BDCC Bank Election: ಬಿಡಿಸಿಸಿ ಬ್ಯಾಂಕ್ ಚುನಾವಣೆ: 15 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ
ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಒಟ್ಟು 18 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ನೇರವಾಗಿ ಗೆಲುವು ಸಾಧಿಸಿದ್ದಾರೆ.
ಬೆಂಗಳೂರು ಜಿಲ್ಲಾ ಕೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಒಟ್ಟು 18 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ನೇರವಾಗಿ ಗೆಲುವು ಸಾಧಿಸಿದ್ದಾರೆ. ಬಿಡಿಸಿಸಿ ರಾಜಧಾನಿಯಲ್ಲಿ ಗಮನ ಸೆಳೆಯುವಂತಹ ಕೋ-ಆಪರೇಟಿವ್ ಬ್ಯಾಂಕ್ ಆಗಿದ್ದು, ಹಲವು ಏಳು ಬೀಳುಗಳನ್ನು ಕಂಡಿದೆ. ಬೆಂಗಳೂರು ಉತ್ತರ ಜಿಲ್ಲೆ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆ ಮತ್ತು ಬೆಂಗಳೂರು ನಗರ ಜಿಲ್ಲೆಯ 36 ವಿಧಾನಸಭಾ ಕ್ಷೇತ್ರಗಳನ್ನು ಈ ಬ್ಯಾಂಕ್ ಹೊಂದಿದೆ ಎಂದು ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಬೆಂಗಳೂರು ಜಿಲ್ಲಾ ಕೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಆವರಣದಲ್ಲಿ ಶಾಸಕರಾದ ಮಾಗಡಿ ಬಾಲಕೃಷ್ಣ, ಶರತ್ ಬಚ್ಚೇಗೌಡ, ನೆಲಮಂಗಲ ಶ್ರೀನಿವಾಸ್ ಹಾಗೂ ಎಂಎಲ್‌ಸಿ ಎಸ್ ರವಿ ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರೊಂದಿಗೆ ಡಿ.ಕೆ.ಸುರೇಶ್ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದ್ದಾರೆ. ಹಗಲು ರಾತ್ರಿಯೆನ್ನದೆ ಈ ಚುನಾವಣೆಯಲ್ಲಿ ಸಹಕಾರ ನೀಡಿದಂತಹ ಎಲ್ಲ ಸಹಕಾರಿ ಬಂಧುಗಳಿಗೆ, ತಾಲೂಕಿನ ಪಕ್ಷದ ಹಿರಿಯ ಮುಖಂಡರಿಗೆ, ಶಾಸಕರಿಗೆ, ಮಂತ್ರಿಗಳಿಗೆ ಹಾಗೂ ಪರಾಜಿತ ಅಭ್ಯರ್ಥಿಗಳಿಗೆ, ಅಧಿಕಾರಿಗಳಿಗೆ ಹಾಗೂ ಮತದಾರರಿಗೆ ನನ್ನ ಧನ್ಯವಾದಗಳು ಎಂದಿದ್ದಾರೆ ಡಿ.ಕೆ.ಸುರೇಶ್.

ಈ ಬಿಡಿಸಿಸಿ ಚುನಾವಣೆಯಲ್ಲಿ ಸಹೋದರ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ, ಸಚಿವರಾದ ರಾಮಲಿಂಗಾರೆಡ್ಡಿಯವರು, ಕೆ.ಹೆಚ್ ಮುನಿಯಪ್ಪ, ಕೃಷ್ಣಬೈರೇಗೌಡರು ಹಾಗೂ ಶಾಸಕರಾದ ಶಿವಣ್ಣ, ಶರತ್ ಬಚ್ಚೇಗೌಡ, ಹೆಚ್.ಸಿ ಬಾಲಕೃಷ್ಣ, ಸಿ.ಪಿ.ಯೋಗೇಶ್ವರ್, ಶಾಸಕ ಇಕ್ಬಾಲ್ ಹುಸೇನ್, ನೆಲಮಂಗಲದ ಶ್ರೀನಿವಾಸ್, ದೊಡ್ಡಬಳ್ಳಾಪುರದ ವೆಂಕಟಪ್ಪನವರು, ಆರ್.ಕೆ ಗಣೇಶ್ ಅವರು ಬೆಂಗಳೂರಿನ ಎಲ್ಲ ಪ್ರಮುಖ ನಾಯಕರ ಸಹಕಾರದಿಂದ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ.
