ಬೆಳ್ಳಂದೂರು ಕೆರೆಯಲ್ಲಿ ಬೆಂಕಿ: ಜ.24ರಂದು ಎನ್ ಜಿಟಿ ವಿಚಾರಣೆ
ಬೆಂಗಳೂರು, ಜನವರಿ 23 : ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಖುದ್ದು ಹಾಜರಾಗುವಂತೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಅವರಿಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಸೂಚನೆ ನೀಡಿದೆ.
ಜ.24 ರಂದು ವಿಚಾರಣೆ ನಡೆಯಲಿದೆ. ಪ್ರಸ್ತುತ ಕೆರೆಯಲ್ಲಿ ನಡೆದಿರುವ ಘಟನೆಗಳನ್ನು ರಾಜ್ಯಭಾ ಸದಸ್ಯ ಕುಪೇಂದ್ರ ರೆಡ್ಡಿ ಪರ ವಕೀಲರು ಎನ್ ಜಿಟಿ ಗಮನಕ್ಕೆ ತಂದಿದ್ದು, ಮಹೇಂದ್ರ ಜೈನ್ ಹಾಜರಿಗೆ ಮಂಡಳಿ ಸೂಚಿಸಿದೆ. ಇನ್ನೊಂದೆಡೆ ನಮ್ಮ ಬೆಂಗಳೂರು ಪ್ರತಿಷ್ಠಾನದ ಅರ್ಜಿಯು ಸಹ ಜನವರಿ 29 ರಂದು ವಿಚಾರಣೆಗೆ ಬರಲಿದೆ.
ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದ್ದರೂ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಎನ್ ಜಿಟಿ ಆಕ್ರೋಶ ವ್ಯಕ್ತಪಡಿಸಿದೆ. ಬೆಳ್ಳಂದೂರು ಕೆರೆಯಲ್ಲಿ ಫೆಬ್ರವರಿ 2015 ರಲ್ಲಿ ಮೊದಲ ಬಾರಿಗೆ ಬೆಂಕಿ ಕಾಣಿಸಿಕೊಂಡಿತ್ತು.

2017 ರಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿತು. ಆದರೂ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಮೂಲ ಅರ್ಜಿದಾರ ಡಿ. ಕುಪೇಂದ್ರ ರೆಡ್ಡಿ ಪರ ವಕೀಲ ಪಿ. ರಾಮಪ್ರಸಾದ್ ದೂರಿದ್ದಾರೆ.
ದುಷ್ಕರ್ಮಿಗಳು ಬೆಂಕಿ ಇಡುತ್ತಾರೆ ಎಂಬ ಅಂಶ ಗಮನಕ್ಕೆ ಬಂದಿದ್ದರೆ, ಯಾರೂ ಅಕ್ರಮ ಪ್ರವೇಶ ಮಾಡದಂತೆ ಇಡೀ ಕೆರೆಗೆ ಬೇಲಿಯನ್ನು ನಿರ್ಮಿಸುವ ಕಾರ್ಯವನ್ನಾದರೂ ಮಾಡಬೇಕಿತ್ತು. ಸರ್ಕಾರಗಳು ಜನರ ಜೀವದ ಜೊತೆ ಚೆಲ್ಲಾಟ ಆಡಬಾರದು ಎಂದು ತಿಳಿಸಿದ ಪೀಠ, ಈ ಬಗ್ಗೆ ಯಾವುದೇ ರೀತಿಯ ಬೇಜವಾಬ್ದಾರಿ ಕಾರಣ ನೀಡಬಾರದು ಎಂದು ತಾಕೀತು ಮಾಡಿದರು.












Click it and Unblock the Notifications