ವಿಮಾನ ನಿಲ್ದಾಣದಲ್ಲಿ ಇನ್ನು ಮುಂದೆ ಮದುವೆ, ಕಾರ್ಯಕ್ರಮಗಳು
ಬೆಂಗಳೂರು, ಜುಲೈ 31 : ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇನ್ನು ಮುಂದೆ ಸಾಂಸ್ಕೃತಿಕ, ಕುಟುಂಬದ ಕಾರ್ಯಕ್ರಮಗಳು ನಡೆಯಲಿವೆ. 6.3 ಎಕರೆ ಜಾಗದಲ್ಲಿ ಕಾರ್ಯಕ್ರಮಗಳಿಗಾಗಿಯೇ ವಿಶೇಷ ಸ್ಥಳವನ್ನು ನಿರ್ಮಾಣ ಮಾಡಲಾಗುತ್ತಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಿಸ್ತರಣೆಗೆ 13 ಸಾವಿರ ಕೋಟಿ ವೆಚ್ಚದ ಯೋಜನೆ ಸಿದ್ಧವಾಗಿದೆ. ಇದರ ಭಾಗವಾಗಿ ಸಂಗೀತ ಕಾರ್ಯಕ್ರಮ, ಮದುವೆ, ಸಿನಿಮಾ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಸುವಂತಹ ಸ್ಥಳ ನಿರ್ಮಿಸಲಾಗುತ್ತಿದೆ.
ವಿಮಾನ ನಿಲ್ದಾಣದ ಆವರಣದಲ್ಲಿಯೇ ಇಂತಹ ಸ್ಥಳ ನಿರ್ಮಾಣವಾಗಲಿದೆ. ಸುಮಾರು 9 ಸಾವಿರ ಜನರು ಸೇರಬಹುದಾದ ಹಾಲ್ ನಿರ್ಮಾಣವಾಗಲಿದೆ. ಇದಕ್ಕಾಗಿಯೇ 6.3 ಎಕರೆ ಜಾಗವನ್ನು ನಿಗದಿ ಮಾಡಲಾಗಿದೆ.

ವಿಮಾನ ನಿಲ್ದಾಣದ ವಿಸ್ತರಣೆ ಭಾಗವಾಗಿ ಹೊಸ ಟರ್ಮಿನಲ್, ರಸ್ತೆಗಳ ವಿಸ್ತರಣೆ, ಮೆಟ್ರೋ ಸಂಪರ್ಕ, ಕಾರ್ಗೋ ಬೇಸ್ ಸ್ಥಾಪನೆ ಸೇರಿದಂತೆ ವಿವಿಧ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಇದರ ಭಾಗವಾಗಿಯೇ ವಿಶೇಷ ಹಾಲ್ ನಿರ್ಮಾಣವಾಗುತ್ತಿದೆ.
ಬೆಂಗಳೂರು ವಿಮಾನ ನಿಲ್ದಾಣ ದಕ್ಷಿಣ ಭಾರತದಲ್ಲಿಯೇ ಹೆಚ್ಚು ಪ್ರಯಾಣಿಕರ ದಟ್ಟಣೆ ಇರುವ ನಿಲ್ದಾಣ, ದೇಶದಲ್ಲಿಯೇ 3ನೇ ದೊಡ್ಡ ನಿಲ್ದಾಣವಾಗಿದೆ. 33.3 ಮಿಲಿಯನ್ ಪ್ರಯಾಣಿಕರು 2018-19ರಲ್ಲಿ ಭೇಟಿ ನೀಡಿದ್ದಾರೆ.
2008ರ ಮೇ ನಲ್ಲಿ ಆರಂಭಗೊಂಡ ಬೆಂಗಳೂರು ವಿಮಾನ ನಿಲ್ದಾಣದಿಂದ 37 ವಿವಿಧ ಕಂಪನಿಗಳ ವಿಮಾನಗಳು ಹಾರಾಟ ನಡೆಸುತ್ತಿವೆ. 12 ಕಾರ್ಗೊ ಕಂಪನಿಗಳ ವಿಮಾನಗಳು ವಿಶ್ವದ ಇತರ ನಗರಗಳನ್ನು ಸಂಪರ್ಕಿಸುತ್ತವೆ.












Click it and Unblock the Notifications