ಬೆಂಗಳೂರು: 'ಜೋಡಿ ಕೊಲೆ' ಪ್ರಕರಣಕ್ಕೆ ಭರ್ಜರಿ ಟ್ವಿಸ್ಟ್
ಬೆಂಗಳೂರು, ಫೆಬ್ರವರಿ 12: ನಗರದ ರಾಜಗೋಪಾಲನಗರ ಹೆಗ್ಗನಹಳ್ಳಿಯಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ ಸಖತ್ ಟ್ವಿಸ್ಟ್ ಸಿಕ್ಕಿದೆ.
ಹೆಗ್ಗನಹಳ್ಳಿಯ ಎಂಟನೇ ಕ್ರಾಸ್‌ನಲ್ಲಿ ಬಹುಮಹಡಿ ಕಟ್ಟಡದಲ್ಲಿ ಎರಡು ಶವಗಳು ಪತ್ತೆಯಾಗಿದ್ದವು. ಲಕ್ಷ್ಮಿ ಎಂಬಾಕೆ ಕೊಲೆಯಾಗಿದ್ದರೆ, ರಂಗದಾಮಯ್ಯ ರಂಬಾತನ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇಷ್ಟೆ ಅಲ್ಲದೆ ಕೊಲೆಯಾದ ಲಕ್ಷ್ಮಿಯ ಪತಿ ಶಿವರಾಜ್‌ಗೆ ಚಾಕು ಇರಿಯಲಾಗಿತ್ತು, ಲಕ್ಷ್ಮಿ ಮಗಳ ಮೇಲೂ ಹಲ್ಲೆ ಮಾಡಿ ಪ್ರಜ್ಞೆ ತಪ್ಪಿಸಲಾಗಿತ್ತು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮೊದಲಿಗೆ ಲಕ್ಷ್ಮಿ ಪತಿಯೇ ಆರೋಪಿ ಎಂದುಕೊಂಡಿದ್ದರು. ಕೊಲೆಯಾದ ಲಕ್ಷ್ಮಿ ಪತಿ ಹಾಗೂ ಮಗಳು ಆಸ್ಪತ್ರೆಯಲ್ಲಿದ್ದ ಕಾರಣ ಘಟನೆಯ ಪೂರ್ಣ ಮಾಹಿತಿ ಇರಲಿಲ್ಲ. ಆದರೆ ಈ ಡಬಲ್ ಡೆಡ್ ಬಾಡಿ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದ್ದು, ಬಹುಮಹಡಿ ಕಟ್ಟಡದಲ್ಲಿ ವಾಸವಾಗಿದ್ದ ರಂಗದಾಮಯ್ಯನೇ ಕೊಲೆ ಮಾಡಿದ್ದಾನೆ ಎನ್ನುವುದು ಬೆಳಕಿಗೆ ಬಂದಿದೆ. ಕೊಲೆ ಮಾಡಿ ನಂತರ ಹೋಗಿ ನೇಣಿಗೆ ಶರಣಾಗಿದ್ದಾನೆ.

ಗಾರ್ಮೆಂಟ್ಸ್ ಉದ್ಯೋಗಿ ಲಕ್ಷ್ಮಿಯೊಂದಿಗೆ ಸಲುಗೆ ಹೊಂದಿದ್ದ ಆರೋಪಿ
ಕೊಲೆಯಾದ ಲಕ್ಷ್ಮಿ, ಗಾರ್ಮೆಂಟ್ಸ್ ಉದ್ಯೋಗಿ ಆಗಿದ್ದು, ಆಕೆಯ ಪತಿ ಶಿವರಾಜ್‌ಗೆ ಪಾರ್ಶ್ವವಾಯು ಇತ್ತು. ಮೊದಲ ಮಹಡಿಯಲ್ಲಿ ಬಾಡಿಗೆಗೆ ಇದ್ದ ರಂಗದಾಮಯ್ಯ ಲಕ್ಷ್ಮಿ ಬಳಿ ಸಲುಗೆಯಿಂದ ಇದ್ದ. ಇದು ಶಿವರಾಜ್ ಗೆ ಸಣ್ಣ ಅಸಮಾಧಾನ ಉಂಟು ಮಾಡಿತ್ತು. ಇದೇ ಕಾರಣಕ್ಕೆ ಶಿವರಾಜ್ ನೇ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮೊದಲಿಗೆ ಅಂದುಕೊಂಡಿದ್ದರು. ಆದರೆ ಘಟನೆ ನಡೆದಿದ್ದೇ ಬೇರೆ.

