Bengaluru Bandh: 7-10 ಲಕ್ಷ ವಾಹನಗಳು ಬಂದ್‌: ಏನೆಲ್ಲಾ ಇರುತ್ತೆ, ಇರಲ್ಲ? ಇಲ್ಲಿದೆ ಸಂಪೂರ್ಣ ವಿವರ

ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟವು ಭಾನುವಾರ ಮಧ್ಯರಾತ್ರಿಯಿಂದ ಪ್ರಾರಂಭವಾಗುವ 'ಬಂದ್' ಅನ್ನು ಸೋಮವಾರ ಮಧ್ಯರಾತ್ರಿಯವರೆಗೆ ಮುಂದುವರಿಸುವುದಾಗಿ ಘೋಷಿಸಿದೆ. ಈ ಮುಷ್ಕರದಿಂದ ಸಾರಿಗೆ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಹಲವು ಪ್ರಯಾಣಿಕರಿಗೆ ತೊಂದರೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಬಂದ್‌ನ ಪರಿಣಾಮವಾಗಿ, ಕೆಲವು ಶಾಲೆಗಳಿಗೆ ಈಗಾಗಲೇ ಸೋಮವಾರ ರಜೆ ಘೋಷಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಒಟ್ಟು 32 ಖಾಸಗಿ ಸಾರಿಗೆ ಸಂಘಟನೆಗಳಿದ್ದು, ಸೋಮವಾರ ಹೆಚ್ಚಿನ ಖಾಸಗಿ ಸಾರಿಗೆ ಸೇವೆಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ಹೇಳಿವೆ.

Bengaluru Bandh

ಆಟೋಗಳು, ಟ್ಯಾಕ್ಸಿಗಳು, ಮ್ಯಾಕ್ಸಿ ಕ್ಯಾಬ್‌ಗಳು, ಸರಕು ವಾಹನಗಳು ಮತ್ತು ಕಾರ್ಪೊರೇಟ್ ಬಸ್‌ಗಳು ಸೇರಿದಂತೆ ಲಕ್ಷಾಂತರ ಖಾಸಗಿ ವಾಹನಗಳ ಓಡಾಟ ಬಂದ್ ಆಗಲಿದೆ. ಆಟೋಗಳು, ಟ್ಯಾಕ್ಸಿಗಳು, ವಿಮಾನ ನಿಲ್ದಾಣ ಟ್ಯಾಕ್ಸಿಗಳು, ಮ್ಯಾಕ್ಸಿ ಕ್ಯಾಬ್‌ಗಳು, ಸರಕು ವಾಹನಗಳು, ಶಾಲಾ ವಾಹನಗಳು, ಸ್ಟೇಜ್ ಕ್ಯಾರೇಜ್‌ಗಳು, ಕಾಂಟ್ರಾಕ್ಟ್ ಕ್ಯಾರೇಜ್‌ಗಳು ಮತ್ತು ಕಾರ್ಪೊರೇಟ್ ಬಸ್‌ಗಳು ಸೇರಿದಂತೆ ಸುಮಾರು 7 ರಿಂದ 10 ಲಕ್ಷ ವಾಹನಗಳು ನಾಳೆ ಕಾರ್ಯ ನಿರ್ವಹಿಸಲ್ಲ ಎಂದು ಫೆಡರೇಶನ್ ಅಧ್ಯಕ್ಷ ಎಸ್ ನಟರಾಜ್ ಶರ್ಮಾ ತಿಳಿಸಿದ್ದಾರೆ.

ರಾಜ್ಯ ಸರ್ಕಾರದಿಂದ ಹೆಚ್ಚುವರಿ ಬಸ್

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಂದ್‌ನಿಂದ ಆಗಲಿರುವ ಅನಾನುಕೂಲತೆ ನಿವಾರಿಸಲು ಕ್ರಮ ಕೈಗೊಳ್ಳುತ್ತಿದೆ. ಸೋಮವಾರ, ಬಿಎಂಟಿಸಿ ಬಸ್‌ಗಳ ಓಡಾಟ ಹೆಚ್ಚಿಸಲಿದ್ದಾರೆ. ನಗರದೊಳಗೆ ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೂಡ ಹೆಚ್ಚಿನ ಟ್ರಿಪ್‌ನಲ್ಲಿ ಬಸ್ ಓಡಿಸಲಾಗುತ್ತದೆ.

