ಬಳ್ಳಾರಿ ರಸ್ತೆಯ ವಾಹನ ದಟ್ಟಣೆಗೆ ಸಿಗಲಿದೆ ಮುಕ್ತಿ!
ನೀವು ನಿತ್ಯವೂ ಬಳ್ಳಾರಿ ರಸ್ತೆ ಓಡಾಡುತ್ತೀರಾ? ಮೇಖ್ರಿ ವೃತ್ತದ ಆ ಟ್ರಾಫಿಕ್ ಜಾಮ್‌ನಿಂದ ಬಸವಳಿದಿದ್ದರೆ ಇದೋ ಇಲ್ಲಿಗೆ ನಿಮಗೊಂದು ಸಂತಸದ ಸುದ್ದಿ. ಅದೆಂದರೆ ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಆ ರಸ್ತೆಯ ಅಗಲೀಕರಣ ಕಾರ್ಯ.
ಸಂಚಾರ ದಟ್ಟಣೆ ತಪ್ಪಿಸುವ ಉದ್ದೇಶದಿಂದ ಬೆಂಗಳೂರು ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಳ್ಳಾರಿ ರಸ್ತೆಯ ಅಗಲೀಕರಣಕ್ಕೆ ಕೈಗೊಂಡಿವ ಕ್ರಮಗಳನ್ನು ವಿವರಿಸಿ ರಾಜ್ಯ ಸರ್ಕಾರ ಮಂಗಳವಾರ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದೆ.
ಬಳ್ಳಾರಿ ರಸ್ತೆ ಅಗಲೀಕರಣ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಮರ್ಪಣ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಸರ್ಕಾರದ ವಕೀಲರು, ಅರ್ಜಿ ಸಂಬಂಧ 2022ರ ಸೆ.21ರಂದು ಹೈಕೋರ್ಟ್ ನೀಡಿದ ನಿರ್ದೇಶನ್ವಯ ಬಳ್ಳಾರಿ ರಸ್ತೆಯಲ್ಲಿ ಎಲ್ಲೆಲ್ಲಿ ಹಾಗೂ ಎಷ್ಟು ವಿಸ್ತೀರ್ಣದಷ್ಟು ರಸ್ತೆ ಅಗಲೀಕರಣ ಮಾಡಲು ಉದ್ದೇಶಿಲಾಗಿದೆ ಎಂಬುದನ್ನು ವಿವರಿಸಿ ರಾಜ್ಯ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಸಲ್ಲಿಸಿರುವ ಪ್ರಮಾಣ ಪತ್ರವನ್ನು ನ್ಯಾಯಪೀಠಕ್ಕೆ ಒದಗಿಸಿದರು.

ಪ್ರಮಾಣ ಪತ್ರದ ಸಾರಾಂಶ: ಬಳ್ಳಾರಿ ರಸ್ತೆಯಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಸೆ.16ರಂದು ನಡೆದ ಮುಖ್ಯಮಂತ್ರಿ ನೇತೃತ್ವದ ಉನ್ನತ ಮಟ್ಟದ ಸಮಿತಿಯಲ್ಲಿ ತೀರ್ಮಾನಿಸಲಾಗಿದೆ. ಅದರಂತೆ ಬಳ್ಳಾರಿ ರಸ್ತೆಯಲ್ಲಿ ಕಾವೇರಿ ಜಂಕ್ಷನ್‌ನಿಂದ ಮೇಕ್ರಿ ವೃತ್ತದವರೆಗೆ ಲಭ್ಯವಿರುವ ಭೂಮಿ ಬಳಸಿ ರಸ್ತೆ ಅಗಲೀಕರಣ ಮಾಡಲು ಉದ್ದೇಶಿಸಲಾಗಿದೆ. ಅಂದರೆ ಮೇಖ್ರಿ ವೃತ್ತದಿಂದ ಗಾಯತ್ರಿ ವಿಹಾರ (ಅರಮನೆ ಮೈದಾನ ಗೇಟ್-4) ವರೆಗೆ 6 ಲೇನ್ ರಸ್ತೆಯಿದೆ.
ಗಾಯತ್ರಿ ವಿಹಾರದಿಂದ ಕಾವೇರಿ ಚಿತ್ರಮಂದಿರದವರೆಗೂ ಮೂರು ಲೇನಿಂದ ಎರಡು ಲೇನ್ ರಸ್ತೆಯಾಗಲಿದೆ. ಅರಮನೆ ರಸ್ತೆಯ ನಾಲ್ಕನೇ ದ್ವಾರದಿಂದ ಕಾವೇರಿ ಚಿತ್ರಮಂದಿರದವರೆಗೆ ಎರಡು ಲೇನ್ ರಸ್ತೆಯನ್ನು ಮೂರು ಲೇನ್ ರಸ್ತೆಯಾಗಿ ಅಗಲೀಕರಣ ಮಾಡಬೇಕಿದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.
