ಬೆಂಗಳೂರು ಏರ್ ಶೋ 2025: ತಪ್ಪು ಆದೇಶ ಮಾಡಿ ಎಡವಟ್ಟು ಮಾಡಿಕೊಂಡ ಬಿಬಿಎಂಪಿ!
ಬೆಂಗಳೂರಿನಲ್ಲಿ ನಡೆಯುವ ವಿಶ್ವ ವಿಖ್ಯಾತ ಏರ್‌ಶೋ 2025ಕ್ಕೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ವಿವಾದಾತ್ಮಕ ಆದೇಶವೊಂದನ್ನು ಹೊರಡಿಸಿದ್ದು ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಬಿಬಿಎಂಪಿ ಒಂದಿಲ್ಲೊಂದು ವಿಷಯದಲ್ಲಿ ಎಡವಟ್ಟುಗಳನ್ನು ಮಾಡಿಕೊಂಡು ಜನರಿಂದ ನಗೆಪಾಟಲಿಗೆ ಗುರಿಯಾಗುವುದು ಇದೆ. ಅದೇ ರೀತಿ ಈ ಬಾರಿ ಬೆಂಗಳೂರಿನ ಯಲಹಂಕದಲ್ಲಿ ಪ್ರತಿ ವರ್ಷ ನಡೆಯುವ ಏರ್‌ಶೋಗೆ ಸಂಬಂಧಿಸಿದಂತೆ ಇಂತಹದ್ದೇ ಒಂದು ಆದೇಶವನ್ನು ಮಾಡಿದೆ. ಇದೀಗ ಈ ಆದೇಶವನ್ನು ಹಿಂಪಡೆಯುವುದಾಗಿ ಹೇಳಿದೆ. ಬೆಂಗಳೂರಿನಲ್ಲಿ ಹೋಟೆಲ್ ಹಾಗೂ ಬಾರ್ ಉದ್ಯಮಕ್ಕೆ ಪೆಟ್ಟಾಗುವಂತಹ ಆದೇಶವನ್ನು ಬಿಬಿಎಂಪಿ ಮಾಡಿತ್ತು. ಇದರಿಂದ ಬೆಂಗಳೂರಿನಲ್ಲಿ ಅಂದಾಜು 250 ಕೋಟಿ ರೂ. ಹೆಚ್ಚು ಮೊತ್ತದ ನಷ್ಟವುಂಟಾಗುವ ಆತಂಕ ಎದುರಾಗಿತ್ತು. ಕೊನೆಗೂ ಈ ತಪ್ಪನ್ನು ಬಿಬಿಎಂಪಿ ತಿದ್ದುಕೊಂಡಿದೆ.
ಬೆಂಗಳೂರಿನಲ್ಲಿ ಪ್ರತಿ ವರ್ಷ ಆಯೋಜಿಸುವ ಏರ್ ಶೋನಿಂದಲೇ ಬೆಂಗಳೂರು ಮತ್ತು ವಾಯುಸೇನೆಗೆ ಕೋಟ್ಯಾಂತರ ರೂ. ಆದಾಯ ಬರುತ್ತದೆ. ಯಲಹಂಕದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ದೇಶ ವಿದೇಶಗಳಿಂದ ಸಾವಿರಾರು ಜನ ಬರುತ್ತಾರೆ. ಏರ್ ಶೋ ಟಿಕೆಟ್, ಪ್ರವಾಸೋದ್ಯಮ ಹಾಗೂ ವಿಮಾನಯಾನ ಕ್ಷೇತ್ರಕ್ಕೆ ಇದರಿಂದ ಒಳ್ಳೆಯ ಆದಾಯ ಬರುತ್ತದೆ. ಇಂತಹ ಕಾರ್ಯಕ್ರಮದಲ್ಲಿ ಬಿಬಿಎಂಪಿ ಎಡವಟ್ಟು ಮಾಡಿಕೊಂಡಿದೆ.