ಸಾರ್ವಜನಿಕರಿಗೆ ಯಾವುದೇ ಅಡೆತಡೆಗಳನ್ನು ಕಡಿಮೆ ಮಾಡಲು ಸರ್ಕಾರವು ಸಕ್ರಿಯವಾಗಿ ಸಿದ್ಧತೆ ನಡೆಸುತ್ತಿದೆ. ಸಾರ್ವಜನಿಕರು ಮತ್ತು ಶಾಲಾ ಮಕ್ಕಳ ಸುರಕ್ಷತೆ ಮತ್ತು ಅನುಕೂಲತೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೆಚ್ಚುವರಿಯಾಗಿ, ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಆಸ್ಪತ್ರೆಗಳ ಬಳಿ ಹೆಚ್ಚುವರಿ ಬಸ್‌ಗಳಿಗೆ ವ್ಯವಸ್ಥೆ ಮಾಡಲಾಗಿದೆ.

ವಿಶೇಷ ಸೂಚನೆ ನೀಡಿದ ವಿಮಾನ ನಿಲ್ದಾಣ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೂಡ ಈ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡಿದ್ದು, ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವಂತೆ ಮನವಿ ಮಾಡಿದೆ. ಕ್ಯಾಬ್, ಟ್ಯಾಕ್ಸಿಗಳು ಇರದ ಕಾರಣ, ಸ್ವಂತ ವಾಹನ ಅಥವಾ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸಬಹುದಾಗಿದೆ. ವಿಮಾನ ನಿಲ್ದಾಣಕ್ಕೆ ವಾಯು ವಜ್ರ ಬಸ್‌ಗಳ ಓಡಾಟ ಹೆಚ್ಚಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಂದ್ ಮಾಡುತ್ತಿರುವುದು ಯಾಕೆ?

ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಈ ಬಂದ್ ಮಾಡಲಾಗುತ್ತಿದೆ. ಮುಖ್ಯವಾಗಿ ಬೈಕ್ ಟ್ಯಾಕ್ಸಿ ನಿಷೇಧಿಸುವುದು ಮತ್ತು ರಾಜ್ಯ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣವನ್ನು ಒದಗಿಸುವ ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸಬೇಕೆಂದು ಒತ್ತಾಯ ಮಾಡಲಾಗಿದೆ.

ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆ ಜಾರಿಗೆ ಬಂದಾಗಿನಿಂದ ಸಾರಿಗೆ ಉದ್ಯಮದ ಖಾಸಗಿ ಉದ್ಯಮಿಗಳು ಈ ಯೋಜನೆಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಲಾಗಿದೆ. ಬಂದ್‌ನ ಅಂಗವಾಗಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಫ್ರೀಡಂ ಪಾರ್ಕ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಫೆಡರೇಶನ್‌ನ ಪದಾಧಿಕಾರಿಗಳು ಹೇಳಿದ್ದಾರೆ.

ಏನೆಲ್ಲಾ ಇರುತ್ತೆ, ಏನೆಲ್ಲಾ ಇರಲ್ಲ?

ಆಂಬ್ಯುಲೆನ್ಸ್‌ಗಳು ಮತ್ತು ಔಷಧೀಯ ಸಾರಿಗೆಯಂತಹ ತುರ್ತು ಸೇವಾ ವಾಹನಗಳು, ಅಗತ್ಯ ಸರಕುಗಳ ವಾಹಕಗಳು ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸುತ್ತವೆ. ಆಹಾರ, ದಿನಸಿ ಮತ್ತು ಇತರ ದೈನಂದಿನ ಅಗತ್ಯ ಸಾರಿಗೆ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.

ಬಿಎಂಟಿಸಿ ಬಸ್‌ಗಳು ಮತ್ತು ಮೆಟ್ರೋ ರೈಲುಗಳು ಸೇರಿದಂತೆ ಸಾರ್ವಜನಿಕ ಸಾರಿಗೆ ಸೇವೆಗಳು ಯಾವುದೇ ಅಡೆತಡೆಗಳಿಲ್ಲದೆ ಕಾರ್ಯನಿರ್ವಹಿಸುತ್ತವೆ. ಹೆಚ್ಚುವರಿಯಾಗಿ, ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಸೋಮವಾರ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲು ಬಿಎಂಟಿಸಿ ಸಿದ್ಧತೆಗಳನ್ನು ನಡೆಸುತ್ತಿದೆ.

ಆದಾಗ್ಯೂ, ಖಾಸಗಿ ಆಧಾರಿತ ಸಾರಿಗೆ ಸೇವೆಗಳಾದ ಏರ್‌ಪೋರ್ಟ್ ಟ್ಯಾಕ್ಸಿಗಳು, ಓಲಾ, ಉಬರ್, ಇತರ ಕ್ಯಾಬ್ ಸೇವೆಗಳು, ಆಟೋರಿಕ್ಷಾಗಳು ಮತ್ತು ಖಾಸಗಿ ಬಸ್‌ಗಳು ಸೋಮವಾರ ಲಭ್ಯವಿರುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+