Bengaluru Air Quality: ಈ ಕಾರಣಕ್ಕೆ ಬೆಂಗಳೂರಿನ ಗಾಳಿಯ ಗುಣಮಟ್ಟ ಕಳೆದ ವರ್ಷಕ್ಕಿಂತ ಉತ್ತಮ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯುಐ) ಈ ಬಾರಿ ಉತ್ತಮವಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ತಿಳಿಸಿದೆ. ಕಳೆದ ವರ್ಷದ ದೀಪಾವಳಿಗೆ ಹೋಲಿಸಿದರೆ ಈ ಬಾರಿ ನಗರದ ವಾಯು ಗುಣಮಟ್ಟ ಸೂಚ್ಯಂಕ ಕಳೆದ ಶೇ 98ರಷ್ಟು ಉತ್ತಮವಾಗಿದೆ. ಸಾಮಾನ್ಯ ದಿನಕ್ಕಿಂತ ಶೇ 7ರಷ್ಟು ಕಡಿಮೆಯಾಗಿದೆ ಎಂದು ಮಂಡಳಿ ಹೇಳಿದೆ. ಸಾಮಾನ್ಯವಾಗಿ ದೀಪಾವಳಿ ಸಂದರ್ಭದಲ್ಲಿ ಗಾಳಿಯ ಗುಣಮಟ್ಟ ಹದಗೆಡುತ್ತಿತ್ತು. ಆದರೆ ಈ ಬಾರಿ ಉತ್ತಮವಾಗಿರುವುದು ಅಚ್ಚರಿಯ ಬೆಳವಣಿಗೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಶಬ್ಧ ಮಾಲಿನ್ಯವು ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಾಗಿದೆ.
ಈ ವರ್ಷ ದೀಪಾವಳಿಯ ಎರಡನೇ ದಿನದಂದು ಬೆಂಗಳೂರಿನಲ್ಲಿ ಶುದ್ಧ ಗಾಳಿ ಕಂಡುಬಂದಿದ್ದು, ವಾಯು ಗುಣಮಟ್ಟ ಸೂಚ್ಯಂಕವು ಹಿಂದಿನ ವರ್ಷಗಳಿಗಿಂತ ಸುಧಾರಿಸಿದೆ. ಕಳೆದ ವರ್ಷದ ದೀಪಾವಳಿಯ ಅದೇ ದಿನಕ್ಕಿಂತ ನಗರದ ಎಕ್ಯುಐ ಶೇ 98ರಷ್ಟು ಉತ್ತಮವಾಗಿದೆ. ನಗರದಲ್ಲಿ ಸಾಮಾನ್ಯವಾಗಿ ಸರಾಸರಿ ದಿನದಂದು ದಾಖಲಾಗುವ ಪ್ರಮಾಣಕ್ಕಿಂತ ಶೇ 7ರಷ್ಟು ಕಡಿಮೆಯಾಗಿದೆ ಎಂದು ಮಂಡಳಿ ಹೇಳಿದೆ.

ನಗರದ ಮೆಜೆಸ್ಟಿಕ್ ಬಳಿ (104) ಹಾಗೂ ಮೈಸೂರು ರಸ್ತೆಯಲ್ಲಿರುವ (109) ಗಾಳಿಯ ಗುಣಮಟ್ಟ ಮೇಲ್ವಿಚಾರಣಾ ಕೇಂದ್ರಗಳು ಸೂಚ್ಯಂಕವನ್ನು ವರದಿ ಮಾಡಿದ್ದವು. ಕಳೆದ ವರ್ಷ ದೀಪಾವಳಿಯ ಮೊದಲ ದಿನದಂದು ಹೆಬ್ಬಾಳದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 263ರಷ್ಟಿತ್ತು. ಹೊಂಬೇಗೌಡ ನಗರ 121, ಸಿಲ್ಕ್ ಬೋರ್ಡ್ ಜಂಕ್ಷನ್ 170, ಮೈಸೂರು ರಸ್ತೆ 122 ಮತ್ತು ಜಯನಗರ 136 ತಲುಪಿತ್ತು ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಸಾಮಾನ್ಯವಾಗಿ ಈ ವಾಯು ಗುಣಮಟ್ಟ ಸೂಚ್ಯಂಕವು 100ಕ್ಕಿಂತ ಹೆಚ್ಚು ತಲುಪಿದರೆ ಅದು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಶ್ವಾಸಕೋಶ ಅಥವಾ ಹೃದಯ ಕಾಯಿಲೆ ಇರುವ ವ್ಯಕ್ತಿಗಳಲ್ಲಿ, ಮಕ್ಕಳು ಮತ್ತು ವೃದ್ಧರಲ್ಲಿ ಉಸಿರಾಟದ ತೊಂದರೆ ಕೂಡ ಅನುಭವಿಸುತ್ತಾರೆ ಎಂದು ತಜ್ಞರು ಹೇಳುತ್ತಾರೆ. ದೀಪಾವಳಿಗೂ ಮೊದಲು ಹೋಲಿಸಿದರೆ ಪೀಣ್ಯದಲ್ಲಿ ವಾಯು ಮಾಲಿನ್ಯವು ಶೇಕಡಾ 52ರಷ್ಟು ಹೆಚ್ಚಾಗಿದೆ. ಇದಕ್ಕೆ ವಿರುದ್ಧವಾಗಿ ಮೈಸೂರು ರೋಡ್, ಹೊಂಬೇಗೌಡ ನಗರ, ಜಯನಗರ, ಹೆಬ್ಬಾಳ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ವಾಯು ಗುಣಮಟ್ಟ ಸೂಚಕ ಸುಧಾರಿಸಿದೆ.
ಕಾರಣವೇನು?
ಬೆಂಗಳೂರಿನಲ್ಲಿ ಬೇರೆ ಊರುಗಳಿಂದ ಬಂದು ನೆಲೆಸಿದ್ದವರು ದೀಪಾವಳಿಗಾಗಿ ನಗರವನ್ನು ತೊರೆದಿದ್ದರು. ಹೀಗಾಗಿ ಟ್ರಾಫಿಕ್ ಜಾಮ್ ಕೂಡ ಕಡಿಮೆಯಾಗಿ ಗಾಳಿಯ ಗುಣಮಟ್ಟ ಸುಧಾರಿಸಿದೆ ಎಂದು ತಿಳಿದುಬಂದಿದೆ. ಕೆಲವರು ದೀಪಾವಳಿ ಅಂಗವಾಗಿ ಪಟಾಕಿ ಸಿಡಿಸಿದ್ದರಿಂದ ವಾಯುಮಾಲಿನ್ಯದ ಮಟ್ಟ ತುಸು ಏರಿಕೆ ಕಂಡಿತು. ದೀಪಾವಳಿ ಇದ್ದಿದ್ದರಿಂದ ಕಳೆದ ಶನಿವಾರದಿಂದಲೇ ಬೆಂಗಳೂರು ಖಾಲಿ ಖಾಲಿ ಹೊಡೆಯುತ್ತಿದೆ. ಹೊರ ಜಿಲ್ಲೆ, ಹೊರ ರಾಜ್ಯದ ಮಂದಿಯೆಲ್ಲ ಬೆಂಗಳೂರು ಬಿಟ್ಟು ಹೋಗಿದ್ದಾರೆ. ಇದರಿಂದಾಗಿ ನಗರ ಕೂಡ ಶಾಂತವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ನೆಮ್ದಿಯಾಗಿರುವ ಬೆಂಗಳೂರಿನ ವಿಡಿಯೋಗಳು ವೈರಲ್ ಆಗಿವೆ.












Click it and Unblock the Notifications