ಬಿಬಿಎಂಪಿ ಆದೇಶದಿಂದ ಎಡವಟ್ಟು: ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 10ರಿಂದ ಫೆಬ್ರವರಿ 14ರವರೆಗೆ ಅಂತರರಾಷ್ಟ್ರೀಯ ಏರ್ ಶೋ ನಡೆಯಲಿದೆ. ಸಾಮಾನ್ಯವಾಗಿ ಏರ್ ಶೋ ನಡೆಯುವ ಸಂದರ್ಭದಲ್ಲಿ ಯಲಹಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾಂಸ ಮಾರಾಟವನ್ನು ನಿಷೇಧ ಮಾಡಲಾಗುತ್ತದೆ. ಕನಿಷ್ಠ ಒಂದು ವಾರ ಅಥವಾ ಎರಡು ವಾರದ ಅವಧಿಗೆ ಮಾಂಸ ಮಾರಾಟ ನಿಷೇಧ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಬಿಬಿಎಂಪಿಯು ಏರ್ ಶೋ 2025ರ ಹಿನ್ನೆಲೆಯಲ್ಲಿ ಯಲಹಂಕ ವಲಯದ ಏರ್‌ಪೋರ್ಸ್ ಸ್ಟೇಷನ್‌ನಿಂದ 13 ಕಿ.ಮೀ ವ್ಯಾಪ್ತಿಗೆ ಒಳಪಡುವ ಎಲ್ಲಾ ಮಾಂಸ ಮಾರಾಟದ ಉದ್ಯಮಗಳನ್ನು ಮುಚ್ಚುವುದಕ್ಕೆ ಸೂಚಿಸಿರುವುದಾಗಿ ಆದೇಶ ಮಾಡಿದೆ. ಅಲ್ಲದೆ ಈ ಭಾಗದ ಹೋಟೆಲ್ ಹಾಗೂ ಡಾಬಾಗಳಲ್ಲಿ ಸಹ ಮಾಂಸಾಹಾರ ತಯಾರಿಸುವುದು ಮತ್ತು ಮಾರಾಟ ಮಾಡುವುದನ್ನು ಸಹ ನಿಷೇಧಿಸಲಾಗಿದೆ ಎಂದು ಹೇಳಿತ್ತು. ಈ ಆದೇಶವು ಭಾರೀ ಆಕ್ರೋಶ ಹಾಗೂ ಅಸಮಾಧಾನಕ್ಕೆ ಕಾರಣವಾಗಿತ್ತು.
ಏರ್ ಶೋ ಇರುವ ಹಿನ್ನೆಲೆಯಲ್ಲಿ ಜನವರಿ 23 ರಿಂದ ಫೆಬ್ರವರಿ 17ರವರೆಗೆ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಯಲಹಂಕ ವಲಯ ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿನ್ ಅವರು ಆದೇಶ ಮಾಡಿದ್ದರು. ಅದನ್ನು ಇದೀಗ ಹಿಂಪಡೆಯುವುದಾಗಿ ಹೇಳಿದ್ದಾರೆ.
ಜನವರಿ 23ರಿಂದ ಫೆಬ್ರವರಿ 17ರವರೆಗೆ ಎಲ್ಲಾ ಮಾಂಸಾಹಾರ ಮಾರಾಟ ಉದ್ದಿಮೆಗಳನ್ನು ಮುಚ್ಚಲು ಸೂಚನೆ ನೀಡಲಾಗಿದೆ. ಈ ನಿಯಮವನ್ನು ಯಾರಾದರೂ ಉಲ್ಲಂಘನೆ ಮಾಡಿದರೆ, ಬಿಬಿಎಂಪಿ ಕಾಯ್ದೆ 2020 ಮತ್ತು ಏರ್ ಕ್ರಾಫ್ಟ್ ರೂಲ್ಸ್ 1937 ರ ರೂಲ್ 91 ಅನ್ವಯ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ಹೇಳಿತ್ತು.