ಯಾವ ಕ್ಷೇತ್ರಗಳಲ್ಲಿ ಯಾರಿಗೆ ಗೆಲುವು?
ಬ್ಯಾಂಕ್ ಇಂದು ಉತ್ತಮವಾದ ಸ್ಥಿತಿಯಲ್ಲಿ ಆಡಳಿತ ನಡೆಸಿಕೊಂಡು ಬರುತ್ತಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದ 2 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದಿದೆ. ಚನ್ನಪಟ್ಟಣದಿಂದ ಲಿಂಗೇಶ್ ಕುಮಾರ್, ಕನಕಪುರದಲ್ಲಿ 2 ಕ್ಷೇತ್ರದಲ್ಲಿ ವಿಧಾನಪರಿಷತ್ ಸದಸ್ಯರಾದ ರವಿ ಹಾಗೂ ರಮೇಶ್ ಅವರು ಆಯ್ಕೆಯಾಗಿದ್ದಾರೆ. ಮಾಗಡಿ ವಿಧಾನಸಭಾ ಕ್ಷೇತ್ರದಿಂದ 2 ಕ್ಷೇತ್ರಗಳಲ್ಲಿ ಅಶೋಕ್ ಹಾಗೂ ಮಂಜು ಅವರು ಗೆದ್ದಿದ್ದಾರೆ. ಎಸ್.ಟಿ ಸೋಮಶೇಖರ್ ಅವರ ಸಹಕಾರದಿಂದ ಅವರ ಕ್ಷೇತ್ರದಲ್ಲೂ ಗೆದ್ದಿದ್ದೇವೆ ಎಂದು ವಿವರಿಸಿದ್ದಾರೆ.
ದೇವನಹಳ್ಳಿಯಲ್ಲಿ ಎಂ.ರಮೇಶ್ ಹಾಗೂ ದೊಡ್ಡಬಳ್ಳಾಪುರದಲ್ಲಿ ಕೆ.ರಮೇಶ್ ಗೆದ್ದಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದಿಂದ 1 ಕ್ಷೇತ್ರದಲ್ಲಿ ಹಾಗೂ ಹೆಚ್.ಎಂ ರೇವಣ್ಣ ಅವರ ಸಹಕಾರದಿಂದ ಇತರೆ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ. ಆನೇಕಲ್‌ನಲ್ಲಿ ಶಾಸಕರಾದ ಶಿವಣ್ಣ ಹಾಗೂ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಭಾರ್ಗವ್ ಅವರು ಗೆದ್ದಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದಿಂದ ರಾಜಕುಮಾರ್ ಅವರು ಗೆಲ್ಲುವ ಮೂಲಕ ಒಟ್ಟು 15 ಕ್ಷೇತ್ರಗಳಲ್ಲಿ ನೇರವಾಗಿ ಕಾಂಗ್ರೆಸ್ ಗೆದ್ದಿದೆ. ಇನ್ನುಳಿದಂತೆ ನೆಲಮಂಗಲ ಮತ್ತು ಸೋಲೂರಿನಲ್ಲಿ ಎರಡು ಕಡೆ ಜೆಡಿಎಸ್ ಅಭ್ಯರ್ಥಿಗಳು ಬಿಜೆಪಿ ಬೆಂಬಲದಿಂದ ಗೆದ್ದಿದ್ದಾರೆ.












Click it and Unblock the Notifications