ಅದರಂತೆ ಮೇಕ್ರಿ ವೃತ್ತದಿಂದ ಅರಮನೆ ರಸ್ತೆಯ ಗಾಯತ್ರಿ ವಿಹಾರ್ ಪ್ರದೇಶದವರೆಗೆ ಬಲಭಾಗದಲ್ಲಿ11.50 ಮೀಟರ್ ಮತ್ತು ಎರಡು ಭಾಗದಲ್ಲಿ 11.20ವಿಸ್ತೀರ್ಣದ ರಸ್ತೆಯಿದೆ. ಗಾಯತ್ರಿ ವಿಹಾರ್ ಪ್ರವೇಶದಿಂದ ಕಾವೇರಿ ಜಂಕ್ಷನ್‌ವರೆಗೆ 630 ಮೀಟರ್‌ಯಿದೆ. ಇಲ್ಲಿ ಬಲಗಡೆ 7.0 ಮೀಟರ್ ಮತ್ತು ಎಡಗಡೆ 7.50 ಮೀಟರ್ ರಸ್ತೆಯಿದೆ. ಇದೀಗ ಎಡಗಡೆ 7 ಮೀಟರ್‌ನಿಂದ 9.50 ಮೀಟರ್ ಮತ್ತು ಬಲಗಡೆ 7.50 ಮೀಟರ್‌ನಿಂದ 9.5 ಮೀಟರ್‌ವರೆಗೆ ರಸ್ತೆ ಅಗಲೀಕರಣ ಮಾಡಲು ಉದ್ದೇಶಿಸಲಾಗಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಹಾಗೆಯೇ, ಮೇಕ್ರಿ ವೃತ್ತದಿಂದ ಕಂಟೋನ್ಮೆಂಟ್ ಮತ್ತು ಜಯ ಮಹಲ್ ರಸ್ತೆಯು ಒಟ್ಟು 2,178 ಮೀಟರ್ ಉದ್ದವಿದೆ. ಜಯ ಮಹಲ್ ರಸ್ತೆಯು ಮೇಕ್ರಿ ವೃತ್ತದಿಂದ ಆರಂಭವಾಗಿ, ಜಯಮಹಲ್ ಹೋಟೆಲ್ ಬಳಿ ಕೊನೆಯಾಗುತ್ತದೆ. ಮಾರ್ಗವು 2.20 ಕಿ.ಮೀ ಉದ್ದವಿದೆ. ಇಲ್ಲಿ ಸಾಗಣೆ ದಾರಿ ಏಕರೂಪವಾಗಿಲ್ಲ. ಪದಚಾರಿ ಮಾರ್ಗದ ಅಗಲದಲ್ಲೂ ವ್ಯತ್ಯಾಸವಿದೆ. ರಸ್ತೆ ವಿಭಜಕವು ಸಹ ಸರಿಯಾಗಿ ರಸ್ತೆ ಮಧ್ಯಭಾಗದಲ್ಲಿ ಇಲ್ಲ ಎಂದು ವಿವರಿಸಲಾಗಿದೆ.
ಇದರಿಂದ ಈ ರಸ್ತೆಯನ್ನು ನಾಲ್ಕು ಪಥದ ರಸ್ತೆಯಾಗಿ ಮಾಡಲಾಗುವುದು. ಮೇಕ್ರಿ ವೃತ್ತದಿಂದ ಕಂಟೋನ್ಮೆಟ್ ರಸ್ತೆಯ ಎಡಭಾಗವನ್ನು 7 ಮೀಟರ್‌ನಿಂದ 7.5ಕ್ಕೆ ಮತ್ತು ಬಲಭಾಗವನ್ನು 5 ಮೀಟರ್‌ನಿಂದ 7.5 ಮೀಟರ್‌ಗೆ ಅಗಲೀಕರಣ ಮಾಡಲು ಉದ್ದೇಶಿಲಾಗಿದೆ. ನಾಲ್ಕು ಪಥ ರಸ್ತೆಯ ಮಾಡುವ ಕಾರ್ಯ ಈಗಾಗಲೇ ಚಾಲ್ತಿಯಲ್ಲಿದೆ ಎಂದು ತಿಳಿಸಲಾಗಿದೆ.
ಬಿಬಿಎಂಪಿ ನೆರವು ಅಗತ್ಯ: ಆ ಪ್ರಮಾಣ ಪತ್ರವನ್ನು ದಾಖಲಿಸಿಕೊಂಡ ನ್ಯಾಯಪೀಠ ಅಗಲೀಕರಣಕ್ಕೆ ಉದ್ದೇಶಿಸಿರುವ ರಸ್ತೆಯು ಬಿಬಿಎಂಪಿ ವ್ಯಾಪ್ತಿಗೆ ಬರಲಿದೆ. ರಸ್ತೆ ಅಗಲೀಕರಣ ಮಾಡಲು ಬಿಬಿಎಂಪಿಯ ಸಹಕಾರ ಹಾಗೂ ನೆರವು ಸರ್ಕಾರಕ್ಕೆ ಅಗತ್ಯವಾಗಿದೆ. ಆದ್ದರಿಂದ ಬಿಬಿಎಂಪಿ ಯಾವ ರೀತಿಯಲ್ಲಿ ಸಹಕಾರ ಹಾಗೂ ನೆರವು ನೀಡಲಿದೆ ಎಂಬುದನ್ನು ವಿವರಿಸಿ ಪಾಲಿಕೆ ಆಯುಕ್ತರು ಮುಂದಿನ ಎರಡು ವಾರದಲ್ಲಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.












Click it and Unblock the Notifications