ಆದೇಶ ಹಿಂಪಡೆದ ಬಿಬಿಎಂಪಿ: ಬಿಬಿಎಂಪಿಯು ಯಲಹಂಕದಲ್ಲಿ ಹೋಟೆಲ್ ಹಾಗೂ ಡಾಬಾಗಳಲ್ಲಿ ಸಹ ಮಾಂಸಾಹಾರ ತಯಾರಿಸುವುದು ಮತ್ತು ಮಾರಾಟ ಮಾಡುವುದನ್ನು ಸಹ ನಿಷೇಧಿಸಲಾಗಿದೆ ಎನ್ನುವ ಆದೇಶವನ್ನು ಹಿಂಪಡೆಯುವುದಾಗಿ ಹೇಳಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಆದೇಶವನ್ನು ಮಾಡಿಲ್ಲ. ಬಿಬಿಎಂಪಿಯು ಈ ಹಿಂದೆ ಮಾಡಿದ್ದ ಆದೇಶದಲ್ಲಿ ಇದು ತಪ್ಪಾಗಿದೆ. ಹೋಟೆಲ್‌ಗಳಿಗೆ ಇದು ಅನ್ವಯವಾಗುವುದಿಲ್ಲ. ಈ ಸಂಬಂಧ ಪರಿಷ್ಕೃತ ಆದೇಶವನ್ನು ಬಿಬಿಎಂಪಿಯಿಂದ ಹೊರಡಿಸಲಾಗುವುದು ಎಂದು ಬಿಬಿಎಂಪಿಯ ಯಲಹಂಕ ವಲಯ ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿನ್ ಅವರು Oneindia Kannadaಕ್ಕೆ ತಿಳಿಸಿದ್ದಾರೆ. ಇನ್ನು ಬಿಬಿಎಂಪಿಯು ಈ ನಿಯಮವನ್ನು ಮಾಂಸ ಮಾರಾಟ / ಕಸಾಯಿಖಾನೆಗಳಿಗೆ ಮಾತ್ರ ಅನ್ವಯವಾಗಲಿದೆ ಎಂದಿದ್ದಾರೆ.
ಆದೇಶ ಹಿಂಪಡೆದರೆ ಸಂತೋಷ: ಇನ್ನು ಬಿಬಿಎಂಪಿಯ ಹೊಸ ಆದೇಶದಿಂದ ನಮಗೆ ಕೋಟ್ಯಾಂತರ ರೂಪಾಯಿ ನಷ್ಟವಾಗುವ ಆತಂಕ ಎದುರಾಗಿತ್ತು. ಯಲಹಂಕ ವ್ಯಾಪ್ತಿಯಲ್ಲಿ ಅಂದಾಜು 5000 ಸಾವಿರಕ್ಕೂ ಹೆಚ್ಚು ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಪಬ್ ಸೇರಿದಂತೆ ಹಲವು ಹೋಟೆಲ್ ಉದ್ಯಮಗಳು ಇವೆ. ಮಾಂಸಾಹಾರ ನಿಷೇಧ ಹಿಂಪಡೆದರೆ ಸ್ವಾಗತ ಎಂದು ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ (BBHA) ಅಧ್ಯಕ್ಷ ಪಿಸಿ ರಾವ್ ಅವರು ಹೇಳಿದ್ದಾರೆ.
ಅಧಿಕೃತ ಆದೇಶ ಬಾಕಿ: ಇನ್ನು ಬಿಬಿಎಂಪಿಯು ಆದೇಶವನ್ನು ಹಿಂಪಡೆಯುವುದಾಗಿ ಹೇಳಿದೆ. ಆದರೆ ಈ ನಿಟ್ಟಿನಲ್ಲಿ ಯಾವುದೇ ಅಧಿಕೃತ ಆದೇಶವನ್ನು ಮಾಡಿಲ್ಲ.












Click it and Unblock the Notifications