಲ್ಯಮಾಪನ ನಡೆಸಲು ನಿರ್ಧಾರ ಮಾಡಿದ್ದಾರೆ.
ಇದೀಗ ಗುತ್ತಿಗೆ ಪಡೆಯುತ್ತಿರುವ ಕಂಪನಿಗೆ ತಲೆನಮೋವೆಂದರೆ ರೈತರಿಗೆ ನೀಡಬೇಕಾದ ಪರಿಹಾರ ಮೊತ್ತವಾಗಿದೆ. ಆದ್ದರಿಂದ ಬಿಡ್‌ದಾರರು ಪಿಆರ್‌ಆರ್‌ಗೆ ನಿರಾಸಕ್ತಿ ತೋರುತ್ತಿದ್ದು, ಈ ಮಧ್ಯೆ ಕರೆಯಲಾಗಿದ್ದ ಜಾಗತಿಕ ಟೆಂಡರ್‌ನಲ್ಲಿ ಏಕೈಕ ಕಂಪನಿ ಬಿಡ್ ಸಲ್ಲಿಕೆ ಮಾಡಿದೆ. ಅದೇ ಕಂಪೆನಿಗೆ ಗುತ್ತಿಗೆ ನೀಡಿ, ಯೋಜನೆಯ ಕಾಮಗಾರಿಯನ್ನು ಸತೀ ಶೀಘ್ರವೇ ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ.
ಬಿಸಿನೆಸ್ ಕಾರಿಡಾರ್ ನಿರ್ಮಾಣಕ್ಕೆ 2007ರಲ್ಲಿಅಧಿಸೂಚನೆ ಹೊರಡಿಸಲಾಗಿದ್ದು, ಆಗಲೇ ರಸ್ತೆ ನಿರ್ಮಿಸಿದ್ದರೆ, ಯೋಜನಾ ವೆಚ್ಚವೂ ಕಡಿಮೆ ಆಗುತ್ತಿತ್ತು. ಇದೀಗ ಯೋಜನಾ ವೆಚ್ಚವು ಭಾರೀ ಏರಿಕೆಯಾಗಿರುವ ಹಿನ್ನೆಲೆ ರಸ್ತೆ ನಿರ್ಮಾಣ ಮತ್ತಷ್ಟು ವಿಳಂಬ ಆಗುತ್ತಿದೆ ಎನ್ನಲಾಗುತ್ತಿದೆ.
ತುಮಕೂರು & ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ 100 ಮೀಟರ್ ಅಗಲ, 8 ಪಥದ 73 ಕಿಲೋ ಮೀಟರ್ ಉದ್ದದ ರಸ್ತೆ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. 2022ರಲ್ಲಿ ಪೆರಿಫೆರಲ್ ವರ್ತುಲ ರಸ್ತೆ ನಿರ್ಮಾಣಕ್ಕಾಗಿ ಎರಡು ಬಾರಿ ಟೆಂಡರ್ ಆಹ್ವಾನಿಸಲಾಗಿತ್ತು. ಆದರೂ ಯಾರೂ ಇದರತ್ತ ಆಸಕ್ತಿವಹಿಸಿರಲಿಲ್ಲ.
ರೈತರಿಗೆ ಭೂಸ್ವಾದೀನ ಪರಿಹಾರ ನಿಗದಿ ವಿಚಾರದಲ್ಲೂ ಸಾಕಷ್ಟು ಗೊಂದಲಗಳಿದ್ದವು. ಆದ್ದರಿಂದ ಯೋಜನೆ ವಿಳಂಬ ಆಗಿದ್ದು, ನಂತರ ಪೆರಿಫೆರಲ್ ವರ್ತುಲ ರಸ್ತೆ ಯೋಜನೆಗೆ ಬೆಂಗಳೂರು ಬಿಸಿನೆಸ್ ಕಾರಿಡಾರ್ ಅಂತಾ ಮರು ನಾಮಕರಣ ಮಾಡಲಾಗಿದೆ.
ಈ ಬಿಸಿನೆಸ್ ಕಾರಿಡಾರ್‌ನ ಎಂಟು ಪಥಗಳ ರಸ್ತೆಯು ಪ್ರವೇಶ ನಿಯಂತ್ರಿತ ಎಕ್ಸ್‌ಪ್ರೆಸ್‌ವೇ ಆಗಿದ್ದು, ಹೆಸರಘಟ್ಟ, ದೊಡ್ಡಬಳ್ಳಾಪುರ, ಬಳ್ಳಾರಿ ರಸ್ತೆ, ಹೆಣ್ಣೂರು, ಹಳೆ ಮದ್ರಾಸ್, ಹೊಸಕೋಟೆ ರಸ್ತೆ ಮತ್ತು ಸರ್ಜಾಪುರ ಸೇರಿದಂತೆ 77 ಗ್ರಾಮಗಳ ಮೂಲಕ ತುಮಕೂರು ರಸ್ತೆ ಮತ್ತು ಹೊಸೂರು ರಸ್ತೆಯನ್ನು ಸಂಪರ್ಕ ಕಲ್ಪಸಲಿದೆ. ಇದಕ್ಕೆ ಬಿಡಿಎ ಈಗಾಗಲೇ 2,596 ಹೆಕ್ಟೇರ್ ಭೂಮಿಯನ್ನು ಗುರುತಿಸಿದೆ ಎಂದು ತಿಳಿದುಬಂದಿದೆ.
2013ರ ಭೂ ಸ್ವಾಧೀನ ಕಾಯಿದೆ ಪ್ರಕಾರ ಯೋಗ್ಯ ಬೆಲೆ ಕೊಟ್ಟು, ಯೋಜನೆಯ ಕಾಮಗಾರಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಿ. ರಸ್ತೆ ನಿರ್ಮಾಣಕ್ಕೆ ರೈತರು ನೀಡಿದ ಭೂಮಿಗೆ ಪರಿಹಾರ ಇಲ್ಲದಂತಾಗಿದೆ. ಇನ್ನು ಭೂಮಿ ಕೊಟ್ಟಿರುವ ರೈತರು ಪರಿಹಾರಕ್ಕಾಗಿ ಸುಮಾರು ವರ್ಷಗಳಿಂದ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಬಿಡಿಎ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಪರಿಹಾರವೂ ಸಿಗುತ್ತಿಲ್ಲ. ಅತ್ತ ಭೂಮಿಯನ್ನು ಮಾರಾಟ ಮಾಡಲಾಗುತ್ತಿಲ್ಲ. ಕೆಲವು ರೈತ ಮಾಲೀಕರು ಈಗಾಗಲೇ ನಿಧನರಾಗಿದ್ದು,ಭೂ ಪರಿಹಾರ ನಿಗದಿಯ ಗೊಂದಲವನ್ನು ಅತೀ ಬೇಗ ಸರಿಪಡಿಸಬೇಕು ಎನ್ನುವುದು ರೈತರ ಆಗ್ರಹವಾಗಿದೆ.












Click it and Unblock the Notifications