ಸಮಾಜಕಲ್ಯಾಣ ಇಲಾಖೆಗೂ ಬಂತು 24/7 ಸಹಾಯವಾಣಿ
ಬೆಂಗಳೂರು, ಆಗಸ್ಟ್ 7: ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಮಾಹಿತಿ ಒದಗಿಸುವ ಹಾಗೂ ಕುಂದುಕೊರತೆಗಳನ್ನು ಸ್ವೀಕರಿಸುವ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಸಹಾಯವಾಣಿಯನ್ನು ಅಭಿವೃದ್ಧಿಪಡಿಸಿದ್ದು, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮಂಗಳವಾರ ಉದ್ಘಾಟಿಸಿದ್ದಾರೆ.
ಈ ಕೇಂದ್ರದ ಮೂಲಕ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪಂಗಡದವರು, ಸಮಾಜ ಕಲ್ಯಾಣ ಇಲಾಖೆ ನಿಗಮ ಮಂಡಳಿಗಳ ಕಾರ್ಯ ಚಟುವಟಿಕೆಗಳು ಹಾಗೂ ಯೋಜನೆಯ ಸಮಗ್ರ ಮಾಹಿತಿಯನ್ನು ಪಡದುಕೊಳ್ಳಬಹುದಾಗಿದೆ.
ಶೋಷಿತ ಜನಾಂಗದ ಅಭಿವೃದ್ಧಿ ಹಾಗೂ ಸಮುದಾಯದ ಹಿತ ಕಾಯುವ ಸಲುವಾಗಿ ಕಾರ್ಯ ನಿರ್ವಹಿಸುತ್ತಿರುವ ಸಮಾಜ ಕಲ್ಯಾಣ ಇಲಾಖೆಯಲ್ಲಿ ಶೋಷಣೆ ನಡೆಯಬಾರದೆಂದು ಈ ಕೇಂದ್ರವನ್ನು ಆರಂಭಿಸಲಾಗಿದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಬಗೆಗಿನ ಮಾಹಿತಿ, ಕಾರ್ಯ ನಿರ್ವಹಣೆ, ನ್ಯೂನತೆಗಳು ಹಾಗೂ ಕುಂದುಕೊರತೆಗಳನ್ನು ರಾಜ್ಯದ ಕೇಂದ್ರಕ್ಕೆ ತಿಳಿಸಬಹುದಾಗಿದೆ. ಇಲಾಖೆಯ ವಿವಿಧ ಯೋಜನೆಗಳ ಮಾಹಿತಿ ಬಯಸಿದರೆ ಶೀಘ್ರವೇ ನೀಡಲಾಗುತ್ತದೆ. ಮನವಿ ಸಲ್ಲಿಸದ ಕೂಡಲೇ ದೂರುದಾರರಿಗೆ ಒಂದು ಕ್ಷಿಪ್ರ ನೋಂದಣಿ ಸಂಖ್ಯೆಯನ್ನು ನೀಡಲಾಗುತ್ತದೆ.

ಅಧಿಕಾರಿಗಳು ದೂರುಗಳನ್ನು ಪರಿಹರಿಸದಿದ್ದಲ್ಲಿ ಅಹವಾಲನ್ನು ಸಂಬಂಧಿಸಿದ ಅಧಿಕಾರಿಗಳಿಗೆ ನೀಡಲಾಗುತ್ತದೆ. ಸಮಾಜ ಕಲ್ಯಾಣ ಇಲಾಖೆ ರಾಜ್ಯದಲ್ಲಿ ಸುಮಾರು 2500 ವಿದ್ಯಾರ್ಥಿ ನಿಲಯಗಳನ್ನು ನಡೆಸುತ್ತಿದ್ದು, ಈ ವಸತಿ ನಿಲಯಗಳಲ್ಲಿ ನೆಲೆಸಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಬಯೋಮೆಟ್ರಿಕ್ ಹಾಜರಾತಿಯನ್ನು ಈ ಕಲ್ಯಾಣ ಕೇಂದ್ರದಲ್ಲಿ ಉಸ್ತುವಾರಿ ಮಾಡಲಾಗುತ್ತದೆ. ವಿದ್ಯಾರ್ಥಿ ನಿಲಯಗಳಲ್ಲಿ ಸಮಸ್ಯೆಗಳಿದ್ದರೂ ಕೂಡ ಕರೆ ಮಾಡಬಹುದಾಗಿದೆ.












Click it and Unblock the Notifications