ಬೆಂಗಳೂರಿನ ಅಪೋಲೊ ಆಸ್ಪತ್ರೆ ಸರ್ಕಾರದ ವಶಕ್ಕೆ
ಬೆಂಗಳೂರು, ಮಾ. 22 : ಜಮೀನು ಮಂಜೂರಾತಿ ಷರತ್ತು ಉಲ್ಲಂಘನೆ ಮಾಡಿದ ಬನ್ನೇರುಘಟ್ಟ ರಸ್ತೆಯಲ್ಲಿನ ಅಪೋಲೊ ಆಸ್ಪತ್ರೆಯನ್ನು ಸರ್ಕಾರ ತನ್ನ ವಶಕ್ಕೆ ಪಡೆದುಕೊಂಡಿದೆ. ಮೂರು ತಿಂಗಳಿನಲ್ಲಿ ಈ ಸ್ಥಳವನ್ನು ಆಸ್ಪತ್ರೆಯವರು ತೆರವುಗೊಳಿಸಬೇಕಾಗಿದೆ.
ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ. ಶಂಕರ್ ಅವರು ಶುಕ್ರವಾರ ಜಮೀನು ಮಂಜೂರಾತಿ ಷರತ್ತು ಉಲ್ಲಂಘಿಸಿದ ಬನ್ನೇರುಘಟ್ಟ ರಸ್ತೆಯಲ್ಲಿನ ಅಪೋಲೊ ಆಸ್ಪತ್ರೆಯನ್ನು ವಶಕ್ಕೆ ಪಡೆದುಕೊಂಡರು. ಶನಿವಾರದಿಂದ ಒಳರೋಗಿಗಳನ್ನು ದಾಖಲಿಸಿಕೊಳ್ಳುವಂತಿಲ್ಲ ಎಂದು ಆಸ್ಪತ್ರೆಗೆ ಸೂಚನೆ ನೀಡಿದರು. [ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಲು ಸಿಎಂ ಆದೇಶ]
ಸದ್ಯ, ಆಸ್ಪತ್ರೆ ಇರುವ ಜಮೀನಿನ ಮೌಲ್ಯ 375 ಕೋಟಿ. ಆಸ್ಪತ್ರೆ ಕಟ್ಟಡದ ಮೌಲ್ಯ 100 ಕೋಟಿ ಎಂದು ಅಂದಾಜಿಸಲಾಗಿದೆ. ಜಮೀನು ಮತ್ತು ಕಟ್ಟಡವನ್ನು ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಗೆ ಹಸ್ತಾಂತರ ಮಾಡಲಾಗುತ್ತದೆ. ಆದ್ದರಿಂದ ಮೂರು ತಿಂಗಳಿನಲ್ಲಿ ಅಪೋಲೊ ಈ ಕಟ್ಟಡವನ್ನು ಖಾಲಿ ಮಾಡಬೇಕು.

ಏಕೆ ಸರ್ಕಾರದ ವಶಕ್ಕೆ : ಹೈದರಾಬಾದ್ ಮೂಲದ ಡಾ.ಸೈಯದ್ ನಿಸಾರ್ ಅವರು ಇಂಪೀರಿಯಲ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ತೆರೆಯಲು 10 ರಿಂದ 15 ಎಕರೆ ಜಮೀನು ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. 1991ರಲ್ಲಿ ಸರ್ಕಾರ ಬೆಂಗಳೂರು ದಕ್ಷಿಣ ತಾಲೂಕಿನ ಬಿಳೇಕಹಳ್ಳಿಯ ಸರ್ವೆ ನಂಬರ್ 154/11ರ ಐದು ಎಕರೆ ಭೂಮಿಯನ್ನು ಪ್ರತಿ ಎಕರೆಗೆ ರೂ. 2 ಲಕ್ಷದಂತೆ ಮಂಜೂರು ಮಾಡಿತ್ತು. [ಅಕ್ರಮ-ಸಕ್ರಮ ಇದು ನಿಮಗೆ ತಿಳಿದಿರಲಿ]
ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ ಹೊರತುಪಡಿಸಿ ಬೇರೆ ಉದ್ದೇಶಕ್ಕೆ ಬಳಸಬಾರದು, ಗುತ್ತಿಗೆ ನೀಡಬಾರದು ಎಂಬ ಷರತ್ತು ವಿಧಿಸಲಾಗಿತ್ತು. ಆದರೆ, ಡಾ.ಸೈಯದ್ ನಿಸಾರ್ ಅವರು ಅಪೋಲೊ ಆಸ್ಪತ್ರೆಗೆ ಜಮೀನನ್ನು ಗುತ್ತಿಗೆ ನೀಡಿದ್ದರು. ನಿವೃತ್ತ ಐಎಎಸ್ ಅಧಿಕಾರಿ ವಿ. ಬಾಲಸುಬ್ರಮಣಿಯನ್ ನೇತೃತ್ವದ ಸರ್ಕಾರಿ ಜಮೀನು ಸಂರಕ್ಷಣಾ ಕಾರ್ಯಪಡೆ ಇದನ್ನು ಪತ್ತೆ ಹಚ್ಚಿತ್ತು.
ಷರತ್ತನ್ನು ಉಲ್ಲಂಘನೆ ಮಾಡಿರುವ ಹಿನ್ನಲೆಯಲ್ಲಿ ಸರ್ಕಾರ ಈ ಜಮೀನನ್ನು ತನ್ನ ವಶಕ್ಕೆ ಪಡೆದಿದೆ. ಜಮೀನಿನಲ್ಲಿ ನಿರ್ಮಾಣ ವಾಗಿರುವ ಆಸ್ಪತ್ರೆಯನ್ನು ಮೂರು ತಿಂಗಳಿನಲ್ಲಿ ತೆರವುಗೊಳಿಸಬೇಕು ಎಂದು ಸೂಚನೆ ನೀಡಿದೆ. ಆದ್ದರಿಂದ ಶನಿವಾರದಿಂದಲೇ ರೋಗಿಗಳನ್ನು ದಾಖಲು ಮಾಡಿಕೊಳ್ಳುವಂತಿಲ್ಲ, ಈಗ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಮೂರು ತಿಂಗಳಿನಲ್ಲಿ ಚಿಕಿತ್ಸೆ ನೀಡಬೇಕು.












Click it and Unblock the Notifications