ಲಕ್ಷ್ಮಿ ಮನೆಯಲ್ಲಿ ಚಿನ್ನಾಭರಣ ಕಳುವಾಗಿತ್ತು
ಲಕ್ಷ್ಮಿ ಮನೆಯಲ್ಲಿ ಹದಿನೈದು ದಿನದ ಹಿಂದೆ ಚಿನ್ನಾಭರಣಗಳು ಕಾಣೆ ಆಗಿದ್ದವು. ಈ ಸಂಬಂಧ ಲಕ್ಷ್ಮಿ ದೂರು ಸಹ ನೀಡಿದ್ದಳು. ರಂಗದಾಮಯ್ಯ ಮೇಲೆ ಅನುಮಾನ ಇರುವುದಾಗಿಯೂ ದೂರಿನಲ್ಲಿ ಉಲ್ಲೇಖಿಸಿದ್ದಳು.

ಚಿನ್ನಾಭರಣ ತಂದುಕೊಡುವುದಾಗಿ ಹೇಳಿದ್ದ ರಂಗದಾಮಯ್ಯ
ಈ ಘಟನೆ ನಂತರ ರಂಗದಾಮಯ್ಯ ತಾನು ಚಿನ್ನಾಭರಣ ತಂದುಕೊಡುವುದಾಗಿ ಹೇಳಿದ್ದ. ಅಂತೆಯೇ ನಿನ್ನೆ ಬೆಳಿಗ್ಗೆ ಲಕ್ಷ್ಮಿ ಮನೆಗೆ ಹೋಗಿದ್ದ ರಂಗದಾಮಯ್ಯ ಚಿನ್ನಾಭರಣ ವಿಷಯಕ್ಕೆ ಖ್ಯಾತೆ ತೆಗೆದ. ಲಕ್ಷ್ಮಿ ಹಾಗೂ ರಂಗದಾಮಯ್ಯ ನಡುವೆ ಮಾತಿನ ಚಕಮಕಿ ನಡೆಯಿತು.

ಹೊಡೆತಕ್ಕೆ ಲಕ್ಷ್ಮಿ ಪ್ರಾಣ ಬಿಟ್ಟಿದ್ದಾಳೆ
ಜಗಳ ತಾರಕಕ್ಕೇರಿದಾಗ ರಂಗದಾಮಯ್ಯ ಲಕ್ಷ್ಮಿ ಗೆ ಹೊಡೆದ, ಹೊಡೆತದ ತೀರ್ವತೆಗೆ ಲಕ್ಷ್ಮಿ ಅಲ್ಲಿಯೇ ಪ್ರಾಣ ಬಿಟ್ಟಿದ್ದಾಳೆ. ಸ್ಥಳದಲ್ಲಿಯೇ ಇದ್ದ ಪತಿ ಹಾಗೂ ಮಗಳು ರಂಗದಾಮಯ್ಯ ಮೇಲೆ ತಿರುಗಿಬಿದ್ದಿದ್ದಾರೆ. ಅವರನ್ನೂ ಕೊಂದು ಬಿಡುವ ನಿರ್ಧಾರದಿಂದ ರಂಗದಾಮಯ್ಯ ಶಿವರಾಜ್ ಮೇಲೆ ಮಚ್ಚು ಬೀಸಿದ್ದಾನೆ. ನಂತರ ಲಕ್ಷ್ಮಿಯ ಮಗಳ ಮೇಲೂ ತೀವ್ರ ಹಲ್ಲೆ ನಡೆಸಿದ್ದಾನೆ.

ಸತ್ತರೆಂದು ಭಾವಿಸಿದ ರಂಗದಾಮಯ್ಯ
ಶಿವರಾಜ್ ಮತ್ತು ಲಕ್ಷ್ಮಿ ಮಗಳು ಕೆಳಗೆ ಬೀಳುತ್ತಿದ್ದಂತೆ ಅವರೂ ಸತ್ತರೆಂದು ಎಣಿಸಿದ ರಂಗದಾಮಯ್ಯ, ಲಕ್ಷ್ಮಿ ಮನೆಯ ಬಾಗಿಲು ಹಾಕಿಕೊಂಡು ಮೊದಲನೇ ಮಹಡಿಯಲ್ಲಿದ್ದ ತನ್ನ ಮನೆಗೆ ಬಂದು ನೇಣಿಗೆ ಶರಣಾಗಿದ್ದಾನೆ.












Click it and Unblock the Notifications